

ದಿಟ್ಟ ಮಾತು, ಸೂಕ್ತ ನಿರ್ಧಾರ. ಇದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಕಾರ್ಯವೈಖರಿ. ಕರೊನಾದಂಥ ಮಹಾಮಾರಿ ವಕ್ಕರಿಸಿರುವ ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಪಾತ್ರ ಮಹತ್ವದ್ದು. ನಗರ ಮಾತ್ರವಲ್ಲದೆ ಗ್ರಾಮೀಣ ಸರ್ಕಾರಿ ಆಸ್ಪತ್ರೆಗಳಲ್ಲೂ ಸೋಂಕು ನಿವಾರಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕಿರುವುದು ಅನಿವಾರ್ಯ. ಹಾಗಾಗಿ, ಕರೊನಾ ರಾಜ್ಯಕ್ಕೆ ಕಾಲಿಟ್ಟ ದಿನದಿಂದಲೇ ಅಖಾಡಕ್ಕೆ ಇಳಿದಿರುವ ಶ್ರೀರಾಮುಲು, ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರಲ್ಲದೆ, ಇನ್ನೂ ಹತ್ತುಹಲವು ಕಾರ್ಯಕ್ರಮಗಳ ಆರಂಭಕ್ಕೆ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಶನಿವಾರ ನಡೆದ ವಿಜಯವಾಣಿ ಪೋನ್-ಇನ್ನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಸವಲತ್ತು ಸುಧಾರಣೆ, ಆಡಳಿತಾತ್ಮಕ ಉತ್ತರದಾಯಿತ್ವ, ಶುಚಿತ್ವ ಹಾಗೂ ಸ್ವಚ್ಛತೆ ಉನ್ನತೀ ಕರಣ, ಕಾರ್ಯನಿರ್ವಹಣೆಗೆ ಕಾಪೋರೇಟ್ ಶೈಲಿ ಸ್ಪರ್ಶ ನೀಡುವ ಮೂಲಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ದೃಢ ಸಂಕಲ್ಪ ಮಾಡಿದ್ದಾರೆ.
ವಿಜಯವಾಣಿ ಫೋನ್-ಇನ್ ಬಳಿಕ ನಡೆದ ಸಂವಾದದಲ್ಲಿ ಮಾತನಾಡಿ, ಕರೊನಾ ಸಂಕಷ್ಟ ಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ 2 ಬಾರಿ ಭೇಟಿ ನೀಡಿ ಬಂದಿರುವೆ. ಈ ವೇಳೆ ಸರ್ಕಾರಿ ಆಸ್ಪತ್ರೆಗಳ ಮಹತ್ವ ಹಾಗೂ ಕಾರ್ಯತತ್ಪರತೆ ಜನರಿಗೆ ಮನವರಿಕೆಯಾಗಿದೆ. ಸರ್ಕಾರಿ ಆಸ್ಪತ್ರೆ ಎಂದಾಕ್ಷಣ ಅಸಡ್ಡೆಯಿಂದ ಮೂಗು ಮುರಿಯುವ ಜನರ ಮನಸ್ಥಿತಿಯಲ್ಲಿ ಸಾಕಷ್ಟು ಪರಿವರ್ತನೆಗಳಾಗಿವೆ. ಕರೊನಾಗೆ ಮುನ್ನ ನಾನು ನಡೆಸಿದ ಆಸ್ಪತ್ರೆಗಳ ವಾಸ್ತವ್ಯ ಕಾರ್ಯಕ್ರಮವೂ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ವೈದ್ಯರು, ಸಿಬ್ಬಂದಿ ಹಾಗೂ ಜನರಲ್ಲಿ ಅರಿವು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಸ್ಪರ್ಧೆಯೊಡ್ಡುವಂತೆ ಸಜ್ಜು: ಖಾಸಗಿ ಆಸ್ಪತ್ರೆಗಳಿಗೆ ಸ್ಪರ್ಧೆ ಯೊಡ್ಡುವ ರೀತಿಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕೆಂಬ ಇಚ್ಛೆ ವ್ಯಕ್ತಪಡಿಸಿದ ಸಚಿವರು, ಚಿಕಿತ್ಸೆ, ಶುಶ್ರೂಷೆ, ಮೇಲ್ವಿಚಾರಣೆ, ಆಡಳಿತಾತ್ಮಕ ಕ್ರಮಗಳು... ಹೀಗೆ ಪ್ರತಿಯೊಂದಕ್ಕೂ ವೈದ್ಯಾಧಿಕಾರಿಗಳತ್ತ ಬೊಟ್ಟು ಮಾಡುವ ಈಗಿನ ವ್ಯವಸ್ಥೆ ಬದಲಿಸಿ ಕಾಪೋರೇಟ್ ಶೈಲಿ ಸ್ಪರ್ಶ ನೀಡಲಾಗುವುದು. ಎಲ್ಲ ಅನುಕೂಲತೆ ಒದಗಿಸುವ ಜತೆಗೆ ಉತ್ತಮ ಸಂವಹನಕ್ಕೆ ಏರ್ಪಾಟು ಮಾಡಲಾಗುವುದು ಎಂದು ಸಚಿವರು ಹೇಳಿದರು.
