ಅಂಗನವಾಡಿಗೆ ಪರ್ಯಾಯವಾಗಿ ಈ ಕೇಂದ್ರ ತೆರೆಯಲು ಸರ್ಕಾರದ ಸಿದ್ಧತೆ

D.15-MDG-1P1
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಕೆ.ಆರ್.ಶೈಲಾ, ಎಂ.ಡಿ.ವನಜಾಕ್ಷಿ, ದೀಪಿಕಾ, ಅನ್ನಪೂರ್ಣ, ಗೌರಮ್ಮ ಇತರರಿದ್ದರು.
Published on

ಮೂಡಿಗೆರೆ: ಅಂಗನವಾಡಿಯನ್ನು ಮುಚ್ಚಲು ಹುನ್ನಾರ ನಡೆಸಿರುವ ಸರ್ಕಾರದ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಫೆಡರೇಷನ್ ಕಾರ್ಯಕರ್ತರು ಶುಕ್ರವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಅಂಗನವಾಡಿ ಕೇಂದ್ರಕ್ಕೆ ಪರ್ಯಾಯವಾಗಿ ನರೇಗಾ ಯೋಜನೆಯಡಿ ಶಿಶುಪಾಲನಾ ಕೇಂದ್ರ ಸ್ಥಾಪಿಸಲು ಹಾಗೂ ಸರ್ಕಾರಿ ಶಾಲೆಗಳಲ್ಲಿ 4 ರಿಂದ 5ವರ್ಷದ ಮಕ್ಕಳಿಗೆ ಶಾಲಾ ಪೂರ್ವ ತರಗತಿ ಪ್ರಾರಂಭಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಅಂಗನವಾಡಿಗಳು ನಿರ್ವಹಿಸಬೇಕಾದ ಕೆಲಸವನ್ನು ಸರ್ಕಾರ ಪರ್ಯಾಯವಾಗಿ ಬೇರೆ ರೀತಿಯಲ್ಲಿ ನಿರ್ವಹಿಸಿದರೆ ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಅಂಗನವಾಡಿಗಳು ಮುಚ್ಚುವ ಸ್ಥಿತಿಗೆ ತಲುಪಲಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಸಂಘದ ತಾಲೂಕು ಅಧ್ಯಕ್ಷೆ ಕೆ.ಆರ್.ಶೈಲಾ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮಾಸಿಕ ನೀಡುತ್ತಿರುವ ಗೌರವಧನಕ್ಕಿಂತ 10ಪಟ್ಟು ಹೆಚ್ಚು ದುಡಿಸಿಕೊಳ್ಳುತ್ತಿದೆ. ನಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ನೂರಾರು ಬಾರಿ ಹೋರಾಟ ನಡೆಸಿದರೂ ಸರ್ಕಾರ ನಮ್ಮ ಗೋಳು ಕೇಳುವ ಸ್ಥಿತಿಯಲ್ಲಿಲ್ಲ. ಅಂಗನವಾಡಿಗೆ ಪರ್ಯಾಯವಾಗಿ ಶಿಶುಪಾಲನಾ ಕೇಂದ್ರ ಸ್ಥಾಪಿಸಿದರೆ ಅಂಗನವಾಡಿ ಕೇಂದ್ರ ಮುಚ್ಚುವ ಸ್ಥಿತಿಗೆ ತಲುಪಲಿದೆ ಆಗ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರ್ಕಾರ ಬೀದಿಗೆ ತರಲು ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರಾದ ದೀಪಿಕಾ, ಸತ್ಯ, ಅನ್ನಪೂರ್ಣ, ಗೌರಮ್ಮ, ಸಾಂಚಿತ, ಅಶ್ವಿನಿ, ರೇಣುಕಾ, ಜ್ಯೋತಿ, ಸರೋಜಾ, ರಾಗಿಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net