ಅಯೋಧ್ಯೆ ಹೋರಾಟದ ಹಾದಿಭಾಗ 5: ನಂಬಿಕೆಯ ತಾಣ ಅಯೋಧ್ಯೆ ಅಭಿವೃದ್ಧಿಗೆ ಪಣ

edit 2
Published on

ಶ್ರೀರಾಮ ಮಂದಿರ ನಿರ್ವಣದ ಪ್ರಕ್ರಿಯೆಯಿಂದ ಅಯೋಧ್ಯೆಯ ಚಿತ್ರಣವೇ ಬದಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳ ವೇಗ ಒಂದೆಡೆಯಾದರೆ, ಜನರ ಉತ್ಸಾಹ ಪ್ರವಾಸೋದ್ಯಮದ ನಿಟ್ಟಿನಲ್ಲಿ ಆಶಾವಾದ ಮೂಡಿಸಿದೆ. ಉತ್ತರಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈಗಾಗಲೇ ಹಲವು ಮಹತ್ವದ ಕಾಮಗಾರಿಗಳನ್ನು ಘೋಷಿಸಿ, ಅನುದಾನ ನಿಗದಿ ಮಾಡಿವೆ. ಈ ಕುರಿತಾದ ಮಾಹಿತಿ ಮತ್ತು ಈ ಹಿಂದೆ ರಾಜಕೀಯ ಪಕ್ಷಗಳು ವಹಿಸಿದ ಪಾತ್ರವನ್ನು ವಿವರಿಸಿದ್ದಾರೆ ರಾಘವ ಶರ್ಮ.

ಹಿಂದು ಶ್ರದ್ಧಾಳುಗಳ ಶತಮಾನದ ಕನಸು ನನಸಾಗುವ ಕ್ಷಣ. ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುವ ಮೂಲಕ ಅಯೋಧ್ಯೆಯ ಸರ್ವತೋಮುಖ ಅಭಿವೃದ್ಧಿಗೂ ಮುನ್ನುಡಿ ಬರೆಯುತ್ತಿದ್ದಾರೆ. ನಿತ್ಯವೂ ಪ್ರವಾಸಿಗರಿಗೆ ಸಾಕ್ಷಿಯಾದರೂ ಅಗತ್ಯ ಮೂಲಸೌಕರ್ಯಗಳಿಂದ ವಂಚಿತಗೊಂಡಿದ್ದ ನಗರದ ರಾಮ ಜನ್ಮಸ್ಥಾನದಲ್ಲಿ ಭವ್ಯ ರಾಮಮಂದಿರ ನಿರ್ವಣಗೊಳ್ಳುತ್ತಿರುವುದು ಅಯೋಧ್ಯೆಯ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಲಿದೆ. ಮಥುರಾ, ವಾರಾಣಸಿ, ಪ್ರಯಾಗರಾಜ್​ಗಳಂತೆ ಅಯೋಧ್ಯೆಯೂ ಉದ್ಯೋಗಾವಕಾಶದ ಹೊಸ ತಾಣವಾಗಿ ಬದಲಾಗಲಿದೆ.

