

ಮುಂಬೈ: ನೀವು ಸರ್ಕಾರಿ ಕಚೇರಿ ಸಿಬ್ಬಂದಿಗಳಾಗಿದ್ದು, ಜೀನ್ಸ್, ಟೀಶರ್ಟ್ ಮೇಲೆ ಮೋಹವಿದ್ದರೆ, ಇನ್ನು ಮೇಲೆ ಅದನ್ನು ಬಿಟ್ಟುಬಿಡುವುದೇ ಒಳಿತು. ಏಕೆಂದರೆ ಸರ್ಕಾರಿ ಕಚೇರಿಗಳಲ್ಲಿ ಜೀನ್ಸ್ ಮತ್ತು ಟೀಶರ್ಟ್ ನಿಷೇಧಿಸಿ ರಾಜ್ಯ ಸರ್ಕಾರವೊಂದು ಆದೇಶ ಹೊರಡಿಸಿದೆ.
ಇಂತದ್ದೊಂದು ಆದೇಶ ಬಂದಿರುವುದು ಮಹಾರಾಷ್ಟ್ರದ ರಾಜ್ಯ ಸರ್ಕಾರದಿಂದ. ರಾಜ್ಯ ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ಗುತ್ತಿಗೆ ಪಡೆದಿರುವ ಕಚೇರಿಗಳಿಗೆ ಸಿಬ್ಬಂದಿಗಳು ಜೀನ್ಸ್ ಅಥವಾ ಟೀಶರ್ಟ್ ಧರಿಸಿ ಬರುವಂತಿಲ್ಲ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೀತಿ ಡ್ರೆಸ್ ಕೋಡ್ ಜಾರಿ ಮಾಡುತ್ತಿರುವುದು ಇದೇ ಮೊದಲ ರಾಜ್ಯವಲ್ಲ. ಕರ್ನಾಟಕ, ತಮಿಳುನಾಡು, ಬಿಹಾರ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಸರ್ಕಾರಿ ನೌಕರರು ಹೆಚ್ಚು ವೃತ್ತಿಪರರಾಗಿ ಕಾಣಿಸಬೇಕೆಂಬ ಕಾರಣದಿಂದಾಗಿ ಈ ನಿಯಮ ಜಾರಿಗೊಳಿಸಲಾಗಿದೆ. (ಏಜೆನ್ಸೀಸ್)