

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿರುವ 312 ಪೌರಸಂಸ್ಥೆಗಳಲ್ಲಿ 25 ಸಾವಿರಕ್ಕೂ ಹೆಚ್ಚಿನ ನೌಕರರು ವಿವಿಧ ಹೆಸರಿನಲ್ಲಿ ಹಂಗಾಮಿಯಾಗಿ ಕೆಲಸ ಮಾಡುತ್ತಿದ್ದು, ಗೌರವಯುತ ಬದುಕು ನಡೆಸಲು ಸಾಧ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇತ್ತೀಚಿಗೆ ಬೆಳಗಾವಿ ಅಧಿವೇಶನ ಸಂದರ್ಭ ಪೌರಾಡಳಿತ ಸ//ಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ವಿುಕರಿಗೆ ಕಾಯಂ ಮತ್ತು ನೇರ ನಗದು ಪಾವತಿ ವ್ಯವಸ್ಥೆ ವ್ಯಾಪ್ತಿಗೆ ತರುವ ಬಗ್ಗೆ ಆದೇಶ ಪತ್ರಗಳನ್ನು ನೀಡಲಾಯಿತು. ಆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪೌರಾಡಳಿತ ಸಚಿವ ಎಂಟಿಬಿ ನಾಗರಾಜು ಭರವಸೆ ನೀಡಿದ್ದರು. ಇದೀಗ ಇಲಾಖೆಯ ಅಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ ಎಂದು ಪೌರಾಡಳಿತ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಯಾವ ನೌಕರರು: ಪೌರಸಂಸ್ಥೆಗಳಲ್ಲಿ ಪೌರ ಕಾರ್ವಿುಕರು, ಸಹಾಯಕರು, ನೀರು ಸರಬರಾಜು ಮಾಡುವವರು, ಹೆಲ್ಪರ್ಗಳು, ವಾಲ್ವುನ್ಗಳು, ವಾಹನ ಚಾಲಕರು, ಯುಜಿಡಿ ಹೆಲ್ಪರ್ಗಳು, ಕ್ಲೀನರ್ಗಳು, ಲೋಡರ್ಗಳು ಹಂಗಾಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಾವ ಹೆಸರಿನಲ್ಲಿ ಸೇವೆ: ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ, ಕ್ಷೇಮಾಭಿವೃದ್ಧಿ ನಿಧಿ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ಕೂಲಿ ಹೀಗೆ ವಿವಿಧ ಹೆಸರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಯಂ ನೌಕರರಿಗೂ ಈ ನೌಕರರಿಗೂ ವೇತನದಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ಏಜೆನ್ಸಿಗಳ ಮೂಲಕ ನೇಮಕ ಆಗುವುದರಿಂದ ಇವರಿಗೆ ಸರ್ಕಾರ ನಿಗದಿ ಮಾಡಿರುವ ಮೊತ್ತ ಪೂರ್ತಿಯೂ ಸಿಗದೆ ಶೋಷಣೆಯಾಗುತ್ತಿದೆ. ಅದನ್ನು ತಪ್ಪಿಸಬೇಕೆಂದು ಸರ್ಕಾರ ಈಗ ಮುಂದಾಗಿದೆ.
ಗುತ್ತಿಗೆ, ಹೊರ ಗುತ್ತಿಗೆ ರದ್ದು: ಕಾಯಂ ಮಾಡಲು ಸಾಧ್ಯವಾಗದಿರುವ ನೌಕರರಿಗೆ ನೇರ ವೇತನ ಪಾವತಿ ವ್ಯಾಪ್ತಿಗೆ ತರಲು ಗುತ್ತಿಗೆ, ಹೊರ ಗುತ್ತಿಗೆ ರದ್ದು ಮಾಡಲಾಗುತ್ತದೆ. ಕೆಲಸ ಮಾಡುತ್ತಿರುವ ನೌಕರರಿಗೆ ಅನ್ಯಾಯ ಮಾಡುವುದಿಲ್ಲ. ಬದಲಾಗಿ ಅವರನ್ನೇ ಮುಂದುವರಿಸಲಾಗುತ್ತದೆ. ಯಾವುದೇ ಏಜೆನ್ಸಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಲು ಸಾಧ್ಯವಾಗದಿರುವಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಂಡಿರುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.
ನೇಮಕಾತಿ: ಸರ್ಕಾರ 1,437 ಲೋಡರ್ಸ್ ಮತ್ತು 309 ಕ್ಲಿನರ್ಸ್ಗಳನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ. ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ಅಧಿಕಾರಿಗಳಲ್ಲಿ ನಿರಾಸಕ್ತಿ: ಸರ್ಕಾರ ನೌಕರರ ಶೋಷಣೆ ತಪ್ಪಿಸಲು ನಿರ್ಧರಿಸಿದ್ದರೆ, ಕೆಲವು ಅಧಿಕಾರಿಗಳು ಮಾತ್ರ ವೇತನದ ವೆಚ್ಚ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ನೀಡಿದ್ದಾರೆ. ಆದರೆ ಸರ್ಕಾರ ಮಾತ್ರ ತಳವರ್ಗದಲ್ಲಿ ಕೆಲಸ ಮಾಡುವವರ ನೆರವಿಗೆ ನಿಲ್ಲುವ ದೃಢ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ.