ಮಕ್ಕಳ ಹಕ್ಕುಗಳಿಗೆ ಪೊಲೀಸ್ ರಕ್ಷಣೆ; ಸಂತ್ರಸ್ತರು, ಆರೋಪಿಗಳಿಗೆ ಹೊಸ ನಿಯಮ | ಮಕ್ಕಳಸ್ನೇಹಿ ಠಾಣೆಗಳು

5876
Published on

ಕೀರ್ತಿನಾರಾಯಣ ಸಿ.

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಹಾಗೂ ಬಾಲಾಪರಾಧಿಗಳ ಹಕ್ಕುಗಳ ರಕ್ಷಣೆಗೆ ಪೊಲೀಸರ ಕಾವಲಿರಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಮಕ್ಕಳ ಸಂಬಂಧಿತ ಅಪರಾಧ ಪ್ರಕರಣಗಳ ನಿರ್ವಹಣೆಗೆ ದೇಶದ ಪ್ರತಿ ಪೊಲೀಸ್ ಠಾಣೆಯಲ್ಲೂ ಒಬ್ಬ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡಬೇಕು. ಪ್ರತಿಜಿಲ್ಲೆ ಹಾಗೂ ಮಹಾನಗರಗಳಲ್ಲಿ ವಿಶೇಷ ಬಾಲಾಪರಾಧಿ ಪೊಲೀಸ್ ಘಟಕಗಳನ್ನು ಸ್ಥಾಪಿಸಬೇಕು ಎಂದು ಆದೇಶಿಸಿದೆ. ಮಕ್ಕಳಸ್ನೇಹಿ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದ್ದು, ರಾಜ್ಯದಲ್ಲೂ ವಿಶೇಷ ಘಟಕಗಳ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಹೊಸ ನೀತಿಯನ್ನು ಜಾರಿಗೆ ತಂದಿದೆ. ನಿಯಮಾವಳಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವಹಿಸಲಾಗಿದ್ದು, ಆಯಾ ರಾಜ್ಯಗಳಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 107(1)ರ ಅನ್ವಯ ಮಕ್ಕಳ ಹಕ್ಕುಗಳ ರಕ್ಷಣೆಗೆ ಪೊಲೀಸ್ ಅಧಿಕಾರಿಗಳ ನೇಮಕಕ್ಕೆ ದೇಶದ ಎಲ್ಲ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ಹೊರಡಿಸಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ವರದಿ ಪ್ರಕಾರ 2021ರಲ್ಲಿ ದೇಶದಲ್ಲಿ 1,49,404 ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಶೇ.36.05 (53,874) ಪ್ರಕರಣಗಳು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ವ್ಯಾಪ್ತಿಯಲ್ಲಿ ಬರುತ್ತವೆ. ಪೋಕ್ಸೊ ಕಾಯ್ದೆಯಡಿ ದಾಖಲಾದ ಹೆಚ್ಚಿನ ಪ್ರಕರಣಗಳು ಉತ್ತರ ಪ್ರದೇಶ (7,129), ಮಹಾರಾಷ್ಟ್ರ (6,200), ಮಧ್ಯ ಪ್ರದೇಶ (6,070), ತಮಿಳು ನಾಡು (4,465) ಮತ್ತು ಕರ್ನಾಟಕದಲ್ಲಿ (2,813) ವರದಿಯಾಗಿವೆ.

ಪ್ರತಿ ಠಾಣೆಯಲ್ಲೂ ಸಂತ್ರಸ್ತ ಮಕ್ಕಳು ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ಜತೆ ವ್ಯವಹರಿಸಲು ಒಬ್ಬ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ (ಸಿಡಬ್ಲುಪಿಒ) ನೇಮಿಸುವ ಅಗತ್ಯವಿದೆ. ಅದಕ್ಕಾಗಿ ಸಹಾಯಕ ಸಬ್ ಇನ್​ಸ್ಪೆಕ್ಟರ್ (ಎಎಸ್​ಐ) ದರ್ಜೆ ಅಥವಾ ಅದಕ್ಕಿಂತ ಮೇಲಿನ ಅಧಿಕಾರಿಯನ್ನು ನಿಯೋಜಿಸಬೇಕು. ಜತೆಗೆ ಪ್ರತಿ ಜಿಲ್ಲೆ ಹಾಗೂ ಮಹಾನಗರದಲ್ಲಿ ವಿಶೇಷ ಜುವೈನೈಲ್ ಪೊಲೀಸ್ ಘಟಕವನ್ನು ಸ್ಥಾಪಿಸಿ, ಅದಕ್ಕೆ ಡಿಎಸ್​ಪಿ ದರ್ಜೆಯ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿಸಬೇಕೆಂದು ಸೂಚಿಸಲಾಗಿದೆ. ಮಕ್ಕಳ ಕಲ್ಯಾಣಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಒಬ್ಬ ಮಹಿಳೆ ಸೇರಿ ಇಬ್ಬರು ಸಾಮಾಜಿಕ ಕಾರ್ಯಕರ್ತರನ್ನು ನೇಮಕ ಮಾಡಲು ನಿರ್ದೇಶಿಸಲಾಗಿದೆ.

