ಕನ್ನಡ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ | CM Siddaramaiah

CM siddaaramaih
Published on

ಬೆಂಗಳೂರು: ಪ್ರಸ್ತುತ ಯುಗಕ್ಕೆ ತಕ್ಕಂತೆ ಚಲಾವಣೆಯಲ್ಲಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ನಮ್ಮ ರಾಜ್ಯದಲ್ಲಿ ಉದ್ಯೋಗ ನಷ್ಟವಾಗದಂತೆ ಕನ್ನಡ ಭಾಷೆಯನ್ನು ಹೊಸ ಸವಾಲಿಗೆ ಸಿದ್ಧಪಡಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಸಲಹೆ ನೀಡಿದರು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೦ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, ಮಾಹಿತಿ ತಂತ್ರಜ್ಞಾನ‌ ಯುಗ ಈಗ ಆರ್ಟಿಫಿಷಿಯಲ್ ತಂತ್ರಜ್ಞಾನದ ಯುಗವಾಗಿ ಮಾರ್ಪಾಡಾಗುತ್ತಿದೆ. ಇದರಿಂದ ಉದ್ಯೋಗ ನಷ್ಟವಾಗುವ ಆತಂಕವೂ ಎದುರಾಗಿದ್ದು, ಕನ್ನಡ ಭಾಷೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯವನ್ನೂ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.

2,500 ಕೋಟಿ. ರೂ. ವೆಚ್ಚದಲ್ಲಿ ಶಾಲೆಗಳ ಅಭಿವೃದ್ದಿ

ಕರ್ನಾಟಕದ ಅನೇಕ ಕಡೆಗಳಲ್ಲಿ ಶತಮಾನ ಪೂರೈಸಿರುವ ಸುಮಾರು 3000 ಸರ್ಕಾರಿ ಶಾಲೆಗಳಿವೆ. ರಾಜ್ಯದಲ್ಲಿನ ಶಾಲಾ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಸಲುವಾಗಿ 2,500 ಕೋಟಿ. ರೂ. ವೆಚ್ಚದಲ್ಲಿ 800 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (KPS) ಪರಿವರ್ತಿಸಿ ಪ್ರತಿ ಶಾಲೆಯನ್ನು 4 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. ಅಲ್ಪಸಂಖ್ಯಾತ ಸಮುದಾಯಗಳು ಮುಖ್ಯವಾಹಿನಿಗೆ ಬರುವ ಜೊತೆ ಜೊತೆಗೆ, ಎಲ್ಲರೊಂದಿಗೆ ಬೆರೆಯುವಂತೆ ಮಾಡಲು ಪ್ರಾಥಮಿಕ ಕನ್ನಡವನ್ನು ಮದರಸಾ ಶಿಕ್ಷಣದ ಭಾಗವಾಗಿ ಕಲಿಸಲು 180 ಮದರಸಾಗಳಲ್ಲಿ ಕನ್ನಡ ಕಲಿಸಲಾಗುತ್ತಿದೆ. ಇದನ್ನು ರಾಜ್ಯದಲ್ಲಿರುವ 1500 ಮದರಸಾಗಳಿಗೆ ವಿಸ್ತರಿಸಲಾಗುವುದು. ಇದಕ್ಕಾಗಿ ರೂ.483 ಕೋಟಿ ವೆಚ್ಚದಲ್ಲಿ 100 ಉರ್ದು ಶಾಲೆಗಳನ್ನು ಕೆ.ಪಿ.ಎಸ್. ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡದ ಏಕೀಕರಣಕ್ಕೆ ಶ್ರಮಿಸಿದವರ ಸ್ಮರಣೆ..

ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಎಲ್ಲ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಮೈಸೂರಿನ ವಿದ್ಯಾರ್ಥಿ ರಾಮಸ್ವಾಮಿ, ಬಳ್ಳಾರಿಯ ರಂಜಾನ್ ಸಾಬ್ ಮುಂತಾದವರಿಗೆ ತಲೆಬಾಗಿ ನಮಿಸುತ್ತೇನೆ. ಏಕೀಕರಣ ಚಳುವಳಿಯ ಬೀಜಗಳನ್ನು ಬಿತ್ತಿ, ಅದನ್ನು ಮುನ್ನಡೆಸಿದ ಆಲೂರು ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ, ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್.ಎಚ್. ದೇಶಪಾಂಡೆ, ಕೌಜಲಗಿ ಶ್ರೀನಿವಾಸ ರಾವ್, ಕೆಂಗಲ್ ಹನುಮಂತಯ್ಯ ಮುಂತಾದ ಮಹನೀಯರನ್ನು ಹೃದಯ ತುಂಬಿ ಸ್ಮರಿಸುತ್ತೇನೆ. ಇವರೆಲ್ಲರ ಹೋರಾಟದ ಫಲವೆ ಇಂದಿನ ಕರ್ನಾಟಕ ಎಂದು ಹೇಳಿದರು.

'ಮನುಷ್ಯ ಜಾತಿ ತಾನೊಂದೇ ವಲಂ’

'ಮನುಷ್ಯ ಜಾತಿ ತಾನೊಂದೇ ವಲಂ’ ಎಂದ ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೂ ಕನ್ನಡದ ಸಾಹಿತ್ಯ ಸಂಪತ್ತು ಸಾಕಷ್ಟು ಸಮೃದ್ಧಗೊಂಡಿದೆ. ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿದೆ. ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕೃತಿ ಹಾಗೂ ಬಹು ಜನಾಂಗಗಳು ಒಟ್ಟುಗೂಡಿ ಬದುಕುವ ತತ್ವಗಳನ್ನು ನಮ್ಮ ಹಿರಿಯರು ಕಂಡುಕೊಂಡಿದ್ದು, ಹಿಂದಿನಿಂದಲೂ ಎಲ್ಲರೂ ಒಟ್ಟಾಗಿ ಬಾಳಿ ಬದುಕಿ ನಾಡನ್ನು ಕಟ್ಟಿ ನಿಲ್ಲಿಸಿ ಸಮೃದ್ಧಗೊಳಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ಪ್ರಯತ್ನಿಸಿದ್ದಾರೆ. ಈ ವರ್ಷ ಕನ್ನಡಕ್ಕೆ ಬೂಕರ್ ಪ್ರಶಸ್ತಿಯನ್ನು ಶ್ರೀಮತಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿಯವರು ತಂದುಕೊಡುವ ಮೂಲಕ ನಮ್ಮ ಭಾಷೆಯ ಶಕ್ತಿಯನ್ನು ವಿಶ್ವ ವೇದಿಕೆಗೆ ಕೊಂಡೊಯ್ದಿದ್ದಾರೆ. ಅವರನ್ನೂ ಈ ಸಂದರ್ಭದಲ್ಲಿ ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.

ರಾಜ್ಯದ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ

ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಮಲತಾಯಿ ಧೋರಣೆಯನ್ನು ತೋರುತ್ತಿದೆ. 4.5 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ತೆರಿಗೆ ಸಂಪತ್ತನ್ನು ಕರ್ನಾಟಕವು ನೀಡುತ್ತಿದ್ದರು ನಮಗೆ ಬಿಡಿಗಾಸು ಕೊಟ್ಟು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತಿದೆ. ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ನಿರಂತರ ಹುನ್ನಾರ ನಡೆಯುತ್ತಿದೆ. ಹಿಂದಿ, ಸಂಸ್ಕೃತ ಭಾಷೆಗಳ ಅಭಿವೃದ್ಧಿಗೆ ಮಾತ್ರ ಅನುದಾನಗಳನ್ನು ನೀಡಲಾಗುತ್ತಿದೆ. ಕನ್ನಡವೂ ಸೇರಿದಂತೆ ಉಳಿದ ದೇಶಭಾಷೆಗಳನ್ನು ನಿರ್ಲಕ್ಷಿಸಲಾಗುತ್ತಿದೆ.

