

Patna: ಬಿಹಾರದ ವಿಧಾನಸಭಾ ಚುನಾವಣೆಯ (Bihar Election) ಪ್ರಚಾರ ಅಬ್ಬರದಿಂದ ಸಾಗಿದ್ದು, ಮೊದಲ ಹಂತದ ಚುನಾವಣೆಗೆ ಕೇವಲ ಐದು ದಿನ ಬಾಕಿ ಉಳಿದಿದೆ. ಮಹಾ ಮೈತ್ರಿಕೂಟ ಇಂಡಿಯಾ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದು, ಎಲ್ಲರ ಚಿತ್ತ ಎನ್ಡಿಎದತ್ತ ನೆಟ್ಟಿದೆ.
ಇದೇ ವಿಷಯವಾಗಿ ಪಾಟ್ನಾದಲ್ಲಿ ಮಾತನಾಡಿರುವ ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಪ್ರಸ್ತುತ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ನಿತೀಶ್ ಕುಮಾರ್ರನ್ನು ಉನ್ನತ ಹುದ್ದೆಗೆ ಬೆಂಬಲಿಸುವುದನ್ನು ಬಿಜೆಪಿ ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.
ಸ್ವತಃ ತಾವೇ ಮುಖ್ಯಮಂತ್ರಿಯಾಗುವ ಸಾಧ್ಯತೆಗಳ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಡಿಸಿಎಂ ಚೌಧರಿ, ಸಧ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಬಿಹಾರವು ಮೊದಲ ಮುಖ್ಯಮಂತ್ರಿ ಕೃಷ್ಣ ಸಿನ್ಹಾ ಬಳಿಕ ಕರಾಳ ಅಧ್ಯಾಯವನ್ನು ಕಂಡಿದ್ದು, ಈ 40 ವರ್ಷಗಳಲ್ಲಿ ಅನೇಕ ಮುಖ್ಯಮಂತ್ರಿಗಳು ಅಧಿಕಾರವಹಿಸಿಕೊಂಡು, ಯಾರೂ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿಲ್ಲ. ನಮ್ಮ ಸಿಎಂ ನಿತೀಶ್ ಕುಮಾರ್ ಬಿಹಾರಕ್ಕೆ ಅಭಿವೃದ್ಧಿ ಎಂದರೆ ಏನೆಂದು ತೋರಿಸಿದ್ದಾರೆ, 2005 ರ ನಂತರ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಮತ್ತು ಸೈಕಲ್‌ಗಳು ಸಿಕ್ಕವು, ರಾಜ್ಯದಲ್ಲಿ ಈ ಮೊದಲು 2,000 ಪ್ರೌಢಶಾಲೆಗಳಿದ್ದವು, ಈಗ ಅದು 10,000ಕ್ಕೆ ಬಂದು ತಲುಪಿವೆ ಎಂದರು.
1990 ರಲ್ಲಿ ಲಾಲು ಪ್ರಸಾದ್ ಯಾದವ್ ಬಿಜೆಪಿಯ ಬೆಂಬಲದೊಂದಿಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಆದರೆ, ಅವರು ಬಿಹಾರವನ್ನು ಅವಮಾನಿಸಿದರು, ಆದ್ದರಿಂದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯಿತು. 2000 ರಲ್ಲಿ ಜೆಡಿಯು ಕೇವಲ 34 ಶಾಸಕರನ್ನು ಹೊಂದಿತ್ತು ಮತ್ತು ಬಿಜೆಪಿ 70 ಶಾಸಕರನ್ನು ಹೊಂದಿತ್ತು. ಬಿಹಾರದ ಹಿತಾಸಕ್ತಿಗಾಗಿ ಬಿಜೆಪಿ ನಿತೀಶ್ರನ್ನು ಬೆಂಬಲಿಸಿತು. 2020 ರಲ್ಲಿ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲು ಒಪ್ಪದಿದ್ದರೂ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದರು, ನಿತೀಶ್ ಕುಮಾರ್ ಇರುವವರೆಗೆ ಬಿಜೆಪಿ ಅವರನ್ನೇ ಬೆಂಬಲಿಸಲಿದೆ, ಇದರಲ್ಲಿ ಬೇರೆ ಯೋಚನೆ ಇಲ್ಲ ಎಂದು ಹೇಳಿದರು.
ನಿತೀಶ್ ಕುಮಾರ್ ಅವರ ಆರೋಗ್ಯದ ಸುತ್ತಲಿನ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಚೌಧರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡರು. ನಿನ್ನೆ ಮಳೆ ಬರುತ್ತಿತ್ತು, 36 ವರ್ಷದ ಯುವಕನೊಬ್ಬ ಮನೆಯಲ್ಲಿ ಮಲಗಿದ್ದ, ಇತ್ತ 75 ವರ್ಷದ ವ್ಯಕ್ತಿಯೊಬ್ಬರು ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು ಎಂದರು.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)