ಪೊಲೀಸ್ ಠಾಣೆಗಳಲ್ಲಿಲ್ಲ ಪ್ರತ್ಯೇಕ ವ್ಯವಸ್ಥೆ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ಬಾಲಾಪರಾಧಿ ಪೊಲೀಸ್ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆ ಡಿವೈಎಸ್ಪಿ ಹಾಗೂ ಎಸ್ಪಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಆದರೆ, ಪೊಲೀಸ್ ಠಾಣೆಗಳಲ್ಲಿ ಮಕ್ಕಳಸ್ನೇಹಿ ವಾತಾವರಣ ಸೃಷ್ಟಿಯಾಗಿಲ್ಲ. ನಿಯಮಾವಳಿ ಅನ್ವಯ ಬೇಕಾದ ಕ್ರಮಗಳನ್ನು ಕೈಗೊಂಡಿಲ್ಲ. ಈ ಬಗ್ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಿಗಾ ವಹಿಸಬೇಕಿದೆ.

ಜಾಗೃತಿ ಮೂಡಿಸಬೇಕು

  • ಬಾಲ್ಯವಿವಾಹ, ಬಾಲಕಾರ್ವಿುಕ ಪದ್ಧತಿ ಬಗ್ಗೆ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಬೇಕು
  • ಲೈಂಗಿಕ ದೌರ್ಜನ್ಯದ ಬಗ್ಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ತಿಳಿಸಬೇಕು
  • ಶಾಲಾ-ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧ ಕೃತ್ಯ ಬಗ್ಗೆ ಅರಿವು ಮೂಡಿಸಬೇಕು

ಅಧಿಕಾರಿಗಳು ಮಾಡಬೇಕಾದ್ದೇನು?

  • ಠಾಣೆಗಳಲ್ಲಿ ಭಯ ಹುಟ್ಟಿಸುವ ಬದಲು ಮಕ್ಕಳಸ್ನೇಹಿ ವಾತಾವರಣ ಸೃಷ್ಟಿಸುವುದು
  • ಕಾನೂನು ಸಂಘರ್ಷಕ್ಕೆ ಒಳಗಾದ ವರಲ್ಲಿ ಅಪರಾಧ ಮನೋಭಾವ ಬೆಳೆಯದಂತೆ ಕೌನ್ಸೆಲಿಂಗ್
  • ಬಾಲಾಪರಾಧಿಗಳ ಮನ ಪರಿವರ್ತಿಸಿ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರುವುದು
  • ಸಂತ್ರಸ್ತ ಮಕ್ಕಳು ಧೈರ್ಯವಾಗಿ ಠಾಣೆಗೆ ಬಂದು ದೂರು ಕೊಡಲು ವೇದಿಕೆ ಕಲ್ಪಿಸುವುದು
  • ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಮನವೊಲಿಸಿ ಘಟನೆಯ ಕುರಿತು ಸತ್ಯ ತಿಳಿದುಕೊಳ್ಳುವುದು

ಹೇಗಿರಬೇಕು ಠಾಣೆ?

  • ಠಾಣೆಗಳಲ್ಲಿ ಎಲ್ಲ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆ ಪ್ರದರ್ಶನ
  • ಮಕ್ಕಳ ಪ್ರಕರಣಗಳನ್ನು ನಿರ್ವಹಿಸಲು ಪ್ರತ್ಯೇಕ ಅಧಿಕಾರಿ, ಕೊಠಡಿ ವ್ಯವಸ್ಥೆ ಇರಬೇಕು
  • ಕುಡಿಯುವ ನೀರಿನ ವ್ಯವಸ್ಥೆ, ಆಟದ ಅಂಗಳ, ಪ್ರತ್ಯೇಕ ಶೌಚಗೃಹದ ವ್ಯವಸ್ಥೆ
  • ಹೆಣ್ಣು ಮಕ್ಕಳಾಗಿದ್ದರೆ ಅವರನ್ನು ಮಹಿಳಾ ಅಧಿಕಾರಿಯೇ ಮಾತನಾಡಿಸಬೇಕು

ಮಕ್ಕಳ ಕೇಸ್​ಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರವೇ ನೀತಿ ರೂಪಿಸಿದೆ. ಮಕ್ಕಳಸ್ನೇಹಿ ವಾತಾವರಣ ಸೃಷ್ಟಿಸಲು ನಿಯಮಾವಳಿಗಳ ಅನುಷ್ಠಾನದ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್​ಸಿಪಿಸಿಆರ್) ಉಸ್ತುವಾರಿ ವಹಿಸುತ್ತಿದೆ. ಎಲ್ಲ ಜಿಲ್ಲೆಗಳಲ್ಲೂ ವಿಶೇಷ ಬಾಲಾಪರಾಧಿಕ ಘಟಕಗಳನ್ನು ಸ್ಥಾಪಿಸಿದ್ದು, ಡಿವೈಎಸ್ಪಿ, ಎಸ್ಪಿ ನೊಡಲ್ ಅಧಿಕಾರಿಗಳಾಗಿದ್ದಾರೆ. ಕೆಲವೆಡೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿವೆ. ಉಳಿದಂತೆ ಎಲ್ಲ ಕಡೆ ನಿಯಮ ಪಾಲನೆಯಾಗಿದೆ. | ನಾಗಣ್ಣ ಗೌಡ, ಕೆಎಸ್​ಸಿಪಿಸಿಆರ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net