

ಕಾಠ್ಮಂಡು: ಜೆನ್-ಝಿ ಪ್ರತಿಭಟನಾಕಾರರ ಆಕ್ರೋಶಕ್ಕೆ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ಕೊಟ್ಟ ಬಳಿಕ ಮಧ್ಯಂತರ ಸರ್ಕಾರ ರಚನೆಗೆ ಪ್ರಯತ್ನಗಳು ನಡೆಯುತ್ತಿವೆ. ಮಧ್ಯಂತರ ಸರ್ಕಾರದ ನಾಯಕತ್ವ ಯಾರಿಗೆ ನೀಡಬೇಕು ಎಂಬ ಕುರಿತು ವಿವಾದ ಉಂಟಾಗಿದ್ದು, ಈ ವಿಚಾರವಾಗಿ ಪ್ರತಿಭಟನಾಕಾರರ ಎರಡು ಬಣಗಳ ನಡುವೆ ನೇಪಾಳ ಸೇನೆಯ ಪ್ರಧಾನ ಕಚೇರಿ ಹೊರಗೆ ಘರ್ಷಣೆ ನಡೆದಿದ್ದು, ಎರಡೂ ಬಣಗಳ ನಾಯಕರು ಹೊಡೆದಾಡಿಕೊಂಡಿದ್ದಾರೆ.
ನೇಪಾಳ ಸುಪ್ರೀಂ ಕೊರ್ಟ್ನ ಮಾಜಿ ಮುಖ್ಯನ್ಯಾಯಮೂರ್ತಿ ಸುಶೀಲಾ ರ್ಕಾ ಮತ್ತು ಕಾಠ್ಮಂಡು ಮೇಯರ್ ಬಾಲೆನ್ ಷಾರ ಹೆಸರು ಮಧ್ಯಂತರ ಸರ್ಕಾರದ ನೇತೃತ್ವಕ್ಕಾಗಿ ಕೇಳಿ ಬರುತ್ತಿದೆ. ಗುರುವಾರ ರ್ಕಾ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೇಮಿಸುವುದನ್ನು ವಿರೋಧಿಸಿ ಕೆಲವು ಯುವಕರ ಗುಂಪು ಸೇನಾ ಕಚೇರಿ ಹೊರಗೆ ಘೋಷಣೆ ಕೂಗಿದಾಗ ಘರ್ಷಣೆ ಉಂಟಾಗಿದೆ. ಇದೇ ವೇಳೆ ಧರಣ್ನ ಮೇಯರ್ ಹರ್ಕಾ ಸಂಪಂಗ್ ಬೆಂಬಲಿಗರೂ ಸಹ ಘರ್ಷಣೆಯಲ್ಲಿ ಪಾಲ್ಗೊಂಡರು. ಈ ವೇಳೆ ಕೆಲವರು ಮುಷ್ಠಿ ಕಾಳಗ ನಡೆಸಿದ್ದಾರೆ. ನೇಪಾಳಿ ಸೇನಾ ಯೋಧರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದು ವರದಿಯಾಗಿದೆ.
ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ದೆಲ್ ಬುಧವಾರ ಪ್ರತಿಭಟನಾಕಾರರ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಮಧ್ಯಂತರ ಸರ್ಕಾರ ರಚನೆ ಸೇರಿದಂತೆ ಹಲವು ವಿಷಯಗಳು ಮತ್ತು ಪ್ರತಿಭಟನಾಕಾರರ ಬೇಡಿಕೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಗುರುವಾರವೂ ಸಹ ಸೇನಾ ಕಚೇರಿಯಲ್ಲಿ ಅಧ್ಯಕ್ಷ ರಾಮಚಂದ್ರ ಪೌಡೆಲ್ ಮತ್ತು ಸೇನಾ ಮುಖ್ಯಸ್ಥರೊಂದಿಗೆ ಪ್ರತಿಭಟನಾಕಾರರು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ದೇಶದ 25 ಕ್ಕೂ ಹೆಚ್ಚು ಜೈಲುಗಳಿಂದ 15 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ. ಗುರುವಾರ ಬೆಳಗ್ಗೆ ಮಾಧೇಶ್ ಪ್ರಾಂತ್ಯದ ರಾಮೆಚಾಪ್ ಜೈಲಿನಲ್ಲಿ ಕೈದಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಕೈದಿಗಳು ಗ್ಯಾಸ್ ಸಿಲಿಂಡರ್ ಸ್ಪೋಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಗುಂಡು ಹಾರಿಸಿದ್ದು, ಘರ್ಷಣೆಯಲ್ಲಿ 8 ಕೈದಿಗಳು ಮೃತಪಟ್ಟಿದ್ದಾರೆ. ಜೈಲುಗಳಿಂದ ಪರಾರಿಯಾಗಿರುವ ಕೈದಿಗಳಲ್ಲಿ ಕೆಲವರು ತಾವೇ ವಾಪಸ್ಸಾಗಿದ್ದರೆ, ಕೆಲವರನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೇಪಾಳದ ಜೈಲುಗಳಿಂದ ತಪ್ಪಿಸಿಕೊಂಡು ಭಾರತ ನೇಪಾಳ ಗಡಿ ಭಾಗಕ್ಕೆ ಬಂದಿದ್ದ 60 ಕೈದಿಗಳನ್ನು ಸಶಸ್ತ್ರ ಸೀಮಾ ಬಲದ ಯೋಧರು ಬಂಧಿಸಿದ್ದಾರೆ. ಕಳೆದ ಎರಡು ದಿನಗಳಳ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಗಡಿಯಲ್ಲಿ ಕೈದಿಗಳನ್ನು ಬಂಧಿಸಿ ಆಯಾ ರಾಜ್ಯಗಳ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ ಎಂದು ಎಸ್ಎಸ್ಬಿ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಮತ್ತು ನೇಪಾಳ ನಡುವಿನ 1751 ಕಿ.ಮೀ. ಉದ್ದದ ಗಡಿಯಲ್ಲಿ ಸುಮಾರು 60 ಸಾವಿರ ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಪ್ರತಿಭಟನೆ ಬಳಿಕ ನೇಪಾಳಿ ಸೇನೆ ದೇಶದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರ ಸಂಚಾರದ ಮೇಲೆ ನಿಷೇಧ ಹೇರಲಾಗಿದೆ. ಇದೇ ವೇಳೆ ರಾತ್ರಿ 7 ರಿಂದ ಬೆಳಗ್ಗೆ 6 ರವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 6 ರಿಂದ 10 ರವರೆಗೆ ಮತ್ತು ಸಂಜೆ 5 ರಿಂದ 7 ಗಂಟೆಯವರೆಗೆ ಮಾತ್ರ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.