ಗೋಪಿ ಸರ್ಕಲ್ ಇನ್ಮುಂದೆ ಟಿ.ಸೀನಪ್ಪ ವೃತ್ತ

T. R. Ashwathtanarayan Shetty press meet
ಶ್ರೀನಿಧಿ ಟೆಕ್ಸ್‌ಟೈಲ್ಸ್ ಪಾಲುದಾರ ಟಿ.ಆರ್.ಅಶ್ಚತ್ಥನಾರಾಯಣ ಶೆಟ್ಟಿ ಮಾತನಾಡಿದರು. ಸೀನಪ್ಪ ಶೆಟ್ಟಿ ಕುಟುಂಬಸ್ಥರಾದ ವೆಂಕಟೇಶ್‌ಮೂರ್ತಿ, ಟಿ.ಎ.ಸಂದೀಪ್, ವಿಶ್ವನಾಥ, ಗುರುಚರಣ್, ಚೇತನ್ ಇದ್ದರು.
Published on

ಶಿವಮೊಗ್ಗ: ನಗರದ ಹೃದಯಭಾಗದಲ್ಲಿ ಟಿ.ಸೀನಪ್ಪ ವೃತ್ತದ ನಾಮಫಲಕ ಅನಾವರಣ ಸಮಾರಂಭ ಆ.11ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀನಿಧಿ ಟೆಕ್ಸ್‌ಟೈಲ್ಸ್ ಪಾಲುದಾರ ಟಿ.ಆರ್.ಅಶ್ಚತ್ಥನಾರಾಯಣ ಶೆಟ್ಟಿ ತಿಳಿಸಿದರು.

ಟಿ.ಸೀನಪ್ಪ ವೃತ್ತವೇ ಈಗಿನ ಗೋಪಿ ವೃತ್ತವಾಗಿದೆ. ಟಿ.ಸೀನಪ್ಪ ಶೆಟ್ಟಿ ಸಹೋದರರು ಅವರ ಅಣ್ಣನ ಸ್ಮರಣಾರ್ಥ 1956ರಲ್ಲೇ 25 ಸಾವಿರ ರೂ. ದೇಣಿಗೆ ನೀಡಿ ವೃತ್ತ ನಿರ್ಮಿಸಿದ್ದರು. ಕಾಲಾನಂತರ ಅದರ ಹೆಸರು ಗೋಪಿ ವೃತ್ತವೆಂದು ಬದಲಾಗಿ ಪ್ರಚಲಿತದಲ್ಲಿದೆ. ಆದರೆ ಸಾರ್ವಜನಿಕರು ಇನ್ಮುಂದೆ ಈ ವೃತ್ತವನ್ನು ಟಿ.ಸೀನಪ್ಪ ಶೆಟ್ಟಿ ವೃತ್ತವೆಂದೇ ಕರೆಯಲು ನಾಮಫಲಕ ಅಳವಡಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮತ್ತು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಮಾಯಣ್ಣಗೌಡ ಅವರು ನಾಮಫಲಕ ಅನಾವರಣಗೊಳಿಸುವರು. ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ವೃತ್ತವನ್ನು ಇನ್ಮುಂದೆ ಟಿ.ಸೀನಪ್ಪ ಶೆಟ್ಟಿ ವೃತ್ತವೆಂದು ಗುರುತಿಸಿ ಅವರ ಅನನ್ಯ ಹಾಗೂ ದೂರದೃಷ್ಟಿಯ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿ ವಿನಂತಿಸಿದರು.
ಆ ಕಾಲದಲ್ಲೇ ಸೀನಪ್ಪ ಶೆಟ್ಟಿ ವೃತ್ತ ನಿರ್ಮಿಸಿ ಕಾರಂಜಿ ನಿರ್ಮಿಸಲಾಗಿತ್ತು. ಕಾಲಕಳೆದಂತೆ ರಸ್ತೆ ವಿಸ್ತರಣೆ ಹಾಗೂ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಕಾರಂಜಿಯನ್ನು ತೆರವು ಮಾಡಿ ಮಹಾನಗರ ಪಾಲಿಕೆ ಆವರಣಕ್ಕೆ ಅನಿವಾರ್ಯವಾಗಿ ಸ್ಥಳಾಂತರಿಸಲಾಗಿತ್ತು ಎಂದರು.
ಸೀನಪ್ಪ ಶೆಟ್ಟಿ ಕುಟುಂಬಸ್ಥರಾದ ವೆಂಕಟೇಶ್‌ಮೂರ್ತಿ, ಟಿ.ಎ.ಸಂದೀಪ್, ವಿಶ್ವನಾಥ, ಗುರುಚರಣ್, ಚೇತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net