

ಬೆಂಗಳೂರು: ರಾಜ್ಯದಲ್ಲಿ ಹಿಂದುಗಳು ನೆಮ್ಮದಿಯಿಂದ ಹಬ್ಬ, ಉತ್ಸವಗಳನ್ನು ಆಚರಿಸುವ ವಾತಾವರಣವಿಲ್ಲ. ಅಶಾಂತಿ ಸೃಷ್ಟೊಯಾಗಿರುವುದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಆರೋಪಿಸಿದರು.
ಪಕ್ಷದ ನಾಯಕರೊಂದಿಗೆ ಬುಧವಾರ ಮದ್ದೂರಿಗೆ ತೆರಳುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪ್ರತಿಪಕ್ಷ ಕಡೆಗೆ ಬೊಟ್ಟು ಮಾಡುತ್ತಿದೆ. ಅಶಾಂತಿ ಸೃಷ್ಟಿಸುವುದೇ ಬಿಜೆಪಿ ಉದ್ದೇಶವೆಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಭಗವಂತನೇ ಅವರಿಗೆ ಸದ್ಬುದ್ಧಿ ನೀಡಬೇಕು ಎಂದು ತಿರುಗೇಟು ನೀಡಿದರು.
ಸಾಗರ, ಭದ್ರಾವತಿ, ಮದ್ದೂರಿನ ಅಹಿತಕರ ಘಟನೆಗಳು, ಚಾಮುಂಡಿ ಬೆಟ್ಟ ಚಲೋ ವೇಳೆ ನಡೆದ ವಿದ್ಯಮಾನವು ಸರ್ಕಾರದ ಕಾರ್ಯವೈಖರಿಗೆ ಕೈಗನ್ನಡಿಯಾಗಿವೆ. ಗಣೇಶ ಉತ್ಸವಕ್ಕೆ ಅನೇಕ ಕಟ್ಟುಪಾಡುಗಳನ್ನು ವಿಧಿಸುತ್ತಿದ್ದು, ನಮ್ಮದೇ ನಾಡಿನಲ್ಲಿ ನಾವು ಪರಕೀಯರಾಗಿಬಿಟ್ಟಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದರು.
ಬಿ.ಕೆ.ಹರಿಪ್ರಸಾದ ಸೇರಿ ಕಾಂಗ್ರೆಸ್ ನ ಕೆಲವು ನಾಯಕರು ಅನಗತ್ಯವಾಗಿ ಬಿ.ಎಲ್.ಸಂತೋಷ, ಸಂಘ-ಪರಿವಾರದ ಪ್ರಮುಖರನ್ನು ಎಳೆದು ತರುತ್ತಿದ್ದಾರೆ. ಸರ್ಕಾರ ಹೊಣೆ ಮರೆತು ವರ್ತಿಸುತ್ತಿದೆ. ಇದು, ಪ್ರಚಾರ ಗಿಟ್ಟಿಸಿಕೊಳ್ಳುವ ಕುತಂತ್ರವೆಂದು ಜರಿದರು.
ಭದ್ರಾವತಿ ಶಾಸಕ ಸಂಗಮೇಶ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆಯಿದೆ ಎಂದಿದ್ದಾರೆ. ಮುಂದಿನ ಜನ್ಮದ ಮಾತು ಹಾಗಿರಲಿ, ಈಗಲೇ ಮುಸ್ಲಿಮರಾಗಿ ಮತಾಂತರವಾಗಬಹುದಲ್ಲ ಎಂದು ಕುಟುಕಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ಸಂದರ್ಭದಲ್ಲಿ ಧರ್ಮಸ್ಥಳ ಪ್ರಕರಣವನ್ನು ಎನ್ ಐಎಗೆ ನೀಡಬೇಕು ಎಂದು ಮನವಿ ಮಾಡಿಲ್ಲ. ಬೇರೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದು ಮಾತುಕತೆ ಯಶಸ್ವಿಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.