ಕಳೆದ 30 ವರ್ಷಗಳಿಂದ ನಂಬಿಕೆ ಮತ್ತು ವಿವಾದದ ಕೇಂದ್ರ ಬಿಂದುವಾಗಿದ್ದ ಅಯೋಧ್ಯೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯ ಬರೆದಿದೆ. ಬಿಜೆಪಿಯ ಮಂದಿರ ಚಳವಳಿಗೆ ಹೊಸ ಹುರುಪು ನೀಡಿದ, ಸಂಘಟನಾತ್ಮಕವಾಗಿ ಪಕ್ಷವನ್ನು ಬಲಗೊಳಿಸಿದ, ಮಂಡಲ ರಾಜಕೀಯಕ್ಕೆ ಪರ್ಯಾಯವಾಗಿ ಮಂದಿರ ಆಂದೋಲನದ ರಾಜಕೀಯಕ್ಕೆ ಕಾರಣವಾಗಿದ್ದು ಅಯೋಧ್ಯೆಯೇ. ಹಿಂದಿ ಭಾಷೆಯ ಹೃದಯಭಾಗದಲ್ಲಿ ಹಿಂದುತ್ವ ರಾಜಕಾರಣಕ್ಕೆ ಮುಂದಾಗಬೇಕೆಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮುಂದಾಗಿದ್ದರಾದರೂ, 1984ರಲ್ಲಿ ಅವರ ಅಕಾಲಿಕ ಮರಣದಿಂದ ಇದು ಸಾಧ್ಯವಾಗಲಿಲ್ಲ. ಅಯೋಧ್ಯೆಯನ್ನು ‘ರಾಮ್ ಕಿ ಪುರಿ’ ಎಂಬ ಯೋಜನೆ ಮೂಲಕ ಅಭಿವೃದ್ಧಿಪಡಿಸಬೇಕೆಂದು ಇಂದಿರಾ ಗಾಂಧಿ ಯೋಚಿಸಿದ್ದರು. ಆದರೆ ಅದು ಸಾಕಾರಗೊಳ್ಳಲಿಲ್ಲ. ಹಾಗಂತ, ಮಂದಿರ ನಿರ್ಮಾಣ ಪ್ರಯತ್ನದ ಹಿಂದೆ ಕಾಂಗ್ರೆಸ್ ಪಾತ್ರವನ್ನು ಅಲಕ್ಷಿಸಲಾಗದು. ಕಾಂಗ್ರೆಸ್​ನ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭವದು. 1986ರಲ್ಲಿ ವಿವಾದಿತ ಕಟ್ಟಡದಲ್ಲಿ ಪೂಜೆಗಾಗಿ ನ್ಯಾಯಾಲಯ ಅವಕಾಶ ನೀಡಿತು. 1949ರ ಬಳಿಕ ‘ಜನ್ಮಸ್ಥಾನ’ದಲ್ಲಿ ಪೂಜೆ ನಡೆದೇ ಇರಲಿಲ್ಲ. ನ್ಯಾಯಾಲಯದ ಆದೇಶ ಹೊರಬಿದ್ದ ಒಂದೇ ಗಂಟೆಯಲ್ಲಿ ಮಂದಿರದ ಬೀಗ ತೆರೆದು ಪೂಜೆಗಳು ನಡೆದವು. 1989ರಲ್ಲಿ ವಿವಾದಿತ ಕಟ್ಟಡದ ಪಕ್ಕದಲ್ಲೇ ವಿಶ್ವ ಹಿಂದು ಪರಿಷತ್ ಏರ್ಪಡಿಸಿದ್ದ ರಾಮ ಮಂದಿರ ಶಿಲಾನ್ಯಾಸ ಸಮಾರಂಭದಲ್ಲಿ ಅಂದಿನ ಕೇಂದ್ರ ಸಚಿವ ಬೂಟಾ ಸಿಂಗ್ ಮತ್ತು ರಾಜ್ಯದ ಮುಖ್ಯಮಂತ್ರಿ ಎನ್.ಡಿ. ತಿವಾಡಿ ಅವರು ಪಾಲ್ಗೊಂಡಿದ್ದರು. ಮೇಲಾಗಿ, ರಾಜೀವ್ ಗಾಂಧಿ ಸರ್ಕಾರದ ಸಾಲಿಸಿಟರ್ ಜನರಲ್ ಆಗಿದ್ದ ಲಾಲ್ ನಾರಾಯಣ ಸಿನ್ಹಾ ಭಗವಾನ್ ಶ್ರೀರಾಮನ ಪರ ವಾದಪತ್ರ ರೂಪಿಸಿದ್ದು ಕೂಡ ಐತಿಹಾಸಿಕ ಘಟನೆಯಾಗಿತ್ತು. ಈ ವಾದಪತ್ರದಲ್ಲಿ ಶ್ರೀರಾಮನನ್ನು ‘ನ್ಯಾಯಿಕ ವ್ಯಕ್ತಿ’ಯಾಗಿ ಬಿಂಬಿಸಿದ್ದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತು. ಅಷ್ಟರಮಟ್ಟಿಗೆ ಕಾಂಗ್ರೆಸ್ ಪಾತ್ರವನ್ನಿಲ್ಲಿ ಮರೆಯುವಂತಿಲ್ಲ. ಆದರೆ, ನಂತರದ ವರ್ಷಗಳಲ್ಲಿ ಮಂದಿರ ಆಂದೋಲನ ಬಿಜೆಪಿಗೆ ರಾಜಕೀಯವಾಗಿ ಅನುಕೂಲವಾಗುತ್ತಿದೆ ಎಂಬುದನ್ನರಿತ ಕಾಂಗ್ರೆಸ್ ಅನಿವಾರ್ಯವಾಗಿ ತನ್ನ ನಿಲುವುಗಳನ್ನು ಬದಲಿಸುತ್ತ ಬಂತು.

