

ಬೆಂಗಳೂರು: ಕೇತಗಾನಹಳ್ಳಿ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳ ಒತ್ತುವರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ನೀಡಲಾಗಿದ ಮಧ್ಯಂತರ ತಡೆ ಏಕಪಕ್ಷೀಯ ಆದೇಶವಾಗಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಇ.ಎಸ್ ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು ಈ ಪ್ರಕರಣದಲ್ಲಿ ಸರ್ಕಾರದ ವಾದ ಆಲಿಸದೆ ಮಧ್ಯಂತರ ಆದೇಶ ನೀಡಲಾಗಿದೆ. ಎಸ್‌ಐಟಿ ರಚನೆಗೆ ತಡೆ ನೀಡಿರುವ ಬಗ್ಗೆ ನಮಗೆ ಆಕ್ಷೇಪವಿದೆ ಇದನ್ನು ಮರುಪರಿಶೀಲನೆಗೊಳಪಡಿಸಿ, ಸರ್ಕಾರದ ವಾದವನ್ನು ಆಲಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ನಿಮ್ಮ ಮನವಿಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಜೂ.26ಕ್ಕೆ ಮುಂದೂಡಿತು. ಮಧ್ಯಂತರ ಆದೇಶ ಮುಂದುವರಿದಿದೆ.