ಸರ್ಕಾರದ ಹಣ ಸಾರ್ವಜನಿಕರ ಋಣ, ಅದರ ಪೋಲು ನಮ್ಮೆಲ್ಲರ ಸೋಲು!

photo-68b5db6970cc2
Published on
ಜರ್ಮನಿಯ ಚಕ್ರವರ್ತಿಯಾಗಿದ್ದ ಫ್ರೆಡರಿಕ್ ಎಂಬಾತನು ಒಮ್ಮೆ ಗಣ್ಯಾತಿಗಣ್ಯರಿಗೆ ಒಂದು ಔತಣ ಕೂಟವನ್ನು ಏರ್ಪಡಿಸಿದ್ದ. ಊಟದ ಬಳಿಕ ಚಕ್ರವರ್ತಿಯು ಗಣ್ಯರನ್ನು ಕೇಳಿದ: ‘ಮಹನೀಯರೇ, ನಮ್ಮ ಪ್ರಜೆಗಳಿಂದ ಇಷ್ಟೊಂದು ತೆರಿಗೆ ವಸೂಲಾದರೂ ಅದು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಸಾಕಾಗುವುದಿಲ್ಲ. ಏನು ಕಾರಣವಿರಬಹುದು?’ ಉತ್ತರಿಸಲು ವೃದ್ಧ ವಿದ್ವಾಂಸರೊಬ್ಬರು ಎದ್ದು ನಿಂತರು. ಚಕ್ರವರ್ತಿಯ ಅನುಮತಿ ಪಡೆದು ಒಂದು ಪ್ರಯೋಗವನ್ನು ನಡೆಸಲು ಮುಂದಾದರು. ಅವರು ಒಂದು ದೊಡ್ಡ ಮಂಜುಗಡ್ಡೆಯ ತುಂಡನ್ನು ಕೈಯಲ್ಲಿರಿಸಿ, ಗಣ್ಯರಿಗೆಲ್ಲಾ ಹೇಳಿದರು: ‘ನೀವುಗಳೆಲ್ಲಾ ಈ ಮಂಜುಗಡ್ಡೆಯನ್ನು ನಿಮ್ಮ ಪಕ್ಕದವರಿಗೆ ಮತ್ತೆ ಪಕ್ಕದವರಿಗೆ ಹಸ್ತಾಂತರಿಸುತ್ತಾ ಕೊನೆಗೆ ಅದು ಚಕ್ರವರ್ತಿಯ ಕೈಗಳಿಗೆ ತಲಪುವಂತೆ ಮಾಡಿ’ ಎಂದು.

ಎಲ್ಲರೂ ಹಾಗೆಯೇ ಮಾಡಲಾಗಿ ಕೈಯಿಂದ ಕೈಗೆ ಬದಲಾಯಿಸುತ್ತಿದ್ದಂತೆ, ಮಂಜುಗಡ್ಡೆ ಕರಗುತ್ತಾ ಕರಗುತ್ತಾ ಸಣ್ಣದಾಗಿ ಚಕ್ರವರ್ತಿಯ ಕೈಗೆ ತಲುಪುವಾಗ ಕಡ್ಲೆಕಾಯಿ ಗಾತ್ರದ್ದಾಗಿಬಿಟ್ಟಿತ್ತು. ಇದನ್ನು ನೋಡಿದ ವಿದ್ವಾಂಸರು ‘ನಮ್ಮ ದೇಶದ ಬೊಕ್ಕಸದ ಹಣದ ಅವಸ್ಥೆಯೂ ಹೀಗೆಯೇ ಆಗಿದೆ. ದೊಡ್ಡ ಮೊತ್ತವಾಗಿ ಸಂಗ್ರಹವಾದ ಹಣ ಹಾಕಿಕೊಂಡ ಯೋಜನೆಗಳನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯಲ್ಲಿ ಕೈಯಿಂದ ಕೈಯಿಗೆ ತಲುಪುವಾಗ ಅಲ್ಪ ಮೊತ್ತವಾಗಿ ಬಿಡುತ್ತದೆ’ ಎಂದರು. ಆಗ ಚಕ್ರವರ್ತಿಗೆ, ತನ್ನ ದೇಶದಲ್ಲಿರುವ ಭ್ರಷ್ಟಾಚಾರದ ಅರಿವಾಯಿತು.

