

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ‘ಇ-ಸ್ವತ್ತು’ ತಂತ್ರಾಂಶಕ್ಕೆ ಕನ್ನ ಹಾಕಿ ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳ ಆಸ್ತಿಗೆ ಅಧಿಕೃತ ಇ-ಖಾತಾ ನೀಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದು ಒಂದೂವರೆ ವರ್ಷದ ಹಿಂದೆಯೇ ಬೆಳಕಿಗೆ ಬಂದರೂ ಇಲಾಖೆ ಕಠಿಣ ಕ್ರಮ ಕೈಗೊಂಡಿಲ್ಲ. ಹೊಸ ಬಡಾವಣೆ ನಿರ್ವಣಕ್ಕೆ ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದಿಂದ ಭೂ ಪರಿವರ್ತನೆಗೆ ಅನುಮತಿ ಪಡೆದು ಶೇ.55 ವಸತಿ ಉದ್ದೇಶಕ್ಕೆ, ಶೇ.10 ಉದ್ಯಾನವನ ಮತ್ತು ಉಳಿದ ಜಾಗವನ್ನು ರಸ್ತೆ ಸೇರಿದಂತೆ ನಾಗರಿಕ ಸೌಲಭ್ಯಕ್ಕೆ ಮೀಸಲಿಡಬೇಕು.
ಬೆಂಗಳೂರು ನಗರ, ಹೊರವಲಯ ಹಾಗೂ ರಾಜ್ಯದ ಪಟ್ಟಣ, ನಗರಸಭೆ ಸುತ್ತಮುತ್ತ ಗ್ರಾಮ ಪಂಚಾಯಿತಿಗಳಲ್ಲಿ ಭೂ ಪರಿವರ್ತನೆ ಮಾಡದೆ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ. ಈ ಸೈಟುಗಳಿಗೆ ಪಂಚಾಯಿತಿ ಮೂಲಕ ಇ-ಸ್ವತ್ತು ತಂತ್ರಾಂಶದಲ್ಲಿ ಇ-ಖಾತಾ ಕೊಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹೆಚ್ಚಿನ ಬೆಲೆ ಹಾಗೂ ಗ್ರಾಹಕರಿಗೆ ಬ್ಯಾಂಕ್ ಸಾಲ ಸಿಗುವುದಿಲ್ಲ. ಇದನ್ನು ಅರಿತ ಕೆಲ ಪಿಡಿಒ, ಗುತ್ತಿಗೆ ಕರ ವಸೂಲಿಗಾರರು ಮತ್ತು ಕಂಪ್ಯೂಟರ್ ಆಪರೇಟರ್ಗಳು ಇ-ಸ್ವತ್ತು ತಂತ್ರಾಂಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಅಕ್ರಮ ಹೇಗೆ?: ಎಲ್ಲಿಯೋ ಕುಳಿತು ಮತ್ಯಾವುದೋ ಗ್ರಾಮ ಪಂಚಾಯಿತಿ ಕಚೇರಿ ಇ-ಸ್ವತ್ತು ತಂತ್ರಾಂಶಕ್ಕೆ ಲಾಗಿನ್ ಆಗಿ ಮತ್ಯಾರಿಗೋ ಕಾನೂನು ಬಾಹಿರವಾಗಿ ಇ-ಖಾತಾ ಮಾಡಿಕೊಡಲಾಗುತ್ತಿದೆ. ಇದು ಸಂಬಂಧಪಟ್ಟ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಒ, ಎಫ್ಡಿಎ ಗಮನಕ್ಕೆ ಬರುತ್ತಿಲ್ಲ. ಮಾಡದ ತಪ್ಪಿಗೆ ಅಧಿಕಾರಿಗಳು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.
ಈ ಹಿಂದೆ ದೇವನಹಳ್ಳಿಯ ಚನ್ನಹಳ್ಳಿ ಗ್ರಾಮ ಪಂಚಾಯಿತಿ ಲಾಗಿನ್ ಐಡಿಯನ್ನು ರಾಮನಗರ ಜಿಲ್ಲೆ ಹಾರೋಹಳ್ಳಿ ಕಂಪ್ಯೂಟರ್ ಆಪರೇಟರ್ ಮತ್ತು ಪಿಡಿಒ ದುರ್ಬಳಕೆ ಮಾಡಿಕೊಂಡು 36 ಕಂದಾಯ ನಿವೇಶನಗಳಿಗೆ ಇ-ಖಾತಾ ನೀಡಿದ್ದರು. ಇದಲ್ಲದೆ, ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಕನಕಪುರ ರಸ್ತೆ ತರಳು, ಸೋಮನಹಳ್ಳಿ ಮತ್ತು ಕೆಂಗೇರಿಯ ಸೂಲಿಕೆರೆ ಗ್ರಾ.ಪಂನ ಲಾಗಿನ್ ಐಡಿ ದುರ್ಬಳಕೆ ಮಾಡಿಕೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ. ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಅಧೀನದಲ್ಲಿ ಇರುವ ಗ್ರಾಮ ಪಂಚಾಯಿತಿಗಳ ಇ-ಸ್ವತ್ತುಗಳ ಪಿಡಿಒ, ಇಒ ಲಾಗಿನ್ ಐಡಿ ಮೂಲಕ ನೂರಾರು ಇ-ಖಾತಾ ನೀಡಲಾಗಿದೆ. ಈ ಕುರಿತು ಕಾರ್ಯನಿರ್ವಾಹಕ ಅಧಿಕಾರಿ ದಕ್ಷಿಣ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದು, ಮತ್ತೊಂದು ಬೃಹತ್ ದಂಧೆ ಬೆಳಕಿಗೆ ಬಂದಿದೆ.
