76ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್​ನೊಂದಿಗೆ ಶುಭಕೋರಿದ Google

Google Doodle
Published on

ನವದೆಹಲಿ: ದೇಶವು ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಜ್ಜಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು (ಜನವರಿ 26) ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದು, ಆ ಬಳಿಕ ಪಥಸಂಚನ ನಡೆಯಲಿದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಇಂಡೋನೇಷ್ಯಾದ ನೂತನ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಭಾಗವಹಿಸಿದ್ದಾರೆ.

ಭಾರತದಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜಾಗತಿಕ ದೈತ್ಯ ಸರ್ಚ್‌ ಎಂಜಿನ್‌ ಗೂಗಲ್‌ (Google) ವಿಶೇಷ ಡೂಡಲ್‌ ಮೂಲಕ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದೆ.

ಪ್ರತಿ ವರ್ಷದಂತೆಯೇ ಗೂಗಲ್ (Google) ಈ ಬಾರಿಯೂ ವಿಶೇಷ ಡೂಡಲ್ ರಚಿಸಿದೆ. ಭಾರತದ ಶ್ರೀಮಂತ ಜೀವವೈವಿಧ್ಯವನ್ನು ಪ್ರದರ್ಶಿಸಿದ್ದು, ವಿವಿಧತೆಯಲ್ಲಿ ಏಕತೆಯನ್ನು ಸಾರಿದೆ. ಡೂಡಲ್​ನಲ್ಲಿ ಲಡಾಖಿ ಉಡುಪಿನಲ್ಲಿರುವ ಹಿಮ ಚಿರತೆ, ಧೋತಿ-ಕುರ್ತಾ ಧರಿಸಿರುವ ಹುಲಿ ಮತ್ತು ಭಾರತದ ವಿವಿಧ ಭಾಗಗಳಿಗೆ ಸಂಬಂಧಿಸಿದ ಇತರ ವನ್ಯಜೀವಿಗಳ ಚಿತ್ರಗಳನ್ನು ಒಳಗೊಂಡಿದೆ. ಈ ಎಲ್ಲಾ ಪ್ರಾಣಿಗಳು ದೇಶದ ವಿವಿಧ ಪ್ರದೇಶಗಳನ್ನು ಮತ್ತು ಅದರ ವೈವಿಧ್ಯತೆಯನ್ನು ಪ್ರತಿನಿಧಿಸುತ್ತವೆ.

ಡೂಡಲ್ ಭಾರತದ ವನ್ಯಜೀವಿಗಳಿಂದ ಸ್ಫೂರ್ತಿ ಪಡೆದಿದೆ, ಇದು ಉತ್ತರದಲ್ಲಿ ಹಿಮಾಲಯದಿಂದ ದಕ್ಷಿಣದಲ್ಲಿ ಪಶ್ಚಿಮ ಘಟ್ಟಗಳ ಸೊಂಪಾದ ಕಾಡುಗಳವರೆಗೆ ವ್ಯಾಪಿಸಿದೆ. ವೈವಿಧ್ಯಮಯ ಪ್ರಾಣಿಗಳು, ಸಸ್ಯಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿರುವ ಭಾರತದ ಜೀವವೈವಿಧ್ಯಕ್ಕೆ ಇದು ಒಂದು ವಿಶಿಷ್ಟ ಉದಾಹರಣೆಯಾಗಿದೆ. ಗೂಗಲ್ ಡೂಡಲ್ ಮರುಭೂಮಿಗಳು, ಜೌಗು ಪ್ರದೇಶಗಳು, ಹುಲ್ಲುಗಾವಲುಗಳು, ಸರೋವರಗಳು ಮತ್ತು ಸಮುದ್ರಗಳಂತಹ ವಿವಿಧ ನೈಸರ್ಗಿಕ ಪ್ರದೇಶಗಳನ್ನು ಸಹ ಪ್ರದರ್ಶಿಸುತ್ತದೆ, ಇದು ಭಾರತದ ವಿಶಿಷ್ಟ ಭೂದೃಶ್ಯವನ್ನು ಚಿತ್ರಿಸುತ್ತದೆ.

ಪ್ರತಿ ವರ್ಷ ಗಣರಾಜ್ಯೋತ್ಸವಕ್ಕೆ ಒರ್ವ ವಿದೇಶಿ ಗಣ್ಯ ವ್ಯಕ್ತಿಯನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಅದರಂತೆ ಈ ವರ್ಷ, ಇಂಡೋನೇಷ್ಯಾದ ನೂತನ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದ ಬಳಿಕ ಕರ್ತವ್ಯ ಪಥದಲ್ಲಿ ಪಥಸಂಚಲನ ನಡೆಯಲಿದೆ.

ಗಣರಾಜ್ಯೋತ್ಸವದ ಹಿನ್ನೆಲೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಅಧಿಕಾರಿಗಳು ಮುನ್ನೆಚ್ಚರಿಕೆಯನ್ನು ವಹಿಸಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಜನರಿಗೆ ಪ್ರತ್ಯೇಕ ಪಾಸ್​ಗಳನ್ನು ನೀಡಲಾಗಿದ್ದು, ಕೆಂಪುಕೋಟೆಯ ಸುತ್ತ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net