ಸ್ಪಷ್ಟ ನಿಲುವಿನ ಕೊರತೆ: ಇಂದಿಗೂ ಕಾಂಗ್ರೆಸ್​ಗೆ ಮಂದಿರದ ಬಗ್ಗೆ ಸ್ಪಷ್ಟ ನಿಲುವುಗಳಿಲ್ಲ. ಈಚಿನ ದಿನಗಳಲ್ಲಿ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್​ನಾಥ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‘ಇದು ಬಿಜೆಪಿಯ ರಾಜಕೀಯಕ್ಕೆ ಸೀಮಿತವಾದ ವಿಷಯವಲ್ಲ. ನಾವೂ ಮಂದಿರ ನಿರ್ವಣವನ್ನು ಬೆಂಬಲಿಸುತ್ತೇವೆ’ ಎಂದು ಮುಕ್ತವಾಗಿ ಮಾತನಾಡಿದ್ದಾರೆ. ಆದರೆ, ರಾಹುಲ್ ಗಾಂಧಿಯವರ ‘ಮೃದು ಹಿಂದುತ್ವ’ ಮಾತ್ರ ಕಾಂಗ್ರೆಸ್​ನ ರಾಜಕೀಯ ನಿರ್ವಾತಕ್ಕೆ ಮದ್ದಾಗಲಿಲ್ಲ.

ಉತ್ತರ ಪ್ರದೇಶದ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳು ಮುಸ್ಲಿಂ ಮತದಾರರನ್ನೂ ಓಲೈಸುವ ತಂತ್ರಗಾರಿಕೆ ಅನುಸರಿಸಿದ್ದರಿಂದ ‘ಮಂದಿರ ನಿರ್ಮಾಣ ಮಾಡುತ್ತೇವೆ’ ಎಂಬುದನ್ನು ರಾಜಕೀಯ ದಾಳವನ್ನಾಗಿ ಪ್ರಯೋಗಿಸಲೇ ಇಲ್ಲ. ಹಾಗೆ ಮಾಡಿದ್ದಲ್ಲಿ, ರಾಜ್ಯದ ಅಲ್ಪಸಂಖ್ಯಾತ ಮತಗಳು ಕೈ ಜಾರುವ ಸಾಧ್ಯತೆಗಳಿದ್ದವು. ಆದರೆ, ಬಿಜೆಪಿ ಮೊದಲಿನಿಂದಲೂ ಹಿಂದು ಮತಬ್ಯಾಂಕ್​ನ್ನೇ ನಂಬಿಕೊಂಡಿದ್ದ ಪಕ್ಷ ಮತ್ತು ಈಗಲೂ ಬಿಜೆಪಿಯ ರಾಜಕೀಯ ವಿಸ್ತರಣೆಯಾಗಿರುವುದು ಅದೇ ಮತಬ್ಯಾಂಕ್​ನಿಂದಲೇ.

