ಅರ್ಧ ತಾಸಿನಲ್ಲಿ ಸಿಕ್ತು ಇ-ಖಾತಾ!

Justice Phanindra meeting
ಕುವೆಂಪು ರಂಗಮಂದಿರದಲ್ಲಿ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ದೂರು ಸ್ವೀಕಾರ ಮಾಡಿದರು.
Published on

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಎ-ಖಾತಾ, ಬಿ-ಖಾತಾ ಗೊಂದಲ ಮುಂದುವರಿದಿದೆ. ಜನರು ಪರದಾಟ ನಡೆಸುತ್ತಿದ್ದಾರೆ. ಆದರೆ ಇಬ್ಬರು ಅರ್ಜಿದಾರರಿಗೆ ಇ-ಖಾತಾ ಕೊಡಿಸಲು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರೇ ಬರಬೇಕಾಯ್ತು.

ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಸಭೆಯಲ್ಲಿ ಅಶೋಕನಗರದ ಎ.ಸುಮತಿ ಮತ್ತು ಎ.ಸರೋಜಾ ಅವರು ಪ್ರತ್ಯೇಕವಾಗಿ 31ನೇ ವಾರ್ಡ್‌ನಲ್ಲಿ ಮನೆ ಇ-ಖಾತೆ ವಿಚಾರವಾಗಿ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಹಲವು ದಿನಗಳಿಂದ ಇ-ಖಾತಾ ಕೊಡಲು ಸತಾಯಿಸುತ್ತಿರುವ ಬಗ್ಗೆ ದೂರಿದರು. ಗುರುವಾರ ಇ-ಖಾತಾ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಅರ್ಧ ತಾಸಿನಲ್ಲೇ ಇ-ಖಾತಾ ದಾಖಲೆಯು ಉಪ ಲೋಕಾಯುಕ್ತರ ಮೂಲಕ ಮಾಲೀಕರ ಕೈಸೇರಿತು.

ಇನ್ಯಾರಿಗೋ ಪರಿಹಾರ!:

ವಿದ್ಯಾನಗರದ ನನ್ನ ಜಾಗದಲ್ಲಿ ಪಾಲಿಕೆಯಿಂದ ಕಾಲುವೆ ತೆಗೆದಿದ್ದಾರೆ. ಆದರೆ ಪರಿಹಾರವನ್ನು ಬೇರೆಯವರಿಗೆ ನೀಡಿದ್ದಾರೆ ಎಂದು ಜಿ.ಪಿ.ಚಂದ್ರಶೇಖರ್ ದೂರಿದರು. ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು. ಪರಿಹಾರ ಬೇರೆಯವರಿಗೆ ನೀಡಿದ್ದರೆ ಈಗ ತೆಗೆದ ಕಾಲುವೆ ಮುಚ್ಚಿ, ಪರಿಹಾರ ಪಡೆದವರ ಜಾಗದಲ್ಲಿ ಕಾಲುವೆ ತೆಗೆಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಫಣೀಂದ್ರ ಸೂಚಿಸಿದರು.

ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಲೋಕಾಯುಕ್ತ ಜಿಲ್ಲಾ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ, ಜಿ.ವಿ.ವಿಜಯಾನಂದ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್, ಡಿಸಿಎಫ್‌ಗಳಾದ ಶಿವಶಂಕರ್, ಪ್ರಸನ್ನಕೃಷ್ಣ ಪಟಗಾರ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಉಪಸ್ಥಿತರಿದ್ದರು.

300 ದೂರು, 79 ಅರ್ಜಿ ವಿಚಾರಣೆ

ಸಾರ್ವಜನಿಕರಿಂದ ದೂರು ಸ್ವೀಕಾರ, ವಿಚಾರಣೆ ಸಭೆಯಲ್ಲಿ ಸರ್ಕಾರಿ ಇಲಾಖೆಗಳು, ಸಂಸ್ಥೆಗಳಿಗೆ ಸಂಬಂಧಿಸಿ 300 ದೂರು ಸ್ವೀಕೃತಗೊಂಡಿದ್ದು, 79 ಅರ್ಜಿ ವಿಚಾರಣೆ ನಡೆಸಿದರು. ಪಾಲಿಕೆ, ಕಂದಾಯ ಇಲಾಖೆ, ಗ್ರಾಪಂಗಳು, ಕುವೆಂಪು ವಿಶ್ವವಿದ್ಯಾಲಯ, ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ವಿರುದ್ಧ ಅರ್ಜಿದಾರರು ದೂರು ಸಲ್ಲಿಸಿದರು. 3 ಲಕ್ಷ ರೂ. ಒಳಗಿನ ಆದಾಯ ಇರುವ ದೂರುದಾರರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಪಡೆಯಲು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net