

ತೆಲಂಗಾಣ: ಸರ್ಕಾರಿ ಶಾಲೆಯೊಂದರಲ್ಲಿ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕನೊಬ್ಬ ಯಾರಿಗೂ ಅಂಜದೆ, ಧೈರ್ಯವಾಗಿ ಶಾಲೆಯ ಆವರಣದಲ್ಲೇ ಮದ್ಯ ಸೇವಿಸಿದ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ವರದಿಯಾಗಿದೆ. ಸ್ಕೂಲ್ನೊಳಗೆ ಮದ್ಯಪಾನ ಮಾಡಿದ ಆರೋಪದಡಿ ಆತನನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಲಾಗಿದೆ. ಘಟನೆಯ ಪೂರ ವಿವರ ಹೀಗಿದೆ.
ಜಿಲ್ಲಾ ಶಿಕ್ಷಣಾಧಿಕಾರಿಗಳ ಆದೇಶದ ಪ್ರಕಾರ ಆರೋಪಿ ಶಿಕ್ಷಕ ಎಸ್. ರಾಜು ಫೆ.29ರಂದು ಮಧ್ಯಾಹ್ನದ ಊಟ ಬಡಿಸುವ ವೇಳೆ ಸ್ಥಳೀಯ ಗ್ರಾಮಸ್ಥರೊಬ್ಬರೊಂದಿಗೆ ಶಾಲೆಯೊಳಗೆ ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದಾನೆ. ಬೆಳ್ಳಂಪಲ್ಲಿ ಮಂಡಲದ ದುಗ್ನೆಪಲ್ಲಿ ಗ್ರಾಮದ ಶಾಲೆಯಲ್ಲಿ ಮದ್ಯ ಸೇವಿಸಿ ಸಿಕ್ಕಿಬಿದ್ದ ರಾಜು ಎಂಬಾತನನ್ನು ಕಂಡ ಸ್ಥಳೀಯರು ಕೂಡಲೇ ವಿಡಿಯೋ ಮಾಡಿಕೊಂಡಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದೃಶ್ಯ ಪರಿಶೀಲಿಸಿದ ಜಿಲ್ಲಾ ಶಿಕ್ಷಣಾಧಿಕಾರಿಗಳು ಶಿಕ್ಷಕ ರಾಜುನನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಿದೆ. ಈ ಬಗ್ಗೆ ವಿಚಾರಣೆ ಕೂಡ ಆರಂಭವಾಗಿದೆ. ಇದೇ ರೀತಿಯ ಘಟನೆ ಇತ್ತೀಚೆಗೆ ಮಸ್ತೂರಿ ಬ್ಲಾಕ್‌ನ ಮಚ್ಚಾ ಜನಪದ ಪ್ರಾಥಮಿಕ ಶಾಲೆಯಲ್ಲಿಯೂ ವರದಿಯಾಗಿದೆ.
ಮಹಿಳಾ ಪ್ರಾಂಶುಪಾಲರ ಎದುರೇ ಶಿಕ್ಷಕ ಕೇವತ್ ಯಾವುದೇ ಮುಜುಗರವಿಲ್ಲದೆ ಮದ್ಯಪಾನ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದೃಶ್ಯಾವಳಿಗಳನ್ನು ಪರಿಶೀಲಿಸಿದ ಜಿಲ್ಲಾ ಶಿಕ್ಷಣ ಅಧಿಕಾರಿ (DEO) ಆತನನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿದರು,(ಏಜೆನ್ಸೀಸ್).