ಆಡಳಿತ ಸುಧಾರಣೆ ಸ್ವಾಗತಾರ್ಹ: ಕೆಲಸಗಳು ಸಮರೋಪಾದಿಯಲ್ಲಿ ನಡೆಯಬೇಕು

Vidhanasoudha vvani
Published on

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಿ ಐದು ತಿಂಗಳು ಕಳೆದಿವೆ. 2023ರ ರಾಜ್ಯ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಸರ್ಕಾರದ ವರ್ಚಸ್ಸು ಹೆಚ್ಚಿಸಲು ಆಡಳಿತ ಪಕ್ಷ ಈ ಕ್ರಮಕ್ಕೆ ಮುಂದಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐದು ತಿಂಗಳ ಅವಧಿಯಲ್ಲಿ ಒಂದಷ್ಟು ಜನಪ್ರಿಯ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂಬುದೇನೋ ನಿಜ. ಆದರೆ, ಆಡಳಿತಯಂತ್ರ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಜನಸಾಮಾನ್ಯರಿಂದ ಮಾತ್ರವಲ್ಲ ಕೆಲ ಸಚಿವರಿಂದಲೂ ಕೇಳಿಬರುತ್ತಿದೆ. ಅನುದಾನ ಮಂಜುರಾಗಿದ್ದರೂ, ಸೂಕ್ತ ಸಮಯದಲ್ಲಿ ಬಿಡುಗಡೆಯಾಗುತ್ತಿಲ್ಲ, ಶಾಸಕರ ಬೇಡಿಕೆಗಳಿಗೆ ಮನ್ನಣೆ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಾಪಕವಾಗಿಯೇ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಬೊಮ್ಮಾಯಿ ಕಳೆದ ಐದು ತಿಂಗಳುಗಳಲ್ಲಿನ ಆದೇಶಗಳು, ಪ್ರಮುಖ ಕಡತಗಳನ್ನು ತರಿಸಿಕೊಂಡು, ಅನುಷ್ಠಾನದ ಪ್ರಮಾಣವನ್ನು ಪರಿಶೀಲಿಸಲಿದ್ದಾರೆ. ಈ ಮೂಲಕ ಆಡಳಿತ ಸುಧಾರಣೆಗೆ ಮುಂದಾಗಿದ್ದಾರೆ.

ಆಡಳಿತ ಸುಧಾರಣೆಯ ಭಾಗವಾಗಿಯೇ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಎಲ್ಲ ಸಿ ದರ್ಜೆಯ ನೌಕರರ ಕಾರ್ಯಕ್ಷಮತೆಗೆ 100 ಅಂಕಗಳ ಪರೀಕ್ಷೆ ನಿಗದಿ ಪಡಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಕಾಯಂ ಪೂರ್ವ ಸೇವಾವಧಿ ಘೋಷಣೆಗೆ ಮುನ್ನ ಈ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ನಿಯಮ ನಮೂದಿಸದೆ ಕಡತ ಮಂಡಿಸುವುದು, ಕಾಗುಣಿತ ದೋಷ, ಗಣಕಯಂತ್ರದ ಕನಿಷ್ಟ ಜ್ಞಾನ ಇಲ್ಲದಿರುವುದರಿಂದಾಗಿ ಈ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ ನೌಕರರ ಕಾರ್ಯಕ್ಷಮತೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಸರ್ಕಾರ ಎಷ್ಟೇ ಒಳ್ಳೆಯ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಘೋಷಿಸಿದರೂ ಅದರ ಸಮರ್ಪಕ ಅನುಷ್ಠಾನದ ಹೊಣೆ ಆಡಳಿತಶಾಹಿಯದ್ದು. ಆದರೆ, 1.70 ಲಕ್ಷದಷ್ಟು ಕಡತಗಳು ವಿಲೇವಾರಿಯಾಗಬೇಕಾಗಿವೆ ಎಂಬ ಅಂಶವೇ ಪರಿಸ್ಥಿತಿಯ ತೀವ್ರತೆಗೆ ಸಾಕ್ಷಿ. ‘ಕೂಡಲೇ ಕಡತ ವಿಲೇವಾರಿ ಮಾಡಬೇಕು, ಇಲ್ಲದಿದ್ದರೆ ಕ್ರಮ ಅನಿವಾರ್ಯ’ ಎಂಬ ಎಚ್ಚರಿಕೆಯೂ ಎಲ್ಲ ಇಲಾಖೆ ಮುಖ್ಯಸ್ಥರಿಗೆ ರವಾನೆಯಾಗಿದೆ. ಆದರೆ, ಈ ಹಿಂದೆಯೂ ಇಂಥ ಎಚ್ಚರಿಕೆ ರವಾನಿಸಿದ ಬಳಿಕ, ಕೆಲ ದಿನಗಳ ಕಾಲ ಕೆಲಸಗಳು ಚುರುಕಿನಿಂದ ನಡೆಯುತ್ತವೆ. ಆ ಬಳಿಕ ಮತ್ತೆ ಅದೇ ಹಳೆಯ ಸ್ಥಿತಿ. ಶಾಸಕರು ಹಾಗೂ ಕೆಲ ಸಚಿವರ ಸೂಚನೆಗಳಿಗೆ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲವೆಂದರೆ ಜನಸಾಮಾನ್ಯರ ಸ್ಥಿತಿ ಏನು? ಅಧಿಕಾರಶಾಹಿ ಹೀಗೆ ಜಡತ್ವದಲ್ಲಿ ಮುಳುಗಿದರೆ ಸರ್ಕಾರದ ಪ್ರಯತ್ನಗಳು, ಸದಾಶಯಗಳು ವ್ಯರ್ಥವಾದಂತೆಯೇ. ಆ ಸ್ಥಿತಿ ಸೃಷ್ಟಿಯಾಗುವ ಮುನ್ನವೇ ಮುಖ್ಯಮಂತ್ರಿಗಳು ಸುಧಾರಣೆ ಕ್ರಮಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಈ ಪ್ರಕ್ರಿಯೆ ಕೆಲ ದಿನಗಳಿಗೆ ಸೀಮಿತವಾಗದೆ ಆಡಳಿತಕ್ಕೆ ಸುಧಾರಣೆಯ, ಚುರುಕುತನದ ಹೊಸಸ್ಪರ್ಶ ಸಿಗುವಂತಾಗಬೇಕು. ಆಗಲೇ ಯೋಜನೆಗಳ ಸಮರ್ಪಕ ಅನುಷ್ಠಾನದ ಜತೆಗೆ, ಜನರ ದೂರುದುಮ್ಮಾನ, ಸಂಕಷ್ಟಗಳಿಗೆ ಪರಿಣಾಮಕಾರಿ ಸ್ಪಂದನೆ ಸಿಗಲು ಸಾಧ್ಯ. ಈ ವಾಸ್ತವವನ್ನು ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net