ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾದ 7 ಹೊಸ ವಿವಿಗಳ ವರದಿ ನೀಡುವಂತೆ ಸರ್ಕಾರ ಆದೇಶ

Vidhanasoudha
Published on

ಬೆಂಗಳೂರು ರಾಜ್ಯದಲ್ಲಿ ಸ್ಥಾಪನೆಯಾಗಿರುವ 7 ವಿಶ್ವವಿದ್ಯಾಲಯಗಳ ಸ್ಥಾಪನೆಯ ಉದ್ದೇಶ ಮತ್ತು ಆದೇಶದಲ್ಲಿ ವಿಧಿಸಿರುವ ಎಲ್ಲ ಷರತ್ತುಗಳನ್ನು ಪಾಲಿಸಿರುವ ಬಗ್ಗೆ ವಿಶ್ವವಿದ್ಯಾಲಯವಾರು ಪ್ರತ್ಯೇಕ ವರದಿ ನೀಡುವಂತೆ ಉನ್ನತ ಶಿಕ್ಷನ ಸಚಿವ ಡಾ. ಎಂ.ಸಿ. ಸುಧಾಕರ್ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕಾದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ-2000, ಯುಜಿಸಿ, ಎಐಸಿಟಿಇ ಹಾಗೂ ಇನ್ನಿತರ ಅಪೆಕ್ಸ್ ಸಂಸ್ಥೆಗಳು ನಿಗದಿಪಡಿಸಿರುವ ಮಾನದಂಡಗಳು ಹಾಗೂ ಸರ್ಕಾರದ ಇತರೆ ನೀತಿ ನಿಯಮಗಳನ್ವಯ ಅವಶ್ಯವಿರುವ ಭೂಮಿ, ಮೂಲ ಸೌಕರ್ಯ, ಬೋಧಕ/ಬೋಧಕೇತರ ಸಿಬ್ಬಂದಿ ವಿವರ ಹಾಗೂ ಇವುಗಳಿಗೆ ತಗಲುವ ಅಂದಾಜು ವೆಚ್ಚವನ್ನು ನುರಿತ ಶಿಕ್ಷಣ ತಜ್ಞರ ಸಮಿತಿ ರಚಿಸಿ ವರದಿ ಪಡೆಯಬೇಕು.

ಈ ಹಿನ್ನೆಲೆಯಲ್ಲಿ ಅ.12ರಂದು ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಅವರಿಗೆ ಸೂಚಿಸಲಾಗಿತ್ತು. ಪರಿಷತ್ತು ವತಿಯಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ಎ.ಎಂ. ಪಠಾಣ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿ ನ2ರಂದು ವಿಸ್ತೃತ ವರದಿಯನ್ನು ನೀಡಿದೆ.

ವರದಿಯನ್ನು ಅವಲೋಕಿಸಿದಾಗ ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕಾದಲ್ಲಿ ಕನಿಷ್ಠ 100ರಿಂದ 200 ಎಕರೆ ಜಮೀನು ಇರಬೇಕು. ಅದರ ಮೌಲ್ಯ ಹೊರತುಪಡಿಸಿ ಮುಂದಿನ 5 ವರ್ಷಗಳ ಅವಧಿಗೆ ಅಂದಾಜು 342.65 ಕೋಟಿ ರೂ. ಅನುದಾನದ ಅವಶ್ಯಕತೆ ಇರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

2022-23ನೇ ಸಾಲಿನ ಬಜೆಟ್‌ನಲ್ಲಿ ೋಷಿಸಿರುವಂತೆ ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ 7 ಹೊಸ ವಿಶ್ವವಿದ್ಯಾಲಯಗಳನ್ನು ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಮಾದರಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ತಜ್ಞರು ನೀಡಿರುವ ವರದಿ ಹಾಗೂ 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಹೊಸ 7 ವಿವಿಗಳ ಸ್ಥಾಪನೆಗೆ ವಿಧಿಸಿರುವ ಷರತ್ತುಗಳ ಅನ್ವಯ ವಿಶ್ವವಿದ್ಯಾಲಯವಾರು ಪರಾಮರ್ಶಿಸಿ, ಸಾಧಕ-ಬಾಧಕಗಳನ್ನು ಒಳಗೊಂಡ ವಿಸ್ತೃತ ವರದಿಯನ್ನು ಸಿದ್ಧಪಡಿಸಬೇಕು. ಮುಖ್ಯಮಂತ್ರಿ ಅವರ ಅವಗಾಹನೆಗೆ ಸಲ್ಲಿಸಬೇಕಾಗಿರುವ ಕಾರಣ ಕಡತವನ್ನು ಕೂಡಲೇ ಮಂಡಿಸುವಂತೆ ಸಚಿವರು ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net