ಜಾಣ ಕುರುಡುತನ?: ‘ರಾಷ್ಟ್ರೀಯ ಮಾಹಿತಿ ಕೇಂದ್ರ’(ಎನ್ಐಸಿ) ಇ-ಸ್ವತ್ತು ವೆಬ್ಸೈಟ್ನ್ನು ನಿರ್ವಹಿಸುತ್ತಿದೆ. ಇ-ಸ್ವತ್ತು ದುರ್ಬಳಕೆ ಮಾಡಿಕೊಂಡ ಬಗ್ಗೆ ಎನ್ಐಸಿ ತಜ್ಞರು ಲಾಗಿನ್ ಐಡಿ, ಐಪಿ ವಿಳಾಸ ಪತ್ತೆ ಮಾಡಬಹುದು. ಆದರೆ, ಈ ಬಗ್ಗೆ ದೂರು ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರ ತನಿಖೆಗೂ ಸಹಕರಿಸದೆ ವಾಮಮಾರ್ಗದಲ್ಲಿ ಇತ್ಯರ್ಥಕ್ಕೆ ಪ್ರಯತ್ನಿಸುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇ-ಸ್ವತ್ತು ಅಕ್ರಮದ ಹಿಂದೆ ದೊಡ್ಡ ಜಾಲವಿದೆ ಎಂಬ ಅನುಮಾನ ಹುಟ್ಟುಹಾಕಿದೆ.
ತಾಲೂಕು: ಸಂಖ್ಯೆ
ಬೆಂಗಳೂರು ಉತ್ತರ: 335
ಬೆಂಗಳೂರು ದಕ್ಷಿಣ: 778
ಬೆಂಗಳೂರು ಪೂರ್ವ: 1105
ಯಲಹಂಕ: 3285
ಆನೇಕಲ್: 574
ದೇವನಹಳ್ಳಿ: 834
ದೊಡ್ಡಬಳ್ಳಾಪುರ: 186
ಹೊಸಕೋಟೆ: 219
ನೆಲಮಂಗಲ: 872
ಒಟ್ಟು: 8188
ಲಕ್ಷ ರೂ.ವರೆಗೆ ಡೀಲ್: ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲಿ 8,188 ಹಾಗೂ ರಾಜ್ಯದ ವಿವಿಧ ನಗರಸಭೆ ವ್ಯಾಪ್ತಿಯಲ್ಲಿ 474 ಅನಧಿಕೃತ ಬಡಾವಣೆಗಳಿವೆ. ಬಹುತೇಕ ಸೈಟ್ ಮಾರಾಟ ಆಗಿದ್ದು, ಖಾತಾ ಆಗದೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಏಜೆಂಟ್ ಮತ್ತು ಪಂಚಾಯಿತಿ ಅಧಿಕಾರಿಗಳು 1 ಸೈಟಿಗೆ 60 ಸಾವಿರದಿಂದ 1 ಲಕ್ಷ ರೂ. ಲಂಚ ಪಡೆದು ಬೇರೆಯವರ ಇ-ಸ್ವತ್ತು ಐಡಿಯಲ್ಲಿ ಲಾಗಿನ್ ಆಗಿ ಇ-ಖಾತಾ ಕೊಡುತ್ತಿದ್ದಾರೆ.
ಅಧಿಕಾರಿಗಳೇ ಶಾಮೀಲು: ಇ-ಸ್ವತ್ತಿಗೆ ಲಾಗಿನ್ ಆಗಬೇಕಾದರೆ, ಡಾಂಗಲ್, ರಹಸ್ಯ ಸಂಖ್ಯೆ ಮತ್ತು ಬೆರಳಚ್ಚು ಕೊಡಬೇಕು. ಸಾಮಾನ್ಯ ಜನರು ಲಾಗಿನ್ ಆಗಲು ಅಸಾಧ್ಯ. 2021ರ ಸೆ.17 ರಿಂದ 21ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಪಂ ಇ-ಸ್ವತ್ತನ್ನು ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಬಿಡದಿ ಹೋಬಳಿ ಭೈರಮಂಗಲ ಗ್ರಾಪಂನಲ್ಲಿ ಕುಳಿತು ಲಾಗಿ ಆಗಿ ಅಕ್ರಮವಾಗಿ ಇ-ಖಾತಾ ಮಾಡಿಕೊಂಡಿದ್ದ. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಿಇಒ ಕೊಟ್ಟ ದೂರಿನ ಮೇರೆಗೆ ಈಶಾನ್ಯ ವಿಭಾಗ ಸಿಇಎನ್ ಪೊಲೀಸರು, ಆಪರೇಟರ್ ಭರತ್ ಎಂಬಾತನನ್ನು ಬಂಧಿಸಿದ್ದರು. ಪಿಡಿಒ ಮತ್ತು ಕೆಲ ಅಧಿಕಾರಿಗಳು ತಲೆಮರೆಸಿಕೊಂಡಿದ್ದು, ಜಾಮೀನು ಕೋರಿ ಕೋರ್ಟ್ ಮೊರೆಹೋಗಿದ್ದಾರೆ.