ಬಿಜೆಪಿಯ ಯೋಜನೆ: 1980ರ ದಶಕದಲ್ಲಿ ದೇಶವ್ಯಾಪಿ ವಿಸ್ತರಣೆಗೊಂಡಿದ್ದ ಕಾಂಗ್ರೆಸ್ ಎದುರಿಗೆ ಬಿಜೆಪಿಗೆ ಸಂಘಟನೆ ಬಲಗೊಳಿಸುವುದು ಅತಿದೊಡ್ಡ ಸವಾಲಾಗಿತ್ತು. ಭಾವನಾತ್ಮಕ ವಿಷಯದ ಮೂಲಕವೇ ಜನಸಮೂಹವನ್ನು ತಲುಪಬೇಕೆನ್ನುವುದು ಬಿಜೆಪಿ ಮುಖಂಡರ ಆಲೋಚನೆಯಾಗಿತ್ತು. ರಾಮಮಂದಿರ ನಿರ್ಮಾಣ ಚಳವಳಿ ಇದಕ್ಕೊಂದು ವೇದಿಕೆ ಒದಗಿಸಿತು ಮತ್ತು ಇದು ಪಕ್ಷವನ್ನು ಕೇಡರ್ ಆಧರಿತ ಪಕ್ಷವನ್ನಾಗಿ ಬದಲಿಸಿತು. ಅಯೋಧ್ಯೆ ‘ಹಣೆಬರಹ’ ರೂಪಿಸುವಲ್ಲಿ ಹಿಮಾಚಲ ಪ್ರದೇಶದ ಪಾಲಂಪುರ್ ಪ್ರಧಾನ ಪಾತ್ರವಹಿಸಿತು ಎಂಬುದು ಬಹುತೇಕರಿಗೆ ತಿಳಿದಿಲ್ಲ.

1989ರಲ್ಲಿ ಇಲ್ಲಿ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ, ‘ರಾಮಜನ್ಮಭೂಮಿಯಲ್ಲೇ ಬಾಬರಿ ಕಟ್ಟಡ ಕಟ್ಟಲಾಗಿದೆ. ಈ ವಿವಾದಿತ ಭೂಮಿಯಲ್ಲೇ ರಾಮಮಂದಿರ ನಿರ್ಮಾಣ ಆಗಬೇಕು ಮತ್ತು ಇದಕ್ಕಾಗಿ ವಿಶ್ವ ಹಿಂದು ಪರಿಷತ್ ನಡೆಸಲಿರುವ ಹೋರಾಟವನ್ನು ನಾವು ಬೆಂಬಲಿಸಬೇಕು’ ಎಂಬ ತೀರ್ಮಾನ ತೆಗೆದುಕೊಳ್ಳಲಾಯಿತು. ನಂತರ ಶುರುವಾದ ಮಂದಿರ ಚಳವಳಿ ದೇಶಾದ್ಯಂತ ಹಿಂದುಗಳನ್ನು ಬಡಿದೆಬ್ಬಿಸಿತು. ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಸೋಮನಾಥದಿಂದ ರಥಯಾತ್ರೆ ಕೈಗೊಂಡದ್ದು ದೇಶಾದ್ಯಂತ ಹಿಂದುಗಳನ್ನು ಒಗ್ಗೂಡಿಸಿತು. ಅಂದಿನಿಂದ ರಾಮಮಂದಿರದ ಕನಸು ಕಂಡಿದ್ದ ಮಠ-ಮಾನ್ಯಗಳು ರಾಜಕೀಯವಾಗಿ ಬಿಜೆಪಿಯನ್ನು ಬೆಂಬಲಿಸುತ್ತ ಬಂದವು.

