

ನವದೆಹಲಿ: ಭಾರತದಲ್ಲಿ ಮಹಾಮಾರಿ ಕರೊನಾಗೆ ಬಲಿಯಾದವರ ಸಂಖ್ಯೆ ಶನಿವಾರ 2 ಸಾವಿರದ ಗಡಿ ದಾಟಿದ್ದು, ಸೋಂಕಿತರ ಸಂಖ್ಯೆ 60 ಸಾವಿರಕ್ಕಿಂತ ಹೆಚ್ಚಾಗಿದೆ.
ಹೊಸ ಪ್ರಕರಣಗಳು ದಿನೇ ದಿನೆ ವೇಗ ಪಡೆದುಕೊಳ್ಳುತ್ತಿವೆ. ಕೇವಲ ಒಂದು ವಾರದ ಅಂತರದಲ್ಲಿ ಹೊಸದಾಗಿ 20 ಸಾವಿರ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ 19 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳಿದ್ದು, ಗುಜರಾತ್‌ನಲ್ಲಿ 7 ಸಾವಿರ, ದೆಹಲಿ ಮತ್ತು ತಮಿಳುನಾಡಿನಲ್ಲಿ ತಲಾ 6 ಸಾವಿರ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಲ್ಲಿ ತಲಾ 3 ಸಾವಿರ, ಆಂಧ್ರಪ್ರದೇಶ, ಪಂಜಾಬ್, ಪಶ್ಚಿಮಬಂಗಾಳ ಮತ್ತು ತೆಲಂಗಾಣದಲ್ಲಿ ತಲಾ 1 ಸಾವಿರಕ್ಕಿಂತಲೂ ಅಧಿಕ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಈವರೆಗೆ 700ಕ್ಕೂ ಹೆಚ್ಚು ಜನರು ಸಾವನನ್ನಪ್ಪಿದ್ದು, ಗುಜರಾತ್‌ನಲ್ಲಿ 400, ಮಧ್ಯಪ್ರದೇಶದಲ್ಲಿ 200, ಪಶ್ಚಿಮಬಂಗಾಳದಲ್ಲಿ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಒಟ್ಟು ಮೃತರ ಸಂಖ್ಯೆ 2 ಸಾವಿರಕ್ಕಿಂತಲೂ ಹೆಚ್ಚಾಗಿದೆ.
ದೇಶದಲ್ಲಿ 40 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 18 ಸಾವಿರಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದಾರೆ.
ಅಬುದಾಬಿ ಹಾಗೂ ದುಬೈನಿಂದ ಕೇರಳಕ್ಕೆ ಗುರುವಾರ ಕರೆತರಲಾಗಿರುವ 363 ಭಾರತೀಯರಲ್ಲಿ ಇಬ್ಬರಿಗೆ ಕರೊನಾ ಸೋಂಕು ಪಾಸಿಟಿವ್ ತೋರಿಸಿದೆ. ವಿದೇಶಗಳಿಂದ ಭಾರತೀಯರನ್ನು ಕರೆತರುತ್ತಿರುವುದರಿಂದ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುವ ಆತಂಕ ಎದುರಾಗಿದೆ. ಆದಾಗ್ಯೂ ಅವರನ್ನೆಲ್ಲ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಿ, ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಉತ್ತರಪ್ರದೇಶದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಿದ್ದು, ಸದ್ಯ ಶೇಕಡಾ 43ರಷ್ಟಿದೆ. ಈವರೆಗೆ 1300ಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿದ್ದಾರೆ.
ಈ ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಮರಣ ಪ್ರಮಾಣ ಶೇಕಡಾ 3.3 ರಷ್ಟಿದ್ದು, ಗುಣಮುಖವಾಗುತ್ತಿರುವವರ ಪ್ರಮಾಣ ಶೇಕಡಾ 29.9ಕ್ಕೆ ಏರಿದೆ. ಇದು ಉತ್ತಮ ಬೆಳವಣಿಗೆಯಾಗಿದ್ದು, ಕಳೆದ 3 ದಿನಗಳಿಂದ ಪ್ರಕರಣಗಳು ದ್ವಿಗುಣಗೊಳ್ಳುವ ದಿನಗಳ ಪ್ರಮಾಣ 11 ದಿನಗಳಿಗೆ ಏರಿದೆ. ಕಳೆದ 7 ದಿನಗಳಿಂದ ಈ ಪ್ರಮಾಣ ಶೇ. 9.9 ದಿನಗಳಷ್ಟಿತ್ತು ಎಂದು ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.