

ಶಿಕಾರಿಪುರ: ಸರ್ಕಾರಿ ಶಾಲೆ ಬಗ್ಗೆ ಅಸಡ್ಡೆ ಭಾವನೆವನ್ನು ಪಾಲಕರು ಮೊದಲು ಬಿಡಬೇಕು. ಇಲ್ಲಿ ಗುಣಮಟ್ಟದ ವಿದ್ಯಾಭ್ಯಾಸ ದೊರೆಯುತ್ತಿದ್ದು, ಖಾಸಗಿ ಶಾಲೆಗಳ ಮಕ್ಕಳಿಗೆ ಪೈಪೋಟಿ ನೀಡುತ್ತಿದ್ದಾರೆ ಎಂದು ಬಿಇಒ ಲೋಕೇಶಪ್ಪ ಹೇಳಿದರು.
ಸೋಮವಾರ ಸಿದ್ದಲಿಂಗೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ದಾಖಲಾದ 32 ಮಕ್ಕಳಿಗೆ ಬಾಂಡ್ ವಿತರಿಸಿ ಮಾತನಾಡಿದರು.
ಈ ಶಾಲೆಯ ಶಿಕ್ಷಕರು ತಾವೇ ಹಣ ಹಾಕಿ ಹೊಸದಾಗಿ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಒಂದು ಸಾವಿರ ರೂ. ಬಾಂಡ್ ನೀಡುತ್ತಿರುವುದು ಅವರಿಗಿರುವ ಸಾಮಾಜಿಕ ಕಳಕಳಿ ತೋರಿಸುತ್ತದೆ. ಇವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕರೆತರಲು ಇವರು ಮಾಡಿದ ಪ್ರಯತ್ನದ ಫಲವಾಗಿ ಒಂದನೆಯ ತರಗತಿಗೆ 32 ಮಕ್ಕಳು ದಾಖಲಾಗಿದ್ದಾರೆ. ಇಂತಹ ಪ್ರಯತ್ನವನ್ನು ಉಳಿದ ಶಾಲೆಯವರೂ ಮಾಡಬಹುದು ಎಂದು ಹೇಳಿದರು.
ಪುರಸಭಾ ಸದಸ್ಯ ರೇಣುಕಾ ಸ್ವಾಮಿ ಮಾತನಾಡಿ, ವಿದ್ಯಾಭ್ಯಾಸ, ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಸರ್ಕಾರಿ ಶಾಲೆ ಮಕ್ಕಳು ಮುಂಚೂಣಿಯಲ್ಲಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದಿದವರು ವಿವಿದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕ ಎಂ.ಕೆ.ಜಬೀವುಲ್ಲಾ, ಎಸ್‌ಡಿಎಂಸಿ ಅಧ್ಯಕ್ಷ ಸಲೀಂ, ಎಸ್‌ಡಿಎಂಸಿ ಸದಸ್ಯರು, ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.