

ಬೆಂಗಳೂರು: ಈಗಾಗಲೇ ಮನೆಯಲ್ಲೇ ಬಂಧಿಯಾಗಿರುವ ಮಕ್ಕಳ ಬಾಲ್ಯವನ್ನೇ ಕರೊನಾ ಕಸಿಯುತ್ತಿದೆ. ಇನ್ನು, ಶಾಲೆ ಶುರುವಾದರೂ ಅಲ್ಲಿನ ಸಂತೋಷವನ್ನು ಈ ವೈರಸ್ ಕಿತ್ತು ಕೊಳ್ಳಲಿದೆ. ಮುಟ್ಟಂಗಿಲ್ಲ, ಮಾತಾಡಂಗಿಲ್ಲ, ಕೆಮ್ಮೋದಂತೂ ಮೊದಲೇ ಇಲ್ಲ.... ಎಲ್ಲವನ್ನೂ ಸನ್ನೆಯಲ್ಲಿಯೇ ಸಂಭಾಷಿಸಬೇಕಾದ ಅನಿವಾರ್ಯತೆ ಮಕ್ಕಳದ್ದಾಗಲಿದೆ.
ಈ ಹಿಂದೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಹೆಚ್ಚಾದಾಗ ಎಲ್ಲ ಶಾಲೆಗಳಲ್ಲೂ "ಗುಡ್ ಟಚ್ ಬ್ಯಾಡ್ ಟಚ್" ಅಭಿಯಾನವನ್ನು ನಡೆಸಲಾಗಿತ್ತು. ನಾಟಕ, ರೂಪಕ... ಸೇರಿ ಸಾಂಸ್ಕೃತಿಕ ವೈವಿಧ್ಯದ ಮೂಲಕ ಮಕ್ಕಳಿಗೆ ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂಬ ಬಗ್ಗೆ ಅರಿವು ಮೂಡಿಸಲಾಗಿತ್ತು. ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಬೆಂಗಳೂರಿಗರು ಮಾತ್ರವಲ್ಲ, ರಾಜ್ಯದ ವಿವಿಧೆಡೆ ಜನರು ಭಾರಿ ಪ್ರತಿಭಟನೆ ನಡೆಸಿ ಕಾಮಪಿಪಾಸುಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದರು.
"ಗುಡ್ ಟಚ್ ಬ್ಯಾಡ್ ಟಚ್" ಯಾವುದು ಎಂದು ತಿಳಿಸಿದ್ದ ಮಕ್ಕಳಿಗೀಗ ಶಾಲೆಗಳಲ್ಲಿ "ನೋ ಟಚ್" ಬಗ್ಗೆ ತಿಳಿಸಲಾಗುತ್ತದೆ. ಏಕೆಂದರೆ, ಕರೊನಾ ವಿರುದ್ಧ ಹೋರಾಡಲು ಮಕ್ಕಳೀಗ 'ಸ್ಪರ್ಶಾತೀತ'ರಾಗಬೇಕಾಗಿದೆ. ಎಲ್ಲರಿಂದಲೂ ದೂರವಿರುವಂತೆ ಹೇಳಬೇಕಾಗಿದೆ. ಶಾಲೆಯಷ್ಟೇ ಅಲ್ಲ, ಮಕ್ಕಳ ಪಾಲಿಗೆ ಯಾವುದು ಈಗ ಸುರಕ್ಷಿತವಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಕರೊನಾ ಕಾಲಘಟ್ಟ ಮುಗಿಯುವವರೆಗೂ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ 'ನೋ ಟಚ್' ಮಂತ್ರ ಅನುರಣಿಸಲಿದೆ.
ಮಕ್ಕಳು ಹತ್ತಿರ ನಿಂತು ಮಾತನಾಡಿಕೊಳ್ಳುವುದು, ಯಾವುದೇ ವಿಚಾರಕ್ಕೆ ಪರಸ್ಪರ ಕಿತ್ತಾಡಿಕೊಂಡರೆ ಅದಕ್ಕಿಂತ ಘೋರ ಅಪರಾಧ ಇನ್ನೊಂದಿರದು. ಅಂಥ ಮಕ್ಕಳು ಅವರ ಜೀವವನ್ನಷ್ಟೇ ಅಲ್ಲ, ಶಾಲೆಯ ಭವಿಷ್ಯಕ್ಕೆ ಕುತ್ತು ತಂದಂತೆ..!
ಪದೇಪದೇ ಕೈ ತೊಳೆದುಕೊಳ್ಳುವುದು, ಇದಕ್ಕಾಗಿ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು, ಅನಗತ್ಯವಾಗಿ ಏನನ್ನೂ, ಯಾರನ್ನೂ ಮುಟ್ಟದಿರುವಂತೆ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಕೇಂದ್ರ ಸರ್ಕಾರವೇ ಈ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸುತ್ತಿದೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಗಮನ ಹಾಗೂ ನಿರ್ಗಮನ ಪ್ರವೇಶ ದ್ವಾರ, ವಿದ್ಯಾರ್ಥಿಗಳ ನಡುವೆ ಕನಿಷ್ಠ ಆರು ಅಡಿಗಳ ಅಂತರ ಕಾಯ್ದುಕೊಳ್ಳುವುದು, ತರಗತಿ ಮುಗಿದ ಬಳಿಕ ಕೊಠಡಿಯನ್ನು ಸ್ವಚ್ಛಗೊಳಿಸುವುದು, ವಿದ್ಯಾರ್ಥಿಗಳು ಪದೇಪದೇ ಸ್ಪರ್ಶಿಸುವ ವಸ್ತುಗಳನ್ನು ಆಗಾಗ ಸ್ಯಾನಿಟೈಸ್ ಮಾಡುವುದು ಕಡ್ಡಾಯ.
ಇಷ್ಟೇ ಅಲ್ಲ, ಶಾಲೆಗಳಲ್ಲಿ ಕೆಲ ತಿಂಗಳು ಸಾಮೂಹಿಕ ಪ್ರಾರ್ಥನೆ ಇರಲ್ಲ, ಕ್ಯಾಂಟೀನ್ ಬಂದ್, ಪಾಲಕರ ಪ್ರವೇಶಕ್ಕೂ ನಿರ್ಬಂಧ ಮೊದಲಾದವುಗಳು ಜಾರಿಯಲ್ಲಿರಲಿವೆ.
ಇಷ್ಟು ದಿನ ಮಕ್ಕಳು ಜಗಳವಾಡಿದರೆ ಪೇರೆಂಟ್ಸ್ ಕಂಪ್ಲೇಂಟ್ ಮಾಡ್ತಿದ್ರು, ಈಗ ಮುಟ್ಟಿದರೆ 'ಮುನಿ'ಯಬೇಕಾಗಿದೆ.