ನಮ್ಮ ದೇಶದ ಅವಸ್ಥೆ ಇದಕ್ಕಿಂತ ತೀರ ಭಿನ್ನವಾಗಿಯೇನೂ ಇಲ್ಲ. ತೆರಿಗೆ ರೂಪದಲ್ಲಿ ಸಾರ್ವಜನಿಕರಿಂದ ಭಾರೀ ಮೊತ್ತದ ಹಣ ಸಂಗ್ರಹವಾಗುತ್ತದೆ. ಇದಕ್ಕೆ ತಡವೂ ಇಲ್ಲ; ತಡೆಯೂ ಇಲ್ಲ. ಹೀಗೆ ಸಂಗ್ರಹವಾದ ಹಣವನ್ನು ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಿಗೇ ವಿನಿಯೋಗಿಸಬೇಕಾದುದು ನ್ಯಾಯ ಸಮ್ಮತ ಹಾಗೂ ಧರ್ಮ ಸಮ್ಮತ. ಈ ನಿಟ್ಟಿನಲ್ಲಿ ಅನೇಕ ಅನುದಾನಗಳು, ಯೋಜನೆಗಳು, ಕಾರ್ಯಕ್ರಮಗಳು ರೂಪುಗೊಳ್ಳುತ್ತವೆ. ಆದರೆ, ಕಾರ್ಯಗತಗೊಳಿಸುವ ಹಂತದಲ್ಲಿ ವಿಫಲಗೊಳ್ಳುತ್ತವೆ. ಕಾರಣ, ಮಂಜೂರಾದ ಹಣ, ಕೈಯಿಂದ ಕೈಗೆ ಹೋಗಬೇಕಾದುದರಿಂದ, ಮೊತ್ತದ ಗಾತ್ರ ಸಹಜವಾಗಿಯೇ ಕಡಮೆಯಾಗುತ್ತ ಹೋಗುತ್ತದೆ. ಕಾರಣ ಕೈಗೆ ಸಿಗದ ಕಳ್ಳರು ಇದನ್ನು ಸ್ವಾಹಾ ಮಾಡಿರುತ್ತಾರೆ. ಭ್ರಷ್ಟರಿಲ್ಲದ ಇಲಾಖೆಯೇ ಇಲ್ಲವೆನ್ನಬಹುದು. ಪರಿಣಾಮವಾಗಿ ನಿರೀಕ್ಷಿತ ಅಭಿವೃದ್ಧಿ, ಪ್ರಗತಿ ನಡೆಯುವುದೇ ಇಲ್ಲ. ಇಷ್ಟಕ್ಕೆಲ್ಲಾ ಕಾರಣ ಭ್ರಷ್ಟಾಚಾರವೆಂಬ ಅರ್ಬುದ ರೋಗ. ಅದು ಪ್ರಗತಿಯನ್ನು ತಿನ್ನುತ್ತಾ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಂತೂ, ಭ್ರಷ್ಟಾಚಾರವೆಂಬುದು ಯಾವುದೇ ಭಯ, ಬೇಜಾರು ಇಲ್ಲದೆ ಸಾರಾಸಗಟಾಗಿ, ದಿನನಿತ್ಯ ನಡೆಯುವ ಹಗಲು ದರೋಡೆಯಂತಾಗಿದೆ. ಕಾರಣ ಭ್ರಷ್ಟರಿಗೆ ಕಠಿಣ ಶಿಕ್ಷೆಯೂ ಇಲ್ಲ; ತ್ವರಿತ ಶಿಕ್ಷೆಯೂ ಇಲ್ಲ.

ಭ್ರಷ್ಟರಲ್ಲಿ ಮೂರು ತರಹದವರು ಇರುತ್ತಾರೆ. ಅವರೆಂದರೆ ಆಸೆ ಇದ್ದವರು, ಆದರೆ ಅವಕಾಶವಿಲ್ಲದವರು; ಅವಕಾಶವಿದ್ದವರು, ಆದರೆ ಧೈರ್ಯವಿಲ್ಲದವರು ಹಾಗೂ ಮೂರನೇ ಥರದವರು ಆಸೆ, ಅವಕಾಶ ಎರಡೂ ಇದ್ದು ಯಶಸ್ವಿಯಾದವರು-ಇಂತಹವರೇ ಬಹುಸಂಖ್ಯಾತರು ಹಾಗೂ ಜನಪ್ರಿಯರು. ಇಂತಹವರ ಬಗ್ಗೆ ಜನ ಹೇಳುವ ಮಾತು ಗಮನಿಸಿ. ‘ಪಾಪ ಸ್ವಲ್ಪ ಲಂಚ ತಗೋತಾರೆ. ಆದರೆ ನಮ್ಮ ಕೆಲಸವನ್ನು ನಿಯತ್ತಾಗಿ ಮಾಡಿಕೊಡುತ್ತಾರೆ’!