1991ರ ನಂತರ ಅಯೋಧ್ಯೆ ವಿಧಾನಸಭೆ ಕ್ಷೇತ್ರವನ್ನು ಬಿಜೆಪಿಯೇ ಗೆಲ್ಲುತ್ತಿದೆ. 2012ರಲ್ಲಿ ಸಮಾಜವಾದಿ ಪಾರ್ಟಿ ಗೆದ್ದಿತ್ತು. ಆದರೆ, 2017ರಲ್ಲಿ ಮತ್ತೆ ಬಿಜೆಪಿ ಪಾಲಾಯಿತು. ಈ ಅವಧಿಯಲ್ಲಿ ನಡೆದಿರುವ 8 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 5 ಬಾರಿ ಗೆದ್ದಿದೆ.

ಜಿಲ್ಲೆಯಾಗಿ ಅಯೋಧ್ಯೆ: 2017ರಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಯ ಚಹರೆ ನಿಧಾನವಾಗಿ ಬದಲಾಗುತ್ತಿದೆ. ಫೈಜಾಬಾದ್ ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ಅಯೋಧ್ಯೆಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿದ ಯೋಗಿ ಸರ್ಕಾರ, ನಗರಕ್ಕೆ ನಗರ ಪಾಲಿಕೆಯ ಮಾನ್ಯತೆ ನೀಡಿತು. ಅದೇ ವರ್ಷದಂದು ರಿಷಿಕೇಶ್ ಉಪಾಧ್ಯಾಯ ಪಾಲಿಕೆ ಮೇಯರ್ ಆಗಿ ನೇಮಕಗೊಂಡರು. ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ ನಡೆಯುವ ದೀಪೋತ್ಸವ ದೇಶಾದ್ಯಂತ ಗಮನಸೆಳೆಯಲಾರಂಭಿಸಿದೆ. ದೀಪಗಳ ಈ ವಾರ್ಷಿಕ ಮೇಳಕ್ಕೆ ರಾಜ್ಯ ಹಬ್ಬದ ಮಾನ್ಯತೆ ಸಿಕ್ಕಿದೆ. ರಾಮ ಮಂದಿರ ಭೂಮಿಪೂಜೆ ಹಿನ್ನೆಲೆಯಲ್ಲಿ ಇಂದು ಕೂಡ 1.25 ಲಕ್ಷ ದೀಪಗಳನ್ನು ಬೆಳಗಿಸಿ ನದಿದಂಡೆಯಲ್ಲಿ ದೀಪೋತ್ಸವ ಆಚರಿಸಲಾಗುತ್ತಿದೆ.

ಅನ್ಸಾರಿಗೆ ಆಹ್ವಾನ: ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ಮಸೀದಿ ಮತ್ತು ಸುನ್ನಿ ವಕ್ಪ ಮಂಡಳಿ ಪರ ಅರ್ಜಿದಾರರಾಗಿದ್ದ ಇಕ್ಬಾಲ್ ಅನ್ಸಾರಿಗೂ ಭೂಮಿಪೂಜೆಯಲ್ಲಿ ಪಾಲ್ಗೊಳ್ಳುವಂತೆ ರಾಮಮಂದಿರ ಟ್ರಸ್ಟ್ ಆಹ್ವಾನ ನೀಡಿದೆ. ಮೋದಿ ಮತ್ತು ಯೋಗಿ ನಾಯಕತ್ವವನ್ನು ಶ್ಲಾಘಿಸಿರುವ ಅನ್ಸಾರಿ, ಮಂದಿರ ನಿರ್ವಣವನ್ನು ಸ್ವಾಗತಿಸಿದ್ದಾರೆ ಮತ್ತು ಹಿಂದು-ಮುಸ್ಲಿಂ ಐಕ್ಯತೆಯ ಸಂಕೇತ ಎಂದೂ ಒಪ್ಪಿಕೊಂಡಿದ್ದಾರೆ.

