ಭ್ರಷ್ಟಾಚಾರದಲ್ಲಿ ಸಕ್ರಿಯ, ಅಭಿವೃದ್ಧಿಯಲ್ಲಿ ನಿಷ್ಕ್ರಿಯ ಸರ್ಕಾರ: ಆರ್.ಅಶೋಕ್ ಅಣಕ

R Ashok
Published on

ಬೆಂಗಳೂರು: ಭ್ರಷ್ಟಾಚಾರದಲ್ಲಿ ಸಕ್ರಿಯ, ಅಭಿವೃದ್ಧಿಯಲ್ಲಿ ನಿಷ್ಕ್ರಿಯವಾಗಿರುವ ‘ಗುರುವಾರದ ಸರ್ಕಾರ’ದಿಂದ ಏನು ತಾನೇ ಸಾಧ್ಯವೆಂದು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅಣಕವಾಡಿದ್ದಾರೆ.

ಸಿದ್ದರಾಮಯ್ಯ ಸಚಿವ ಸಂಪುಟದ ಸಹೋದ್ಯೋಗಿಗಳ ‘ಕಾರ್ಯಸಾಧನೆ ವರದಿ’ಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಳಿದ್ದಾರೆ ಎಂಬ ವರದಿ ಬಗ್ಗೆ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಆರ್.ಅಶೋಕ್ ಸಂದೇಶ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಅಧಿಕಾರ ತ್ಯಾಗ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷ ಕಟ್ಟಲು ದೇಶಾದ್ಯಂತ ಪ್ರವಾಸ ಮಾಡಿ ಶ್ರಮಿಸುತ್ತಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ತಮ್ಮದೇ ಪಕ್ಷದ ಸರ್ಕಾರ ಏನು ಮಾಡುತ್ತಿದೆ, ತಮ್ಮ ಪಕ್ಷದ ಗೋಳೇನು ಬಹುಶಃ ಮಾಹಿತಿ ಇಲ್ಲವೆಂದು ಕಾಣಿಸುತ್ತದೆ ಎಂದು ಆರ್.ಅಶೋಕ್ ಹೇಳಿದ್ದಾರೆ.

ಗುರುವಾರ ಮಾತ್ರ ಪ್ರತ್ಯಕ್ಷ

ಗುರುವಾರ ಸಚಿವ ಸಂಪುಟ ಸಭೆ ನಡೆಯುವ ದಿನ ಮಾತ್ರ ಸಿಎಂ, ಬಹುತೇಕ ಸಚಿವರು, ಅಧಿಕಾರಿಗಳು ವಿಧಾನಸೌಧ, ವಿಕಾಸಸೌಧದಲ್ಲಿ ಕಾಣಿಸಿಕೊಳ್ಳುತ್ತಾರೆ. ಬಾಕಿ ದಿನ ಎಲ್ಲರೂ ತಮ್ಮದೇ ಲೋಕದಲ್ಲಿ, ತಮ್ಮದೇ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿರುತ್ತಾರೆ ಎಂದು ಟೀಕಿಸಿದ್ದಾರೆ.

ಭ್ರಷ್ಟಾಚಾರದಲ್ಲಿ ಸುಳಿಯಲ್ಲಿ ಸಿಲುಕಿರುವ ಸಿಎಂಗೆ ಕಾನೂನು ಹೋರಾಟ, ಕುರ್ಚಿ ಉಳಿಸಿಕೊಳ್ಳುವ ಚಿಂತೆ. ಸಿಎಂ ಆಗಲು ತುದಿಗಾಲಲ್ಲಿ ನಿಂತಿರುವ ಡಿಸಿಎಂ ಸಾಹೇಬರಿಗೆ ಹಗಲು, ರಾತ್ರಿ ಅದೇ ಕನಸು. ಇನ್ನುಳಿದ ಕೆಲವರಿಗೆ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಿದೆಯೇ ಎನ್ನುವ ಆಸೆ.

ಹಿರಿಯ ಶಾಸಕರಿಗೆ ಸಂಪುಟ ಪುನಾರಚನೆಯಲ್ಲಿ ಒಂದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಚಿಂತೆ. ಇನ್ನು ರಾಜ್ಯದ ಆರ್ಥಿಕ ಪರಿಸ್ಥಿತಿ ಖರ್ಗೆಯವರಿಗೆ ತಿಳಿದೇ ಇದೆ. ಪಾಪ ಸಚಿವರು ಏನಾದರೂ ಸಾಧನೆ ಮಾಡಿದ್ದರೆ ತಾನೇ ವರದಿ ಕೊಡೋಕೆ ಎಂದು ಆರ್.ಅಶೋಕ್ ಕಾಲೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net