ರಾಜ್ಯದ ಅಭಿವೃದ್ಧಿಗೆ ಪೂರಕವಾಗಬೇಕಾಗಿದ್ದ ಯೋಜನೆಗಳನ್ನು ಕರ್ನಾಟಕಕ್ಕೆ ಕೊಡದೆ ವಂಚಿಸಲಾಗುತ್ತಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದ್ದರೂ, ನೀಡಬೇಕಾದ ಅನುದಾನಗಳನ್ನೂ ಕೊಡದೆ ಅನ್ಯಾಯ ಮಾಡಲಾಗುತ್ತಿದೆ. ಕರ್ನಾಟಕ ವಿರೋಧಿಯಾದ ಎಲ್ಲವನ್ನೂ ವಿರೋಧಿಸಲೇಬೇಕಾಗಿದೆ. ನಾಡಿನ ಇತಿಹಾಸ, ಪರಂಪರೆಗಳ ನೆನಪುಗಳನ್ನು ಹೊಸ ತಲೆಮಾರುಗಳಲ್ಲಿ ಮೂಡಿಸಿ ಅವರಲ್ಲಿ ಅಭಿಮಾನ ಮೂಡಿಸೋಣ. ನಮಗಿರುವ ಸವಾಲುಗಳನ್ನೆ ಅವಕಾಶವಾಗಿ ಮಾರ್ಪಡಿಸುವ ಶಕ್ತಿ ನಮ್ಮ ಯುವ ತಲೆಮಾರಿಗಿದೆ. ಯುವ ತಲೆಮಾರು ಎದ್ದು ನಿಂತು ಕನ್ನಡ ಮತ್ತು ಕರ್ನಾಟಕವನ್ನು ಜಗತ್ತಿನ ಮುಂದುವರೆದ ಸಮಾಜಗಳ ಮಟ್ಟಕ್ಕೆ ನಿಲ್ಲಿಸಬೇಕಾಗಿದೆ.

ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಕಳೆದ 5 ವರ್ಷಗಳಲ್ಲಿ 15 ನೇ ಹಣಕಾಸು ಆಯೋಗದ ಮೂಲಕ ಕೇಂದ್ರವು ಮಾಡಿದ ದ್ರೋಹದಿಂದ ಸುಮಾರು 70 ಸಾವಿರ ಕೋಟಿ ರೂಗಳಷ್ಟು ನಷ್ಟವಾಗಿದೆ. 15 ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ ಅನುದಾನ, ಕೇಂದ್ರವು ಬಜೆಟ್‌ನಲ್ಲಿ ಘೋಷಿಸಿ ಕೊಡದೆ ಹೋದ ಅನುದಾನ, ಯೋಜನೆಗಳಲ್ಲಾದ ಅನ್ಯಾಯ ಸೇರಿ ಸುಮಾರು 1 ಲಕ್ಷ ಕೋಟಿ ರೂಗಳಿಗೂ ಹೆಚ್ಚು ಅನ್ಯಾಯವಾಗಿದೆ.

ಈ ಎಲ್ಲ ಅನ್ಯಾಯದ ವಿರುದ್ಧ ನಮ್ಮ ಸರ್ಕಾರ ಹೋರಾಟ ನಡೆಸುತ್ತಿದೆ. ಜನ ಸಮುದಾಯವು ಕೂಡ ಗಂಭಿರವಾಗಿ ಪ್ರಶ್ನಿಸಬೇಕಾದ ಅನಿವಾರ್ಯತೆ ಉದ್ಭವಿಸಿದ್ದು. ಬಲಿಷ್ಠ ಒಕ್ಕೂಟ ವ್ಯವಸ್ಥೆಯ ಕನಸು ನಮ್ಮ ಸಂವಿಧಾನ ಪಿತೃಗಳದ್ದಾಗಿತ್ತು. ಇದನ್ನು ಕಳೆದ ಕೆಲವು ವರ್ಷಗಳಿಂದ ಛಿದ್ರಗೊಳಿಸಿ ರಾಜ್ಯಗಳ ಅಧಿಕಾರವನ್ನು ಕಬ್ಜಾ ಮಾಡುವ ವಸಾಹತುವಾದಿ ಮನೋಭಾವ ಕಾಣುತ್ತಿದೆ. ಕೇಂದ್ರದ ಈ ತಾರತಮ್ಯಗಳ ವಿರುದ್ಧ ಇಡೀ ನಾಡು ಸಂವಿಧಾನಾತ್ಮಕವಾಗಿ ನಿಂತು ಪ್ರತಿಭಟಿಸದೆ ಹೋದರೆ ನಮ್ಮನ್ನು ಆಪೋಶನ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net