

ಬೆಂಗಳೂರು: ಸರ್ಕಾರಿ ಭೂಮಿಯನ್ನು ಗುತ್ತಿಗೆ ಪಡೆದಿರುವ ಸಂಸ್ಥೆಗಳು ಅಲ್ಲಿ ನಡೆಸುತ್ತಿರುವ ಚಟುವಟಿಕೆಗಳ ಸರ್ವೆ ಶುರುವಾಗಿದೆ. ಶಿಕ್ಷಣ, ಆರೋಗ್ಯ, ಧಾರ್ವಿುಕ, ಕೃಷಿ ಸೇರಿ ಕೆಲವು ಕ್ಷೇತ್ರಗಳಿಗೆ ಸರ್ಕಾರ ಗುತ್ತಿಗೆ ಮೇಲೆ ತನ್ನ ಜಾಗವನ್ನು ನೀಡಿದ್ದು, ಕಾಲಕಾಲಕ್ಕೆ ಗುತ್ತಿಗೆಯನ್ನು ನವೀಕರಣ ಮಾಡಿಕೊಂಡು ಬಂದಿದೆ. ಇದೀಗ ಗುತ್ತಿಗೆಯಲ್ಲಿರುವವರಿಗೇ ಷರತ್ತು ಬದ್ಧವಾಗಿಯೇ ಆ ಜಾಗವನ್ನು ಮಾರಾಟ ಮಾಡಲು ನಿರ್ಧರಿಸಿದೆ. ಲೀಸ್ ನೀಡುವುದರಿಂದ ಜಾಗ ಕೊಟ್ಟಿದ್ದು ಬಿಟ್ಟರೆ ಸರ್ಕಾರಕ್ಕೆ ಲಾಭವಾಗದು. ಲೀಸ್ ಅವಧಿ ಮಾತ್ರ ಮುಂದುವರಿಯುತ್ತಲೇ ಇದೆ. ಒಮ್ಮೆ ಮಾರಾಟ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಆದಾಯ ಬರಲಿದೆ ಎಂಬ ನಿರೀಕ್ಷೆ ಅಧಿಕಾರಿಗಳದ್ದು.
ಕಂದಾಯ ಇಲಾಖೆಯಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿ ಬರುವ ಸ್ಥಳೀಯ ಸಂಸ್ಥೆಗಳೂ ತಮ್ಮ ವಿವೇಚನೆ ಬಳಸಿ ಲೀಸ್ ಮೇಲೆ ಜಾಗಗಳನ್ನು ನೀಡಿವೆ. ಅಲ್ಲಿ ಶಿಕ್ಷಣ, ಸಂಸ್ಕೃತಿ, ಆರೋಗ್ಯ ಸಂಸ್ಥೆಗಳು ಚಟುವಟಿಕೆ ನಡೆಸುತ್ತಿವೆ. ಕರೊನಾ ನಿರ್ವಹಣೆಗೆ ವೆಚ್ಚ ತೂಗಿಸಲು ಬೆಂಗಳೂರಿನ ಬಿಡಿಎ ವ್ಯಾಪ್ತಿಯ ಅಕ್ರಮ ಮನೆಗಳನ್ನು ಸಕ್ರಮ ಮಾಡಿಕೊಡಲು ಸರ್ಕಾರದ ಸುಗ್ರೀವಾಜ್ಞೆ ಹೊರಡಿಸಿತ್ತು. ಅದೇ ಪ್ರಕಾರ ರಾಜ್ಯದ ಇತರ ಕಡೆಗಳಲ್ಲೂ ಅಕ್ರಮ ಸಕ್ರಮ ಮಾಡಲು ಬಯಸಿತ್ತು. ಅದೇ ಪ್ರಕಾರ ಈಗ ಲೀಸ್ ಜಾಗವನ್ನು ಮಾರಾಟ ಮಾಡಲು ಸರ್ಕಾರ ಮುಂದಾಗಿದೆ. ಸರ್ಕಾರದ ತೀರ್ವನದ ಬಳಿಕ ಅಧಿಕಾರಿಗಳು ಸಭೆಗಳನ್ನು ನಡೆಸಿದ್ದು, ಮಾರ್ಗಸೂಚಿ ಹೊರತರಲು ಸಜ್ಜಾಗುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಗುತ್ತಿಗೆ ಪಡೆದುಕೊಂಡವರು ಯಾವ ಉದ್ದೇಶಕ್ಕೆ ಜಾಗ ಪಡೆದಿದ್ದಾರೋ ಅದೇ ಉದ್ದೇಶಕ್ಕೆ ಬಳಸಿದ್ದರೆ ಆ ಪ್ರದೇಶಕ್ಕೆ ಸರ್ಕಾರ ನಿಗದಿ ಮಾಡಿದ ಮಾರ್ಗಸೂಚಿ ದರ ನೀಡಿ ಖರೀದಿಸಬಹುದು. ಒಂದು ವೇಳೆ ಉದ್ದೇಶ ಬಿಟ್ಟು ಬೇರೆ ಚಟುವಟಿಕೆ ನಡೆಸುತ್ತಿದ್ದರೆ ಅಥವಾ ಮುಂದೆ ಬೇರೆ ಚಟುವಟಿಕೆ ನಡೆಸುವುದಿದ್ದರೆ ಮಾರ್ಗಸೂಚಿ ದರದ ಎರಡು ಪಟ್ಟನ್ನು ಸರ್ಕಾರಕ್ಕೆ ನೀಡಿ ಜಾಗವನ್ನು ತಮ್ಮದಾಗಿಸಿಕೊಳ್ಳಬಹುದು.
