ಮೈಗ್ರೇನ್ ಕಿರಿಕಿರಿ ತಪ್ಪಲು ಬೇಕು ಒಳ್ಳೆಯ ಚಿಕಿತ್ಸೆ

3-67a8ed6a1a377
Published on
ಕೆಲವು ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂದು ಅಂದುಕೊಂಡು ತುಂಬಾ ಜನ ಅವನ್ನು ಅನುಭವಿಸುತ್ತಿರುತ್ತಾರೆ. ಅಂಥವುಗಳಲ್ಲಿ ಒಂದು ಮೈಗ್ರೇನ್ ಅಥವಾ ಅರೆತಲೆನೋವು. ಬಿಸಿಲಿಗೆ ಹೋದಾಗ, ಟೆನ್ಷನ್ ಆದಾಗ, ಊಟ ತಡವಾದಾಗ, ನಿದ್ದೆಗೆಟ್ಟಾಗ, ಜನಜಂಗುಳಿಯಲ್ಲಿದ್ದಾಗ, ಹೊರಗೆ ಅಡ್ಡಾಡಿದಾಗ, ಹಠಾತ್ತಾಗಿ ದೊಡ್ಡ ಬೆಳಕು, ದೊಡ್ಡ ಶಬ್ದ ಅಥವಾ ಸುಗಂಧ ದ್ರವ್ಯಗಳಿಂದ ನಮ್ಮ ಜ್ಞಾನೇಂದ್ರಿಯಗಳು ಪ್ರಚೋದಿಸಲ್ಪಟ್ಟಾಗ ತಲೆನೋವು, ಅರ್ಧ ತಲೆನೋವು ಅಥವಾ ಮೈಗ್ರೇನ್ ಬಹಳಷ್ಟು ಜನರನ್ನು ಕಾಡುತ್ತದೆ.

ಕೆಲವರಿಗೆ ಯಾವುದಾದರೂ ಒಂದು ಭಾಗದಲ್ಲಿ ಮಾತ್ರ ನೋವು ಕಾಣಿಸಿಕೊಂಡರೆ, ಇನ್ನೂ ಕೆಲವರಿಗೆ ಇಡೀ ತಲೆಯಲ್ಲಿಯೂ ನೋವುಂಟಾಗಬಹುದು. ಮೈಗ್ರೇನ್ ಅಂದರೆ ತಲೆನೋವಷ್ಟೇ ಅಲ್ಲ, ವಾಂತಿ ಬಂದಂತೆನಿಸುವುದು, ವಾಂತಿ ಆಗುವುದು, ಗೊಂದಲವಾದಂತೆನಿಸುವುದು, ಕಣ್ಣುನೋವು ಮುಂತಾದ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಅತಿಯಾದ ಮಾನಸಿಕ ಕಿರಿಕಿರಿ ಉಂಟುಮಾಡುತ್ತದೆ.

ಮಲಮೂತ್ರಾದಿ ನೈಸರ್ಗಿಕ ಕರೆಗಳನ್ನು ತಡೆಹಿಡಿಯುವುದು, ಮನಸ್ಸಿಗೆ ಬಂದ ಸಮಯದಲ್ಲಿ ಊಟ- ನಿದ್ದೆ ಮಾಡುವುದು, ಸದಾ ಸಿಟ್ಟು, ಅಸೂಯೆ, ಒತ್ತಡ, ಚಿಂತೆ, ಉದ್ವೇಗದಲ್ಲಿರುವುದು, ಕಲುಷಿತ ಆಹಾರ ಮತ್ತು ರಾಸಾಯನಿಕ ಭರಿತ ಆಹಾರ ಸೇವಿಸುವುದು, ಅತಿಯಾಗಿ ಉಪ್ಪು, ಹುಳಿ, ಖಾರವಿರುವ ಮತ್ತು ಕರಿದ ಆಹಾರ ಸೇವಿಸುವುದು, ತುಂಬಾ ಸಮಯ ಮೊಬೈಲ್, ಕಂಪ್ಯೂಟರ್, ಟಿವಿ ನೋಡುತ್ತಾ ಕಳೆಯುವುದು ಮೈಗ್ರೇನ್ ಸಮಸ್ಯೆ ಪ್ರಾರಂಭವಾಗಲು ಕಾರಣಗಳಾಗುತ್ತವೆ. ಬಿಸಿಲಿಗೆ ಹೋಗುವುದು, ಊಟ ತಡವಾಗಿ ಮಾಡುವುದು ಮುಂತಾದ ಮೇಲೆ ಹೇಳಿದ ಅಂಶಗಳು ಕಾರಣಗಳಲ್ಲ; ಅವು ಪ್ರಚೋದಕ ಅಂಶಗಳು. ಅಂದರೆ ಆ ಕ್ಷಣಕ್ಕೆ ತಲೆನೋವು ಅವುಗಳಿಂದ ಬಂದಂತೆನಿಸಿದರೂ ತಲೆನೋವಿನ ಮೂಲ ತುಂಬಾ ಆಳದಲ್ಲಿರುತ್ತದೆ. ಆದರೆ ಅದೆಷ್ಟೇ ಆಳದಲ್ಲಿದ್ದರೂ ಮೈಗ್ರೇನ್​ಗೆ ಒಳ್ಳೆಯ ಚಿಕಿತ್ಸೆ

ಪಡೆದು ಗುಣಪಡಿಸಿಕೊಳ್ಳಲು ಸಾಧ್ಯವಿದೆ.