ಸಂಗ್ರಹಾಲಯ ವೈಶಿಷ್ಟ್ಯ: ಅಯೋಧ್ಯೆಗೆ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಸ್ಥಾನ ನೀಡುವ ಉದ್ದೇಶದಿಂದ ಈ ಮೂಲಕ ಇಲ್ಲಿನ ಸಂಸ್ಕೃತಿ, ಸಭ್ಯತೆಯನ್ನು ಎಲ್ಲೆಡೆ ವಿಸ್ತರಿಸುವ ಉದ್ದೇಶದಿಂದ ‘ರಾಮಾಯಣ ಸಂಗ್ರಹಾಲಯ’ ಸ್ಥಾಪಿಸುವ ಯೋಜನೆ ಈ ಮೊದಲೇ ರೂಪಿಸಲಾಗಿದೆ. 25 ಎಕರೆಯಲ್ಲಿ ನಿರ್ವಣವಾಗಲಿರುವ ಈ ಮ್ಯೂಸಿಯಂ ಭಗವಾನ್ ಶ್ರೀರಾಮನ ಜೀವನ ಮತ್ತು ಮೌಲ್ಯಗಳನ್ನು ದರ್ಶಿಸಲಿದೆ. ರಾಮಾಯಣದ ಎಲ್ಲ ಪ್ರಮುಖ ಘಟನಾವಳಿಗಳು ಇಲ್ಲಿ ಬಿಂಬಿತವಾಗಲಿವೆ. ಅಂತಾರಾಷ್ಟ್ರೀಯ ದರ್ಜೆಯಲ್ಲಿ ಇದನ್ನು ನಿರ್ವಿುಸುವ ಉದ್ದೇಶವಿದ್ದು, ದೇಶ ಹಾಗೂ ವಿದೇಶದ ಪ್ರವಾಸಿಗರಿಗೆ ರಾಮ ಹಾಗೂ ರಾಮಾಯಣ ಕುರಿತಾದ ಪ್ರತಿ ಮಾಹಿತಿ ಸಿಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಲೇಸರ್ ಶೋ ಕೂಡ ಇರಲಿದ್ದು, 20 ನಿಮಿಷದಲ್ಲಿ ವೀಕ್ಷಣೆ ಸಾಧ್ಯವಾಗುವಂತೆ ರೂಪಿಸಲಾಗುತ್ತದೆ. ಈ ಮ್ಯೂಸಿಯಂ ನಿರ್ವಣಕ್ಕಾಗಿ ಕೇಂದ್ರ ಸರ್ಕಾರ 150 ಕೋಟಿ ರೂಪಾಯಿ ಮಂಜೂರು ಮಾಡಲಿದೆ. ಅಲ್ಲದೆ, ರಾಮಾಯಣ ಮಹಾಕಾವ್ಯ ದೊಂದಿಗೆ ಸಂಬಂಧ ಹೊಂದಿರುವ ನೇಪಾಳ, ಶ್ರೀಲಂಕಾ ರಾಷ್ಟ್ರಗಳಿಗೆ ನೂತನ ವಸ್ತು ಸಂಗ್ರಹಾಲಯದ ಜತೆಗೆ ಸಂಪರ್ಕ ಕಲ್ಪಿಸಲು ಮಾರ್ಗಗಳ ಕುರಿತು ಚಿಂತನೆ ನಡೆದಿದೆ.

ಏನು ಲಾಭ? : ಈ ಮ್ಯೂಸಿಯಂನಿಂದ ರಾಮಾಯಣ ಮುಖೇನ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿದ್ದು, ಆ ಮೂಲಕ ಪ್ರವಾಸೋದ್ಯಮಕ್ಕೆ ಶುಕ್ರದೆಸೆ ಒದಗಿ ಬರಲಿದೆ. ಈ ಮುಖೇನ ಉದ್ಯೋಗಸೃಷ್ಟಿಯೂ ಸಾಧ್ಯವಾಗಲಿದೆ.

ಎಲ್ಲಿ?: ಈ ಮ್ಯೂಸಿಯಂ ರಾಮ ಜನ್ಮಭೂಮಿ ಆವರಣದಿಂದ 15 ಕಿಲೋಮೀಟರ್ ದೂರದಲ್ಲಿ ನಿರ್ವಣವಾಗಲಿದ್ದು, ಸೂಕ್ತ ಸಾರಿಗೆ ವ್ಯವಸ್ಥೆಯ ಏರ್ಪಾಡಿಗೆ ಯೋಜನೆ ರೂಪಿಸಲಾಗುತ್ತಿದೆ.

