

ಹಿರಿಯೂರು: ಸಫಾಯಿ ಕರ್ಮಚಾರಿಗಳ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಡಿದರು.
ಆಯೋಗದ ವತಿಯಿಂದ ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳನ್ನು ಪರಿಶೀಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಸರ್ಕಾರದ ಸೌಲಭ್ಯಗಳನ್ನು ಪೌರಕಾರ್ಮಿಕರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರಸಭೆ ಅಧ್ಯಕ್ಷೆ ಶಂಷುನ್ನೀಸಾ ಮಾತನಾಡಿ, ಹಿರಿಯೂರು ನಗರಸಭೆಯಲ್ಲಿ 47 ಪೌರಕಾರ್ಮಿಕ ಹುದ್ದೆ ಖಾಲಿ ಇದ್ದು, ನಗರದ ಜನಸಂಖ್ಯೆ 70 ಸಾವಿರ ದಾಟಿದೆ. ನೈರ್ಮಲ್ಯ, ಕಸ ವಿಲೇವಾರಿ, ಸ್ವಚ್ಛತೆ, ಕುಡಿವ ನೀರು ನಿರ್ವಹಣೆಗೆ ಸಮಸ್ಯೆ ಆಗಿದೆ. ಆದ್ದರಿಂದ ಖಾಲಿ ಹುದ್ದೆ ಭರ್ತಿ ಮಾಡಲು ಕ್ರಮಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ತರುವಂತೆ ಆಯೋಗದ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ತಹಸೀಲ್ದಾರ್ ಶಿವಕುಮಾರ್, ಸಮಾಜ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಉಮೇಶ್ ಇತರರಿದ್ದರು.