ಆಶ್ರಯ ಮನೆ ನಿರ್ಮಾಣ ವಿಳಂಬ ಬೇಡ: ಕೆ.ಎಸ್.ಈಶ್ವರಪ್ಪ

IMG_3611
Published on

ಶಿವಮೊಗ್ಗ: ನಗರದ ಗೋಪಿಶೆಟ್ಟಿಕೊಪ್ಪ ಮತ್ತು ಗೋವಿಂದಾಪುರದಲ್ಲಿ ಎರಡನೇ ಹಂತದ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಗೋಪಿಶೆಟ್ಟಿಕೊಪ್ಪದಲ್ಲಿ ವಸತಿ ಇಲಾಖೆ ಮತ್ತು ರಾಜೀವ್‌ಗಾಂಧಿ ವಸತಿ ನಿಗಮದಿಂದ ಗುರುವಾರ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಎರಡನೇ ಹಂತದ 1,836 ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, 2ನೇ ಹಂತದ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿ ಶುಕ್ರವಾರ(ಸೆ.30)ದಿಂದಲೇ ಪ್ರಾರಂಭಗೊಳ್ಳಲಿದೆ ಎಂದರು.

ಮೊದಲ ಹಂತದ ಆಶ್ರಯ ಮನೆ ಕಾಮಗಾರಿ ವಿಳಂಬವಾಗಿದೆ. ಸರ್ಕಾರದ ಯೋಜನೆ ಆಗಿರುವುದರಿಂದ ಹಣಕಾಸಿನ ಸಮಸ್ಯೆಯಿಂದ ಸ್ವಲ್ಪ ನಿಧಾನವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 8 ಲಕ್ಷ ರೂ. ವೆಚ್ಚದಲ್ಲಿ ಪ್ರತಿ ಮನೆ ನಿರ್ಮಾಣ ಆಗುತ್ತಿದೆ. ಸಾಮಾನ್ಯ ವರ್ಗದ ಫಲಾನುಭವಿಗಳು 80 ಸಾವಿರ ರೂ. ಮತ್ತು ಎಸ್ಸಿ ಎಸ್ಟಿ ಫಲಾನುಭವಿಗಳು 50 ಸಾವಿರ ರೂ. ಕಟ್ಟಬೇಕಿದೆ. ಸರ್ಕಾರದಿಂದ ಸಬ್ಸಿಡಿ ಸಿಗಲಿದ್ದು, ಬ್ಯಾಂಕ್‌ನಿಂದ ಸಾಲ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ನಗರ ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ಮಾತನಾಡಿದರು. ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಆಶ್ರಯ ಸಮಿತಿ ಸದಸ್ಯ ಲಕ್ಷ್ಮಣ್, ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಲಕ್ಷ್ಮೀ ಶಂಕರನಾಯ್ಕ, ಇ.ವಿಶ್ವಾಸ್, ನಾಮ ನಿರ್ದೇಶನ ಸದಸ್ಯರಾದ ಶಿರೀಶ್, ಹೇಮಂತ್, ಸೆಲ್ವಂ, ಮೂರ್ತಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಎನ್.ಕೆ.ಜಗದೀಶ್, ಬಂಡಿ ಇಂಡಿ ಇನ್ ಫ್ರಾ ಮಾಲೀಕ ಅರ್ಜುನ್ ಬಂಡಿ, ಶ್ರೀಕಾಂತ್ ಬಂಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net