ಬಿ.ಸರೋಜಾದೇವಿ ಹೆಸರಿನಲ್ಲಿ 'ಅಭಿನಯ ಸರಸ್ವತಿ' ಪ್ರಶಸ್ತಿ ಘೋಷಿಸಿದ ಸರ್ಕಾರ| Award

B Saroja Devi
Published on

ಬೆಂಗಳೂರು: ಇತ್ತೀಚೆಗೆ ನಿಧನರಾದ ಅಭಿನಯ ಸರಸ್ವತಿ ನಟಿ ಸರೋಜಾದೇವಿ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರ ಪ್ರಶಸ್ತಿ ಘೋಷಿಸಿ ಗೌರವ ಸಲ್ಲಿಸಿತು. ನಟಿ ಬಿ. ಸರೋಜಾದೇವಿ ಅವರು ಚಿತ್ರರಂಗಕ್ಕೆ ತಮ್ಮದೇ ಆದಂತಹ ಅನೇಕ ಕೊಡುಗೆಯನ್ನು ನೀಡಿದ್ದಾರೆ. ಹಾಗಾಗಿ ಅವರ ನಿಧನದ ಬಳಿಕ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಇನ್ನೂ ಈ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಮತ್ತೊಂದು ಗುಡ್​ನ್ಯೂಸ್​ ನೀಡಿದ್ದು, ಬಿ. ಸರೋಜಾದೇವಿ ಹೆಸರಿನಲ್ಲಿ ಹೊಸ ಪ್ರಶಸ್ತಿ ಘೋಷಿಸಲಾಗಿದೆ.

ಚಿತ್ರರಂಗದಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಹಿಳಾ ಸಾಧಕಿಯರಿಗೆ ಈ ಪ್ರಶಸ್ತಿ ಸಿಗಲಿದೆ. ಬಿ. ಸರೋಜಾದೇವಿ ಅವರ ಹೆಸರಿನಲ್ಲಿ ಈ ಗೌರವವನ್ನು ನೀಡಲಿರುವುದು ಅವರ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಸಂತಸ ತಂದಿದೆ. ಪಂಚಭಾಷಾ ನಟಿಯಾದ ದಿವಂಗತ ಬಿ.ಸರೋಜಾದೇವಿ ಅವರ ಹೆಸರಿನಲ್ಲಿ 'ಅಭಿನಯ ಸರಸ್ವತಿ' ಪ್ರಶಸ್ತಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಹೊರಡಿಸಿದೆ. ಈ ಪ್ರಶಸ್ತಿಯಡಿಯಲ್ಲಿ 1 ಲಕ್ಷ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕವನ್ನು ನೀಡಿ ಗೌರವಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕನ್ನಡದ ಮಹಾಕವಿ ಕಾಳಿದಾಸ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಿ.ಸರೋಜಾ ದೇವಿ ನಂತರ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟನೆ ಮಾಡಿ ಸೈ ಎನಿಸಿಕೊಂಡಿದ್ದರು.

(ಏಜೆನ್ಸೀಸ್)

ಅಮರ ಶಿಲ್ಪಿ ಜಕಣಾಚಾರಿ, ಮಲ್ಲಮ್ಮನ ಪವಾಡ, ಭಾಗ್ಯವಂತರು, ಬಬ್ರುವಾಹನ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ಲಕ್ಷ್ಮೀಸರಸ್ವತಿ, ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ತಮಿಳಿನ ಪಾಟ್ಟಾಲಿ ಮುತ್ತು, ಪಡಿಕಥ ಮೇಥೈ, ಕಲ್ಯಾಣ ಪರಿಸು, ತೆಲುಗಿನ ಪಂಡರಿ ಭಕ್ತಲು, ದಕ್ಷಯಜ್ಞಂ, ಹಿಂದಿಯ ಆಶಾ, ಮೆಹಂದಿ ಲಗ ಕೆ ರಖನಾ, ಮಲೆಯಾಳಂನ ಮುತ್ತುಮಿಂತ್ರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net