ಭ್ರಷ್ಟಾಚಾರದ ನಿಮೂಲನೆ ಸುಲಭ ಸಾಧ್ಯವಲ್ಲ. ಕಾಯಿದೆ ಕಾನೂನುಗಳಿಂದಲೂ ಅದು ಕಷ್ಟಸಾಧ್ಯ. ವಿದ್ಯಾರ್ಥಿಯು ತನ್ನ ಓದಿನ ಹಂತದಲ್ಲಿಯೇ ತಾನೆಂದೂ ಭ್ರಷ್ಟನಾಗುವುದಿಲ್ಲ ಎಂದು ನಿರ್ಧರಿಸಿದರೆ, ಇದಕ್ಕೆ ಬೇಕಾದ ಸಂಸ್ಕಾರವನ್ನು ಪೋಷಕರು ಬಾಲ್ಯದಿಂದಲೇ ನೀಡಿದರೆ, ಶಿಕ್ಷಕರೂ ಮೌಲ್ಯಗಳನ್ನು ತಿಳಿ ಹೇಳಿದರೆ-ಭ್ರಷ್ಟಾಚಾರದ ನಿಮೂಲನೆ ಸುಲಭ ಸಾಧ್ಯವಾದೀತು. ಕಾರಣ, ಸುಶಿಕ್ಷಿತ ವ್ಯಕ್ತಿ ಭ್ರಷ್ಟನಾಗಬಲ್ಲ! ಆದರೆ ಓರ್ವ ಸುಸಂಸ್ಕೃತ ವ್ಯಕ್ತಿ ಭ್ರಷ್ಟನಾಗಲಾರ. ಅಂತೆಯೇ ಸಾರ್ವಜನಿಕ ಹಣ ಲೂಟಿ ಹೊಡೆಯಲು ಸುಲಭವಾದ ಹಣ. ಅದರ ಹಿಂದೆ ನಮ್ಮ ಬೆವರಿಲ್ಲ; ಪರಿಶ್ರಮವಿಲ್ಲ. ‘ಹುಚ್ಚಿಯ ಮದುವೆಯಲ್ಲಿ ಉಂಡವನೇ ಜಾಣ’ ಎನ್ನುವಂತೆ, ಅಧಿಕಾರವಿದ್ದಾಗ, ಅವಕಾಶವಿದ್ದಾಗ ನಾಲ್ಕು ಕಾಸು ಮಾಡಿಕೊಂಡರಾಯಿತು ಎಂಬುದೇ ಹೆಚ್ಚಿನವರ ಸಿದ್ಧಾಂತ. ಇಂತಹವರು ಪ್ರಾಮಾಣಿಕತೆಯ ಬಗ್ಗೆ ಮಾತನಾಡುವುದೇ ಇಲ್ಲ. ಏಕೆಂದರೆ, ಹೇಗೆ ತನ್ನ ಬಾಯಿಯ ಒಳಗೆ ಮೂಳೆಯ ತುಂಡನ್ನು ಇಟ್ಟುಕೊಂಡಿರುವ ನಾಯಿಗೆ ಬೊಗಳಲಾಗದೋ, ಅಂತೆಯೇ ಭ್ರಷ್ಟರಿಗೆ ಪ್ರಾಮಾಣಿಕತೆಯ ಬಗ್ಗೆ ಬೋಧಿಸಲು ಮಾತುಗಳೇ ಬರುವುದಿಲ್ಲ.

ತಾತ್ಪರ್ಯ ಇಷ್ಟೇ : ಸರ್ಕಾರದ ಹಣ, ಸಾರ್ವಜನಿಕ ಸ್ವತ್ತು ಸಂಪತ್ತು, ಅದು ಎಲ್ಲರಿಗೂ ಸೇರಿರುವ ಸಂಪತ್ತು ಎಂಬ ಮನೋಭಾವ ಬಾರದ ವಿನಹ ದೇಶದ ಸಂಪೂರ್ಣ ಸರ್ವಾಂಗೀಣ ಅಭಿವೃದ್ಧಿ ಕನಸಿನ ಮಾತು. ಸಾರ್ವಜನಿಕ ರಸ್ತೆ, ಸ್ಥಳ, ಕಟ್ಟಡ ಕಾಮಗಾರಿಗಳನ್ನು ಬಹುಜನರ ಉಪಯೋಗಕ್ಕೆಂದು ಕೈಗೊಳ್ಳಲಾಗುತ್ತದೆ. ಅವನ್ನು ರಕ್ಷಿಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಆದುದರಿಂದ ಸರ್ಕಾರದ ಹಣದ ಹಾಗೂ ಮುಷ್ಕರಗಳ ಹೆಸರಿನಲ್ಲಿ ಸಾರ್ವಜನಿಕ ವಸ್ತುಗಳ ನಾಶ ಇಲ್ಲವೇ ದುರುಪಯೋಗ ಎಂದೆಂದಿಗೂ ಖಂಡನೀಯ.

(ಪ್ರತಿಕ್ರಿಯಿಸಿ:drputhuraya@yahoo.co.in)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net