

ಬೆಂಗಳೂರು: ಕನ್ನಡದಲ್ಲಿ ‘ಛಲಗಾರ’, ‘ಬಂಗಾರದ ಮಕ್ಕಳು’ ಸೇರಿ ಮರಾಠಿಯ ‘ೆಬ್ರವರಿ 14’, ‘ಮಿಷನ್ ಆ್ಯಂಬುಲೆನ್ಸ್’ ನಿರ್ದೇಶಿಸಿರುವ ಆರ್. ರವೀಂದ್ರ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಗೋಪಿಲೋಲ’. ಇತ್ತೀಚೆಗಷ್ಟೆ ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ಬಿಡುಗಡೆ ಮಾಡಲಾಗಿತ್ತು. ಇದರ ಬೆನ್ನೆಲ್ಲೆ ಚಿತ್ರತಂಡ ಮತ್ತೊಂದು ಸಾಂಗ್‌ನ್ನು ರಿಲೀಸ್ ಮಾಡಿದೆ. ‘ನಿನ್ನನ್ನೆ ನಿನ್ನನ್ನೆ ನೆಚ್ಚಿಕೊಂಡು, ಪರಿಣಾಮವಾಗಿದೆ. ಪರಿಹಾರ ಬೇಕಿದೆ’ ಎಂದು ಆರಂಭವಾಗುವ ಈ ಗೀತೆಯನ್ನು ಸಾಹಿತಿ ಜಯಂತ್ ಕಾಯ್ಕಿಣಿ ರಚಿಸಿದ್ದಾರೆ. ರಾಜೇಶ್ ಕೃಷ್ಣನ್ ಹಾಗೂ ಅನುರಾಧಾ ಭಟ್ ಧ್ವನಿಯಾಗಿದ್ದಾರೆ. ಮಿದುನ್ ಅಶೋಕನ್ ಸಂಗೀತ ನೀಡಿದ್ದಾರೆ.
ಈ ಗೀತೆಯ ಸಮುದ್ರದ ದಡದಲ್ಲಿ ಶೂಟಿಂಗ್ ಮಾಡಲಾಗಿದ್ದು, ನಾಯಕ ನಟ ಮಂಜುನಾಥ್ ಅರಸ ಹಾಗೂ ನಿಮಿಷಾ ಕೆ. ಚಂದ್ರ ಹೆಜ್ಜೆಹಾಕಿದ್ದಾರೆ. ಈ ಹಾಡನ್ನು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ಉಮೇಶ ಬಣಕಾರ್ ಬಿಡುಗೊಳಿಸಿದರು. ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ‘ಒಂದು ಸಾಂಗ್ ಶೂಟಿಂಗ್ ಹಲವರ ಶ್ರಮ ಇರುತ್ತದೆ. ಇದೀಗ ಈ ಗೀತೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಲೋಕೇಷನ್, ನಟನೆ ಎರಡನ್ನೂ ಸಮದೂಗಿಸಲಾಗಿದೆ’ ಎಂದರು. ಚಿತ್ರದಲ್ಲಿ ಜಾಹ್ನವಿ, ಎಸ್. ನಾರಾಯಣ್, ಪದ್ಮಾ ವಾಸಂತಿ, ನಾಗೇಶ್ ಯಾದವ್, ಸ್ವಾತಿ, ಹಿರಿಯ ನಿರ್ದೇಶಕ ಜೋಸೈಮನ್, ತೆಲುಗು ನಟ ಸಪ್ತಗಿರಿ ತಾರಾಗಣದಲ್ಲಿದ್ದಾರೆ. ಉಳಿದಂತೆ ಕೇಶವ ಚಂದ್ರ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಕೆಎಂ ಪ್ರಕಾಶ್ ಸಂಕಲನ, ಸೂರ್ಯಕಾಂತ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.