ನಿರುದ್ಯೋಗ ಮುಕ್ತ ರಾಣೆಬೆನ್ನೂರಿನ ಯೋಜನೆ ಅನುಷ್ಠಾನಗೊಳಿಸುವೆ; ಪ್ರಕಾಶ ಕೋಳಿವಾಡ

16-RNR-04
Published on

ರಾಣೆಬೆನ್ನೂರ: ಮುಂದಿನ ದಿನಗಳಲ್ಲಿ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ ತಾವು ಕೈಗೊಂಡಿರುವ ನಿರುದ್ಯೋಗ ಮುಕ್ತ ರಾಣೆಬೆನ್ನೂರಿನ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಕಾಲೇಜಿನಲ್ಲಿ ಬಿಸಿಎ ಕೋರ್ಸ್ ಆರಂಭಿಸಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಬುಧವಾರ 2022-23ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಸೇರಿ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಬಿಸಿಎ ಕೋರ್ಸ್ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪದವಿ ಪಡೆದುಕೊಂಡರೆ ಸಾಕಾಗುವುದಿಲ್ಲ. ಖಾಸಗಿ ಹಾಗೂ ಸರಕಾರಿ ಕ್ಷೇತ್ರಗಳಲ್ಲಿ ಅವಶ್ಯಕವಾಗಿರುವ ಸ್ಪೋಕನ್ ಇಂಗ್ಲೀಷ್, ಜಿಎಸ್‌ಟಿ, ಕಂಪ್ಯೂಟರ್ ಕೋರ್ಸ್ ಮುಂತಾದ ಕೌಶಲ ಅಭಿವೃದ್ಧಿ ತರಬೇತಿ ಪಡೆದುಕೊಳ್ಳುವುದು ಅವಶ್ಯಕವಾಗಿದೆ. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಈ ಎಲ್ಲ ಕೌಶಲ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಸಿಎ ಪದವಿ ಕೂಡ ಆರಂಭಿಸಲಾಗಿದ್ದು, ಖಾಸಗಿ ಕಾಲೇಜುಗಳ ಲಕ್ಷಾಂತರ ರೂ. ಶುಲ್ಕ ನೀಡಲಾಗದೆ ವಂಚಿತರಾಗುತ್ತಿದ್ದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಅತಿ ಕಡಿಮೆ ಶುಲ್ಕದಲ್ಲಿ ಪ್ರವೇಶ ನೀಡಲಾಗುತ್ತಿದ್ದು, ಆರ್ಹ ವಿದ್ಯಾರ್ಥಿಗಳಿಗೆ ಅವರು ಪಾವತಿಸಿರುವ ಶುಲ್ಕ ಸ್ಕಾಲರ್‌ಶಿಪ್ ಮೂಲಕ ಸರ್ಕಾರದಿಂದ ಪಾವತಿ ಮಾಡಲಾಗುತ್ತದೆ ಎಂದರು.
ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ. ವಿಜಯಲಕ್ಷ್ಮೀ ತೀರ್ಲಾಪುರ ಮಾತನಾಡಿ, ಉನ್ನತ ಶಿಕ್ಷಣ ಪಡೆದದ್ದು ತಮ್ಮ ವ್ಯಕ್ತಿತ್ವದಿಂದ ಪ್ರದರ್ಶನಗೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ. ಎಸ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ನಂದಿಹಳ್ಳಿ ಪಿಜಿ ಸೆಂಟರ್‌ನ ನಿರ್ದೇಶಕ ಡಾ. ಬಿ. ರವಿ, ಡಾ. ಅರುಣಕುಮಾರ ಚಂದನ, ಡಾ. ವಿಜಯಲಕ್ಷ್ಮೀ ಆರ್., ಡಾ. ಕೆ. ರಾಘವೇಂದ್ರ, ಡಾ. ಗಂಗಮ್ಮ ಎಂ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net