ಸರ್ಕಾರಿ ನೌಕರರ ತುಟ್ಟಿಭತ್ಯೆಗೆ ತಡೆ, ಗಳಿಕೆ ರಜೆಯೂ ರದ್ದು

vidhana soudha
Published on

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು 2021ರ ಜುಲೈ ತನಕ ತಡೆ ಹಿಡಿದಿರುವ ರಾಜ್ಯ ಸರ್ಕಾರ, ಒಂದು ವರ್ಷದ ಅವಧಿಗೆ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನೂ ರದ್ದುಗೊಳಿಸಿದೆ. ಹಣಕಾಸಿನ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ 2020 ಜನವರಿ, ಜುಲೈ ಹಾಗೂ 2021 ಜನವರಿಯಲ್ಲಿ ನೀಡಬೇಕಾಗಿರುವ ತುಟ್ಟಿಭತ್ಯೆ ತಡೆಹಿಡಿಯಲಾಗಿದೆ. ಸರ್ಕಾರಿ ನೌಕರರು, ನಿವೃತ್ತ ನೌಕರರು, ಯುಜಿಸಿ, ಐಸಿಎಆರ್, ಎಐಸಿಟಿಇ ನೌಕರರು, ಜಿಲ್ಲಾ ಪಂಚಾಯಿತಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಅನ್ವಯವಾಗಲಿದೆ.

ಗಳಿಕೆ ರಜೆ: ಪ್ರತಿ ವರ್ಷ 15 ರಜೆಗಳನ್ನು ವಾಪಸ್ ಮಾಡಿ ನಗದು ಪಡೆಯುವ ಸೌಲಭ್ಯ ರದ್ದು ಮಾಡಲಾಗಿದೆ. ಆದರೆ ಜನವರಿಯಿಂದ ಡಿಸೆಂಬರ್ ಒಳಗೆ ನಿವೃತ್ತರಾಗುವ ನೌಕರರಿಗೆ ಗಳಿಕೆ ರಜೆ ನಗದೀಕರಣ ಸೌಲಭ್ಯ ಮುಂದುವರಿಸಲಾಗಿದೆ.

ಆಕ್ರೋಶ: ಕರೊನಾ ವಿರುದ್ಧ ಹೋರಾಡುತ್ತಿರುವ ನೌಕರರಿಗೆ ಉತ್ತೇಜನ ನೀಡುವ ಬದಲು ತುಟ್ಟಿಭತ್ಯೆ ತಡೆ ಹಿಡಿದಿರುವುದು ಸರಿಯಲ್ಲ ಎಂದು ಕರ್ನಾಟಕ ಸಚಿವಾಲಯ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಆರೋಗ್ಯ, ಪೊಲೀಸ್, ಕಂದಾಯ ಸೇರಿ ತುರ್ತು ಸೇವೆಯ ಇಲಾಖೆಯ ಸಿಬ್ಬಂದಿ ಕರೊನಾ ಸೇನಾನಿಗಳಾದ ಸೇವೆ ಸಲ್ಲಿಸಿದ್ದಾರೆ. ಇವರಿಗೆ ತುಟ್ಟಿಭತ್ಯೆ ಕಡಿತ ಮಾಡಿರುವುದು ಸರ್ಕಾರ ನೀಡುತ್ತಿರುವ ಉಡುಗೊರೆಯೇ ಎಂದು ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ತುಟ್ಟಿಭತ್ಯೆ ಕಡಿತ ಮಾಡಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನವನ್ನು ಏಕೆ ನೀಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ತುಟ್ಟಿಭತ್ಯೆ ತಡೆ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಮೂರು ತುಟ್ಟಿಭತ್ಯೆ ಹಾಗೂ ಗಳಿಕೆ ರಜೆ ನಗದೀಕರಣ ರದ್ದು ಮಾಡುವ ಮೂಲಕ ಸರ್ಕಾರ ಗದಾಪ್ರಹಾರ ಮಾಡಿದೆ. ಕೇಂದ್ರ ಸರ್ಕಾರಕ್ಕೆ ಸರಿಸಮಾನ ವೇತನ ನೀಡದೆ ಇರುವಾಗ ಕೇಂದ್ರದ ಮಾನದಂಡ ಅನುಸರಿಸುವುದು ಏಕೆ? ಒಂದು ದಿನದ ವೇತನವನ್ನು ಸರ್ಕಾರ ಕೇಳದೆ ನೌಕರರು ಕೊಟ್ಟಿದ್ದಾರೆ. ಸರ್ಕಾರದ ಈ ಕ್ರಮದ ವಿರುದ್ಧ ಹೋರಾಟ ಮಾಡಲಾಗುವುದು. | ಮಹದೇವಯ್ಯ ಮಠಪತಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net