ವಾಸ್ತುಶಿಲ್ಪಿ ಸೋಮಪುರ: ಅಯೋಧ್ಯೆ ರಾಮಮಂದಿರದ ವಿನ್ಯಾಸವನ್ನು ರೂಪಿಸಿದವರು ಚಂದ್ರಕಾಂತ ಸೋಮಪುರ. 77 ವರ್ಷ ವಯಸ್ಸಿನ ಸೋಮಪುರ ರಾಮಮಂದಿರದ ಮುಖ್ಯ ವಾಸ್ತುಶಿಲ್ಪಿಯಾಗಿದ್ದು, ಇವರ ಮನೆತನ ಪರಂಪರಾಗತವಾಗಿ ದೇಗುಲ ವಾಸ್ತುಶಿಲ್ಪ ಕಲೆಯಲ್ಲಿ ತೊಡಗಿಕೊಂಡಿದೆ. 1987ರಲ್ಲೇ ರಾಮಮಂದಿರದ ವಿನ್ಯಾಸವನ್ನು ಚಂದ್ರಕಾಂತ ರೂಪಿಸಿದ್ದು ಪ್ರಸಕ್ತ ಈ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡದಂತೆಯೂ ಆಗ್ರಹಿಸಿದ್ದಾರೆ. ವಿಶ್ವ ಹಿಂದು ಪರಿಷತ್ತಿನ ಆಗಿನ ಅಧ್ಯಕ್ಷ ಅಶೋಕ ಸಿಂಘಲ್ ಅವರ ಮನವಿಯ ಮೇರೆಗೆ ಚಂದ್ರಕಾಂತ ಈ ವಿನ್ಯಾಸವನ್ನು ರೂಪಿಸಿದ್ದಾರೆ. ‘ಮಂದಿರ ನಿರ್ವಣಕ್ಕೆ ಪಹಾಡಪುರದ ಸ್ಯಾಂಡ್​ಸ್ಟೋನ್ ಬಳಕೆ ಆಗಬೇಕು. ಏಕೆಂದರೆ ಈ ಕಲ್ಲುಗಳ ಆಯಸ್ಸು 1500 ವರ್ಷ. ಮಂದಿರ ನಿರ್ವಣದ ನಿಟ್ಟಿನಲ್ಲಿ ಈಗಾಗಲೇ ಶೇಕಡ 70ರಷ್ಟು ಶಿಲ್ಪಗಳ ಕೆತ್ತನೆ ಪೂರ್ಣಗೊಂಡಿದೆ. ಕಳೆದ 33 ವರ್ಷಗಳ ಕಾಲ ಈ ನಿಟ್ಟಿನಲ್ಲಿ ಹಾಕಿರುವ ಪರಿಶ್ರಮ ವ್ಯರ್ಥವಾಗಬಾರದು’ ಎಂಬುದು ಸೋಮಪುರ ಅಭಿಪ್ರಾಯ. ಚಂದ್ರಕಾಂತ ಸೋಮಪುರ ಸರಿಸುಮಾರು 200 ದೇಗುಲಗಳ ವಿನ್ಯಾಸ ರೂಪಿಸಿ ಕೊಟ್ಟಿದ್ದಾರೆ. ಗಮನಾರ್ಹವೆಂದರೆ ಸೋಮಪುರ ಮನೆತನದ 16 ಪೀಳಿಗೆಗಳು ದೇವಸ್ಥಾನಗಳ ವಿನ್ಯಾಸಗಳನ್ನು ರೂಪಿಸಿಕೊಟ್ಟಿವೆ. ಇವುಗಳಲ್ಲಿ ಗುಜರಾತಿನ ಅಕ್ಷರಧಾಮ ಮತ್ತು ಸೋಮನಾಥ ಮಂದಿರ ಪ್ರಮುಖವಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net