ಅಧ್ಯಯನದ ಜತೆಗೆ ಉದ್ಯೋಗ ಪೂರಕ ಕೌಶಲ ಬೆಳೆಸಿಕೊಳ್ಳಿ; ಡಾ. ಅಶೋಕ ಕುರ್ಲಿ

17-RNR-05
Published on

ರಾಣೆಬೆನ್ನೂರ: ವಿದ್ಯಾರ್ಥಿಗಳು ಅಧ್ಯಯನ ಜತೆಗೆ ಉದ್ಯೋಗಕ್ಕೆ ಪೂರಕವಾದ ಕೌಶಲ ಬೆಳಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಅಶೋಕ ಕುರ್ಲಿ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಗ್ರಂಥಪಾಲಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಬಹುದೊಡ್ಡ ಸವಾಲಿನ ಕೆಲಸ. ಹೀಗಾಗಿ ಪದವಿ ಹಂತದಲ್ಲಿಯೇ ಉದ್ಯೋಗ ಅಗತ್ಯವಿರುವ ಪುಸ್ತಕಗಳನ್ನು ಓದುವ ಜತೆಗೆ ಸ್ಪೋಕನ್ ಇಂಗ್ಲೀಷ ಸೇರಿ ಇನ್ನಿತರ ಕೌಶಲಗಳನ್ನು ಬೆಳಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಪ್ರಾಚಾರ್ಯ ಆರ್.ಎಫ್. ಅಯ್ಯನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ನಿವೃತ್ತ ಉಪನ್ಯಾಸಕ ಬಿ.ಕೆ. ಕೊಟ್ಟದ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ಹನುಮಂತರಾಜು ಎನ್.ಬಿ., ಡಾ. ಎಸ್.ಐ. ಮಲ್ಲಿಗಾರ, ದೈಹಿಕ ಶಿಕ್ಷಣ ನಿರ್ದೇಶಕ ಸೋಮಶೇಖರ ಮಡಿವಾಳರ, ಕೆ.ಜೆ.ಆರ್. ಲೋಹಿಯಾ, ಮಂಜುನಾಥ ಎನ್.ಜಿ., ಯಮುನ ನಾಯ್ಕ, ಸಂತೋಷಕುಮಾರ, ಭಾಗ್ಯ ದೇವಗಿರಿಮಠ, ಪಿ.ಕೆ. ಬಿನ್ನಾಳ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net