ಶಿಕ್ಷಕರಿಂದ ಉತ್ತಮ ಸಮಾಜ ಸೃಷ್ಟಿ

22-k.m.vadi
Published on

ಕಟ್ಟೆಮಳಲವಾಡಿ: ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಜತೆಗೆ ಉತ್ತಮ ಸಮಾಜವನ್ನು ಸೃಷ್ಟಿಸಬಹುದು ಎಂದು ನಿವೃತ್ತ ಪ್ರಾಂಶುಪಾಲ ಮಹೇಶಾರಾಧ್ಯ ಅಭಿಪ್ರಾಯಪಟ್ಟರು.

ಹುಣಸೂರು ತಾಲೂಕು ಗಾವಡಗೆರೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಆದರ್ಶ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಶಾಲೆಗೆ ಜಾಗ ಕೊಟ್ಟ ದಾನಿ ಸುಬ್ಬರಾವ್ ಘಾಟ್ಕೆ ಹಾಗೂ ಸರಸ್ವತಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಶಿಕ್ಷಕ ಜಾತಿವಾದಿ, ಭ್ರಷ್ಟನಾದರೆ ಮಕ್ಕಳೂ ಸಮಾಜ ದ್ರೋಹಿಗಳಾಗಿ ರೂಪುಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಇಒ ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ತಪಸ್ವಿಗಳಿದ್ದಂತೆ. ವಿದ್ಯಾಭ್ಯಾಸದ ವೇಳೆ ಅಂಕಗಳಿಗೆ ಸೀಮಿತವಾಗದೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಲಾ ವರದಿಯನ್ನು ಶಿಕ್ಷಕ ನಿಂಗರಾಜು ಓದಿದರು. ಎಸ್‌ಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಚೈತ್ರಾ.ಎಂ, ರಂಜಿತಾ.ಎಸ್, ಸುಚಿತ್ರಾ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ತಾಲೂಕು ಪಂಚಾಯಿತಿ ಸದಸ್ಯ ಗಣಪತಿ ಇಂಡೋಲ್ಕರ್, ಪ್ರಾಂಶುಪಾಲ ರಾಮೇಗೌಡ, ಉಪ ಪ್ರಾಂಶುಪಾಲ ಚಿನ್ನೇಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಮೆಹರಾಬಾನು, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷೆ ಶೀಲಾವತಿ, ವೈದ್ಯಾಧಿಕಾರಿ ಡಾ.ಜಗದೀಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net