ಕಾರಣಗಳನ್ನು ಬಿಡುವುದು ಮೊದಲ ಚಿಕಿತ್ಸೆಯಾಗಿರುತ್ತದೆ. ಅಣಲೆಕಾಯಿ, ನೆಲ್ಲಿಕಾಯಿ, ತಾರೆ ಕಾಯಿ, ಕಿರಾತಕಡ್ಡಿ, ಅರಿಶಿನ, ಕಹಿಬೇವು, ಅಮೃತಬಳ್ಳಿ ಈ ಏಳು ದ್ರವ್ಯಗಳನ್ನು ಗ್ರಂಧಿಗೆ ಅಂಗಡಿಯಿಂದ ತಂದು ಸಣ್ಣ ತುಂಡುಗಳನ್ನಾಗಿ ಮಾಡಿಟ್ಟುಕೊಂಡು ಪ್ರತಿಯೊಂದನ್ನೂ ಅರ್ಧರ್ಧ ಚಮಚ ಅಂದರೆ ಒಂದು ಗ್ರಾಂನಷ್ಟು ಹಾಕಿ ಎಲ್ಲವನ್ನೂ ಸೇರಿಸಿ ಅದಕ್ಕೆ 4 ಲೋಟ ನೀರು ಹಾಕಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ಸಿಕ್ಕ ಕಷಾಯವನ್ನು ಎರಡು ಪಾಲು ಮಾಡಬೇಕು.

ಬೆಳಗ್ಗೆ ಅರ್ಧ ಲೋಟ, ರಾತ್ರಿ ಅರ್ಧ ಲೋಟ ಕಷಾಯವನ್ನು ಆಹಾರ ಸೇವಿಸುವ ಹತ್ತು ನಿಮಿಷ ಮೊದಲು ಸೇವಿಸಬೇಕು. ಇದರಿಂದ ಮೈಗ್ರೇನ್​ನಲ್ಲಿ ತುಂಬಾ ಅನುಕೂಲವಾಗುತ್ತದೆ. ಒಂದೂವರೆ ತಿಂಗಳು ಈ ಕಷಾಯವನ್ನು ಸೇವಿಸಬಹುದು. ಒಂದು ವೇಳೆ ಈ ಏಳು ದ್ರವ್ಯಗಳು ಸಿಗದಿದ್ದರೆ ಜ್ಯೇಷ್ಠಮಧು, ನೆಲ್ಲಿಕಾಯಿ, ಶುಂಠಿ, ಅಣಲೆಕಾಯಿ, ಸೊಗದೇ ಬೇರುಗಳ ಕಷಾಯ ಮಾಡಿ ಕುಡಿಯ ಬಹುದು. ಸುಮಾರು 100 ಮಿ.ಲೀ. ಗರಿಕೆ ಹುಲ್ಲಿನ ಜ್ಯೂಸ್​ಗೆ ನಾಲ್ಕು ಚಿಟಿಕೆ ಅಣಲೆಕಾಯಿಯ ಪುಡಿಯನ್ನು ಹಾಕಿ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಕುಡಿಯಬೇಕು.

ಈ ರೀತಿ 45 ದಿನ ಕುಡಿದರೆ ಮೈಗ್ರೇನ್ ಹತೋಟಿಗೆ ಬರುತ್ತದೆ. ಇದನ್ನು ಸೇವಿಸುವಾಗ ನೆಗಡಿಯಾಗದಂತೆ ನೋಡಿಕೊಳ್ಳಲು ಫ್ರಿಜ್​ನಲ್ಲಿಟ್ಟ ವಸ್ತು ಸೇವನೆ ಮಾಡಬಾರದು. ಭೇದಿಯಾದರೆ ಅಣಲೆಕಾಯಿಯ ಪ್ರಮಾಣವನ್ನು ಕಡಿಮೆ ಮಾಡಬೇಕು.

ಪ್ರಕೃತಿ ಚಿಕಿತ್ಸೆ: ವಮನಧೌತಿ, ಜಲನೇತಿ, ಸೂತ್ರನೇತಿಯಂತಹ ಪ್ರಕೃತಿ ಚಿಕಿತ್ಸೆಗಳು ಮೈಗ್ರೇನ್ ಅನ್ನು ಬೇರು ಸಮೇತ ತೆಗೆಯಲು ಸಹಕಾರಿ. ಆಕ್ಯುಪಂಕ್ಚರ್, ಆಕ್ಯುಪ್ರೆಶರ್​ಗಳೂ ಈ ಸಮಸ್ಯೆಯನ್ನು ಸರಿಪಡಿಸುತ್ತವೆ. ಅನುಲೋಮ ವಿಲೋಮ, ಶೀತಲೀ, ಶೀತ್ಕಾರಿಯಂತಹ

ಪ್ರಾಣಾಯಾಮಗಳನ್ನು ಮಾಡುವ ವರಿಗೆ ಈ ಸಮಸ್ಯೆ ಬರುವುದಿಲ್ಲ; ಬಂದರೆ ಬಹುಬೇಗ ಗುಣವಾಗುತ್ತವೆ. ವಮನ, ವಿರೇಚನ, ನಸ್ಯ, ಶಿರೋಧಾರಾದಂತಹ ಪಂಚಕರ್ಮ ಚಿಕಿತ್ಸೆಗಳು ತೀವ್ರಾವಸ್ಥೆಯಲ್ಲಿರುವ ಮೈಗ್ರೇನ್ ಅನ್ನೂ ಗುಣಮಾಡುತ್ತವೆ. ಸುಮಾರು ಹತ್ತು ದಿನದ ಚಿಕಿತ್ಸೆಯಿಂದ ಮೈಗ್ರೇನ್ ಅನ್ನು ಚೆನ್ನಾಗಿ ಗುಣಪಡಿಸಲು ಸಾಧ್ಯವಿದೆ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net