ಒಂದು ವೇಳೆ ಉದ್ದೇಶಿತ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳದೇ ಇನ್ನೂ ಜಾಗ ಖಾಲಿ ಉಳಿಸಿಕೊಂಡಿದ್ದರೆ ಬಳಕೆ ಮಾಡಿಕೊಂಡ ಜಾಗಕ್ಕೆ ಮಾರ್ಗಸೂಚಿ ದರ ಪಾವತಿಸಿ ಖರೀದಿಸಬಹುದು, ಉಳಿದ ಜಾಗವನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸರ್ಕಾರದ ಹಿರಿಯ ಅಧಿಕಾರಿಗಳು, ಒಳ್ಳೆಯ ಉದ್ದೇಶಕ್ಕೋ ಅಥವಾ ರಾಜಕೀಯ ಕಾರಣಕ್ಕೋ ಸಂಘ ಸಂಸ್ಥೆಗಳಿಗೆ ಲೀಸ್ಗೆ ನೀಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಈ ರೀತಿ ಸರ್ಕಾರಿ ಜಾಗ ನೀಡುವುದರಿಂದ ಸರ್ಕಾರಕ್ಕೆ ಲಾಭಕರವಲ್ಲ ಎಂದಿದ್ದಾರೆ.
ಸಂಸ್ಥೆಗಳು ಕೋಟ್ಯಂತರ ರೂ. ವ್ಯವಹಾರ ನಡೆಸುತ್ತವೆ, ಉದ್ದೇಶ ಬಿಟ್ಟು ಬೇರೆಯದಕ್ಕೂ ಸರ್ಕಾರಿ ಭೂಮಿ ಬಳಸಿಕೊಳ್ಳುತ್ತವೆ. ರಾಜಕೀಯ ಕಾರಣಕ್ಕೆ ಕ್ರಮಕೈಗೊಳ್ಳಲು ಅಸಾಧ್ಯ. ಇದರಿಂದ ಮಾರಾಟ ಮಾಡಿದರೆ ಪ್ರತಿ ವರ್ಷ ಲೀಸ್ ಮಾಡುವುದೂ ತಪ್ಪುತ್ತದೆ ಸರ್ಕಾರಕ್ಕೆ ಒಳ್ಳೆಯ ಆದಾಯವೂ ಸಿಗಲಿದೆ ಎಂದು ವಿವರಿಸಿದರು.
ಕ್ಲಬ್ ಮತ್ತು ಆ ರೀತಿಯ ಉದ್ದೇಶ ಹೊಂದಿರುವ ಲೀಸ್ ಜಮೀನುಗಳನ್ನು ಕಾಯಂ ಮಾಡಿಕೊಡುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಪ್ರಮುಖವಾಗಿ ಕೈಗಾರಿಕೆ, ಶಿಕ್ಷಣ ಸಂಸ್ಥೆ, ವೈದ್ಯಕೀಯ, ಬೇಸಾಯ, ಧಾರ್ವಿುಕ ಸಂಸ್ಥೆ ಇತ್ಯಾದಿಗಳಿಗೆ ಲೀಸ್ ಮೇಲೆ ಜಮೀನು ಪಡೆದವರಿಗೆ ಮಾತ್ರ ಕಾಯಂ ಮಾಡಿಕೊಡಲಾಗುತ್ತದೆ.