ಅತಿವೃಷ್ಟಿಗೆ ಸರ್ಕಾರ ಸ್ಪಂದನೆ

28 koppa congres
ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಅವರಿಂದ ಪಕ್ಷದ ಭಾವುಟ ಸ್ವೀಕರಿಸುವ ಮೂಲಕ ಕುಕ್ಕುಡಿಗೆ ರವೀಂದ್ರ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು. ಸದಾಶಿವ, ವಿಶ್ವನಾಥ್ ಶೆಟ್ಟಿ, ನುಗ್ಗಿ ಮಂಜುನಾಥ್ ಇತರರಿದ್ದರು.
Published on

ಕೊಪ್ಪ: ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಬೇಕು. ಪಕ್ಷ ಕಟ್ಟುವ ಕೆಲಸದಲ್ಲಿ ಯಾವುದೇ ರಾಜಿ ಇರಬಾರದು ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ಬಾಳಗಡಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಕ್ಷದ ಹಿರಿಯ, ಕಿರಿಯರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ನಾನು ಕಳಂಕ ರಹಿತವಾಗಿ ಸೇವೆ ಸಲ್ಲಿಸಿದ್ದೇನೆ. ಪಕ್ಷದ ಕಾರ್ಯಕರ್ತರು ಎಲ್ಲಿಯೂ ಸಹ ತಲೆತಗ್ಗಿಸುವಂತಹ ಕೆಲಸ ಮಾಡಿಲ್ಲ. ಕುಕ್ಕುಡಿಗೆ ರವೀಂದ್ರ ಅವರಿಗೆ ಅಧ್ಯಕ್ಷರನ್ನಾಗಿ ಮಾಡುವುದಾಗಿ ಈ ಹಿಂದೆ ಚುನಾವಣೆಯಲ್ಲಿ ಮಾತು ಕೊಟ್ಟಿದ್ದೆ. ಈಗ ಉಳಿಸಿಕೊಂಡಿದ್ದೇನೆ ಎಂದರು.
ಮುಂದಿನ ಚುನಾವಣೆ ಗೆಲ್ಲುವುದು ಮುಖ್ಯ ಗುರಿ. ಕ್ಷೇತ್ರದಲ್ಲಿ ಅತಿವೃಷ್ಟಿಯಾಗಿದೆ. ವಿಧಾನಸಭೆಯಲ್ಲಿ ಕೂಡ ವಿಷಯ ಪ್ರಸ್ತಾಪ ಮಾಡಿದ್ದೇನೆ. ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಸರ್ಕಾರ ಅತಿವೃಷ್ಟಿಗೆ ಸ್ಪಂದಿಸುತ್ತಿದೆ ಎಂದು ತಿಳಿಸಿದರು.
ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿಷಯದಲ್ಲಿ ಮೂಡಿರುವ ಗೊಂದಲವನ್ನು ಸರಿಪಡಿಸುವ ಜವಾಬ್ದಾರಿ ಶಾಸಕರ ಮೇಲಿದೆ. ಮುಂದಿನ ದಿನದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಕುಕ್ಕುಡಿಗೆ ರವೀಂದ್ರ ಅವರಿಗೆ ನಮ್ಮ ಸಂಪೂರ್ಣ ಸಹಕಾರವಿದೆ. ಮುಂದಿನ ದಿನದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ಉತ್ತಮವಾಗಿ ಸಂಘಟನೆ ಮಾಡಬೇಕು. ಗೊಂದಲಗಳನ್ನು ಬಿಟ್ಟು ಪಕ್ಷ ಕಟ್ಟುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ದೇಶದಲ್ಲಿ ರೈತ, ಶೋಷಿತರು, ದಲಿತರು, ಹೆಣ್ಣು ಮಕ್ಕಳು ಆತಂಕದಿದ್ದಾರೆ. ಈ ಸಾಲಿಗೆ ವಿದ್ಯಾರ್ಥಿ ಸಮುದಾಯ ಸೇರುತ್ತಿದೆ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಮಳೆ ನಿಂತ ಕೂಡಲೇ ಕ್ಷೇತ್ರದಲ್ಲಿ ರಾಜೇಗೌಡರ ಅಭಿವೃದ್ಧಿ ಯಾತ್ರೆ ನಡೆಯಲಿದೆ. ಹಳ್ಳಿಗಳ ರಸ್ತೆ ಅಭವೃದ್ಧಿ ಹೊಂದುತ್ತದೆ ಎಂದರು.
ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಮಾತನಾಡಿ, ಕುಕ್ಕುಡಿಗೆ ರವೀಂದ್ರ ಅವರು ಕಾರ್ಯಕರ್ತರ ಧ್ವನಿಯಾಗಬೇಕು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೊಪ್ಪ ತಾಲೂಕಿನಲ್ಲಿ 4 ಸಾವಿರ ಮತಗಳ ಹಿನ್ನಡೆಯಾಗಿದೆ. ಆದ್ದರಿಂದ ಎಲ್ಲ ಜಾತಿ, ಧರ್ಮದವರನ್ನು ಸೇರಿಸಿಕೊಂಡು ಉತ್ತಮವಾಗಿ ಸಂಘಟನೆ ಮಾಡಬೇಕು ಎಂದು ಹೇಳಿದರು.
ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಮಾತನಾಡಿ, ಗೋವಿಂದೇಗೌಡರ ಸಜ್ಜನಿಕೆಯ ರಾಜಕಾರಣವನ್ನು ನೋಡಿ ಸಂಘಟನೆ ಮಾಡಿದ್ದೇನೆ. ಮುಂದಿನ ದಿನದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೇನೆ. ಬೂತ್ ಮಟ್ಟದಲ್ಲಿ ಮತ್ತೆ ಸಂಘಟಿಸಿ ಪಕ್ಷ ಕಟ್ಟಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್, ಕೆಪಿಸಿಸಿ ಸದಸ್ಯ ಸದಾಶಿವ, ವಿಶ್ವನಾಥ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ನುಗ್ಗಿ ಮಂಜುನಾಥ್, ಅಸಗೋಡು ನಾಗೇಶ್, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net