

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಬೃಹತ್ ಅಕ್ರಮಗಳ ಸಂಬಂಧಪಟ್ಟಂತೆ ದಾಖಲೆ ಹಾಗೂ ಸಾಕ್ಷಾಧಾರಗಳ ಸಹಿತ ಸಂಪೂರ್ಣ ದಾಖಲೆ ಒದಗಿಸಿದ್ದರೂ ತನಿಖೆ ನಡೆಸದೆ ಲೋಕಾಯುಕ್ತ ಹಾಗೂ ಭ್ರಷ್ಟಾಚರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು 14 ಬೃಹತ್ ಹಗರಣಗಳನ್ನು ಮುಚ್ಚಿಹಾಕಿರುವುದು ಬಹಿರಂಗವಾಗಿದೆ.
ಸಿದ್ದರಾಮಯ್ಯ ಸೇರಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ.ಖಾದರ್, ಕಾಂಗ್ರೆಸ್ಸಿನ ನಾಯಕರ, ಹಿರಿಯ ಅಧಿಕಾರಿಗಳಿಂದ ರಾಜಕೀಯ ಮತ್ತು ಹಣದ ಪ್ರಭಾವಕ್ಕೆ ಒಳಗಾದ ಲೋಕಾಯುಕ್ತ ಹಾಗೂ ಎಸಿಬಿ ಅಧಿಕಾರಿಗಳು, ದೂರುದಾರರಿಂದ ಯಾವುದೇ ಹೇಳಿಕೆ ಪಡೆಯದೆ ಏಕಾಏಕಿ 14 ಹಗರಣ ಮುಕ್ತಾಯಗೊಳಿಸಿದ್ದಾರೆ. ಹಾಗಾಗಿ, ಮುಚ್ಚಿ ಹಾಕಿರುವ ಈ ಎಲ್ಲ ಹಗರಣಗಳನ್ನು ಮರು ತನಿಖೆ ನಡೆಸಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.
ಮುಚ್ಚಿ ಹಾಕಿರುವ ಪ್ರಕರಣಗಳ ಸಂಬಂಧ ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ಪಿಐಎಲ್ ಸಲ್ಲಿಸಲಾಗುವುದು. ಸಿಎಂ ಬಸವರಾಜ ಬೊಮ್ಮಾಯಿ ಅವರು, ಹಗರಣಗಳನ್ನು ಸಿಐಡಿ ಮೂಲಕ ತನಿಖೆ ನಡೆಸಲು ತಕ್ಷಣ ಆದೇಶ ಹೊರಡಿಸಬೇಕು. 2013 ರಿಂದ 2018ರವರೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 121 ಬೃಹತ್ ಹಗರಣಗಳ ನಡೆದಿವೆ. ಈ ಸಂಬಂಧ ಸಂಪೂರ್ಣ ದಾಖಲೆಗಳ ಸಹಿತ ಎಸಿಬಿ ಮತ್ತು ಲೋಕಾಯುಕ್ತಕ್ಕೆ ಪ್ರತ್ಯೇಕವಾಗಿ ದೂರು ದಾಖಲಿಸಲಾಗಿತ್ತು ಎಂದು ಎನ್. ಆರ್.ರಮೇಶ್ ವಿವರಿಸಿದರು.
ಈ ಮೇಲಿನ ಎಲ್ಲ ಹಗರಣಗಳನ್ನು ದಾಖಲೆ ಸಮೇತ ದೂರು ಸಲ್ಲಿಕೆಯಾದರೂ ಲೋಕಾಯುಕ್ತ ಮತ್ತು ಎಸಿಬಿ ಅಧಿಕಾರಿಗಳು ಕಾನೂನಿನ ಎಲ್ಲ ನಿಯಮವನ್ನು ಗಾಳಿಗೆ ತೂರಿ ಹಗರಣಗಳನ್ನು ಮುಕ್ತಾಯಗೊಳಿಸಿರುವ ಬಗ್ಗೆ ಗಂಭೀರ ಆರೋಪಗಳಿವೆ.