ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಖುಷಿಯ ವಿಚಾರ: ಪಿಜಿಸಿಇಟಿ ಕೋರ್ಸ್‌ಗಳಿಗೆ ಶುಲ್ಕ ಹೆಚ್ಚಳವಿಲ್ಲ

29112021 Raichur VV Convocation4
Published on

ಬೆಂಗಳೂರು ಸ್ನಾತಕೋತ್ತರ ಪದವಿ ಕೋರ್ಸ್‌ಗಳಾದ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್ ಕೋರ್ಸ್‌ಗಳ ಬೋಧನಾ ಶುಲ್ಕವು ಕಳೆದ ವರ್ಷದಷ್ಟೇ ಇರಲಿದ್ದು ಯಾವುದೇ ಬದಲಾವಣೆಯಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ.

ಸ್ನಾತಕೋತ್ತರ ಕೋರ್ಸ್‌ಗಳಿಗೆ ಕಳೆದ ವರ್ಷ (2023-24) ನಿಗದಿಪಡಿಸಿದ್ದ ಬೋಧನಾ ಶುಲ್ಕವನ್ನೇ 2024-25ನೇ ಶೈಕ್ಷಣಿಕ ಸಾಲಿನ ಸೀಟು ಹಂಚಿಕೆ ಪ್ರಮಾಣ, ಪ್ರವೇಶ ಪ್ರಕ್ರಿಯೆ ಮತ್ತು ಬೋಧನಾ ಶುಲ್ಕಕ್ಕೂ ಅನ್ವಯುಸುವಂತೆ ಎಂದು ಸ್ಪಷ್ಟಪಡಿಸಿದೆ.

ಸರ್ಕಾರಿ ವಿಶ್ವವಿದ್ಯಾಲಯದ ಮತ್ತು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅನುದಾನಿತ ಕೋರ್ಸ್‌ಗಳಾದ ಎಂಬಿಎ, ಎಂಸಿಎ, ಎಂಇ, ಎಂ ಟೆಕ್ ಕೋರ್ಸ್‌ಗಳಿಗೆ 20 ಸಾವಿರ ವಾರ್ಷಿಕ ಬೋಧನಾ ಶುಲ್ಕವಿದೆ. ಅನುದಾನ ರಹಿತ ಸಂಸ್ಥೆಗಳ ಅನುದಾನ ರಹಿತ ಕೋರ್ಸ್‌ಗಳಾದ ಎಂಬಿಎ, ಎಂಸಿಎ ಗೆ 57,750 ರೂ. ಮತ್ತು ಎಂ. ಇ ಮತ್ತು ಎಂ.ಟೆಕ್ ಕೋರ್ಸ್‌ಗಳಿಗೆ 69,300 ರೂ ಗಳ ವಾರ್ಷಿಕ ಬೋಧನಾ ಶುಲ್ಕ ನಿಗದಿ ಪಡಿಸಲಾಗಿದೆ.

ಎಲ್ಲ ಅನುದಾನ ರಹಿತ ಸಂಸ್ಥೆಗಳಲ್ಲಿ ಎಂಬಿಎ ಕೋರ್ಸಿನ ಒಟ್ಟು ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇ. 50 ರಷ್ಟು ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಪಿಜಿಸಿಇಟಿಯ ಆರ್ಹತೆಯ ಆಧಾರದಲ್ಲಿ ಉಳಿದ ಶೇ. 50 ಸೀಟುಗಳನ್ನು ಕೆಮ್ಯಾಟ್ ಅಥವಾ ಸಿ-ಮ್ಯಾಟ್ ಆಧಾರದಲ್ಲಿ ಭರ್ತಿ ಮಾಡಬೇಕು. ಎಂಸಿಎಯ ಶೇ. 50 ಸೀಟುಗಳನ್ನು ಪಿಜಿಸಿಇಟಿ ಮತ್ತು ಉಳಿದ ಶೇ. 50 ಸೀಟುಗಳನ್ನು ಆಯಾ ಸಂಸ್ಥೆಗಳ ಆಡಳಿತ ಮಂಡಳಿಗಳು ನಡೆಸುವ ಪ್ರವೇಶ ಪರೀಕ್ಷೆಯ ಆಧಾರದಲ್ಲಿ ಭರ್ತಿ ಮಾಡಬೇಕು ಎಂದು ಸೂಚಿಸಲಾಗಿದೆ.

ಎಂಇ ಮತ್ತು ಎಂಟೆಕ್ ಕೋರ್ಸ್‌ಗಳ ಶೇ. 80 ಸೀಟುಗಳನ್ನು ಪಿಜಿಸಿಇಟಿ ಅಥವಾ ಗೇಟ್ ಪರೀಕ್ಷೆಗಳ ಆಧಾರದಲ್ಲಿ ಮತ್ತು ಉಳಿದ ಶೇ. 20 ಸೀಟುಗಳನ್ನು ಗೇಟ್, ಪಿಜಿಸಿಇಟಿ ಅಥವಾ ಅವರ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದವರು ಸಿದ್ಧಪಡಿಸುವ ಅರ್ಹತಾ ಪಟ್ಟಿಯ ಆಧಾರದ ಮೇಲೆ ವಿತರಿಸುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net