ಆದ್ಯತೆಯ ವಿಶ್ವಾಸ: ಆಯವ್ಯಯದಲ್ಲಿ ಇನ್ಮುಂದೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ಱ ಸಿಗಲಿದೆ. ಕರೊನಾ ಕಲಿಸಿದ ಮಹತ್ವದ ಪಾಠವಿದು. ಸದ್ಯದ ಸಂಕಷ್ಟ ಪರಿಸ್ಥಿತಿ ಮಾತ್ರವಲ್ಲ, ಭವಿಷ್ಯದ ಬಜೆಟ್ಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ.4ಕ್ಕಿಂತ ಹೆಚ್ಚಿನ ಅನುದಾನ ದೊರೆಯಲಿದೆ ಎಂಬ ವಿಶ್ವಾಸವನ್ನು ಶ್ರೀರಾಮುಲು ವ್ಯಕ್ತಪಡಿಸಿದರು. ಈಗ ಅನುದಾನ ಶೇ. 4ಕ್ಕಿಂತ ಕಡಿಮೆ ಇದೆ.
ಆಯುಷ್ ವೈದ್ಯರಿಗೆ ಅಸ್ತು: ಆಯುಷ್ ವೈದ್ಯರಿಗೂ ಪ್ಯಾರಾಸಿಟಮಲ್ ಮಾತ್ರೆ ವಿತರಿಸುವುದಕ್ಕೆ ಅನುಮತಿ ನೀಡುವ ಬಗ್ಗೆ ಮುಖ್ಯಮಂತ್ರಿ ಜತೆಗೆ ರ್ಚಚಿಸಿ ತೀರ್ವನಿಸುವೆ. ಕರೊನಾ ಸಂಕಷ್ಟ ಕಾಲದಲ್ಲಿ 2,000 ಆಯುಷ್ ವೈದ್ಯರ ಪರಿಶ್ರಮವನ್ನು ಗಣನೆಗೆ ತೆಗೆದುಕೊಂಡಿದ್ದು, ಸಂಬಳ ಏರಿಕೆ, ಕೆಲಸ ಕಾಯಂ ಇನ್ನಿತರ ಬೇಡಿಕೆಗಳನ್ನು ಅನುಷ್ಠಾನಕ್ಕೆ ತರಲು ಬದ್ಧವೆಂದು ಸಚಿವರು ಆಶ್ವಾಸನೆ ನೀಡಿದರು.
ಇದನ್ನೂ ಓದಿ: ಭಾರತದಲ್ಲಿ 2000 ತಲುಪಿತು ಕರೊನಾದಿಂದ ಸತ್ತವರ ಸಂಖ್ಯೆ!
ಭಾರತಕ್ಕೆ ಕರೆತರುವ ಭರವಸೆ: ಐರ್ಲೆಂಡ್ ನೆಲೆಸಿರುವ ಸಂಬಂಧಿಕರೊಬ್ಬರು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಅವರಿಗೆ ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಿಕೊಡುವಂತೆ ಚಿಕ್ಕಬಳ್ಳಾಪುರದ ರಜಿ ಮಾಡಿದ ಮನವಿಗೆ ಸ್ಪಂದಿಸಿದ ರಾಮುಲು, ವಿದೇಶಗಳಿಂದ ಏರ್ಲಿಫ್ಟ್ ಮಾಡಲಾಗುತ್ತಿದೆ. ಆ ದೇಶಗಳಲ್ಲಿ ಐರ್ಲೆಂಡ್ ಸಹ ಸೇರಿದ್ದು, ಅಲ್ಲಿನ ರಾಯಭಾರಿಯೊಂದಿಗೆ ಮಾತನಾಡಿ ಅವರನ್ನು ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಯಾರಿಗೆಲ್ಲ ಸಿಗಲಿದೆ ವಿಮೆ ಸೌಲಭ್ಯ?: ಕರೊನಾ ಸೋಂಕು ತಡೆಗಟ್ಟುವ ಕೆಲಸದಲ್ಲಿ ನಿರತರಾದವರು ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರೂ. ವಿಮಾ ಪರಿಹಾರ ಒದಗಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಈ ಕೆಲಸದಲ್ಲಿ ಇರುವವರ ಮನೋಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮಾರ್ಗಸೂಚಿಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪೊಲೀಸ್ ಅಧಿಕಾರಿಗಳು/ಸಿಬ್ಬಂದಿ, ಹೋಂ ಗಾರ್ಡ್ಸ್, ಪೌರ ರಕ್ಷಣಾ ದಳ, ಅಗ್ನಿಶಾಮಕ ದಳದ ಅಧಿಕಾರಿಗಳು/ ನೌಕರರು, ಬಂಧೀಖಾನೆ ಸಿಬ್ಬಂದಿ, ಪೌರ ಕಾರ್ವಿುಕರು/ ಸ್ಯಾನಿಟೈಸರ್ ಕೆಲಸಗಾರರು, ಅವರಿಗೆ ಸಂಬಂಧಿಸಿದ ವಾಹನಗಳ ಚಾಲಕರು/ ಲೋಡರ್ಗಳು. ಸೋಂಕು ತಡೆಗಟ್ಟುವ ಕೆಲಸದಲ್ಲಿ ತೊಡಗಿರುವ ಅಬಕಾರಿ ಇಲಾಖೆ ಸಿಬ್ಬಂದಿ ಸಹಿತ ಮುಂಚೂಣಿ ಸೇನಾನಿಗಳ ಸಾಲಿಗೆ ಸೇರಲಿದ್ದು, ವಿಮಾ ಪರಿಹಾರಕ್ಕೆ ಅವರನ್ನೂ ಸೇರಿಸಲು ಕ್ರಮವಹಿಸುವೆ ಎಂದು ಶ್ರೀರಾಮುಲು ಭರವಸೆ ನೀಡಿದರು.