

ಸಾಧನೆಯ ಪಥದಲ್ಲಿ ಸಂಚರಿಸುತ್ತಾ ಜೀವನವನ್ನು ಸಾಗಿಸುವುದೇ ಉತ್ತಮ ಜೀವನ. ಸರಳತೆ ಒಂದು ದಿನದಲ್ಲಿ ಸಾಧಿಸುವಂತದ್ದಲ್ಲ. ಜೀವನದ ಯಾತ್ರೆಯಲ್ಲಿ ಪ್ರತಿದಿನದ ಅನುಭವಗಳನ್ನು ಮರೆಯದೆ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಂಧನದಿಂದ ಬಿಡುಗಡೆ. ಜ್ಞಾನವನ್ನು ಪಡೆದಷ್ಟೂ ಜ್ಞಾನದ ಹಸಿವು ಹೆಚ್ಚಾಗುತ್ತದೆ. ಜ್ಞಾನ ಹೆಚ್ಚಾದಷ್ಟೂ ಜೀವನ ಹಗುರವಾಗುತ್ತದೆ. ಜೀವನ ಹಗುರವಾದಷ್ಟೂ ಆನಂದದ ತಾಣ ನಾವಾಗುತ್ತೇವೆ. ಈ ಸಾಧನೆಯಲ್ಲಿ ನಾವು ಮುಂದು ವರಿಯಲು ಹಿರಿಯರು ಹಾಗೂ ಋಷಿಮುನಿಗಳ ಆಶೀರ್ವಾದ ಹಾಗೂ ಸಂತರು, ಮಹಾತ್ಮರ ಸಹವಾಸ ಆವಶ್ಯಕವಿರುತ್ತದೆ. ಆದ್ದರಿಂದ ಸಜ್ಜನರ ಸಹವಾಸವನ್ನು ಹೆಚ್ಚಾಗಿ ಮಾಡುತ್ತಾ ಜೀವನ ವನ್ನು ಕಳೆಯುವುದು ಉತ್ತಮ ಆದರ್ಶದ ಜೀವನವಾಗುತ್ತದೆ.
ನಮ್ಮಲ್ಲಿ ಅಹಂಕಾರವು ಅಳಿದು ಸರಳತೆಯು ಅಂಕುರವಾದಾಗ ನಮ್ಮ ದಷ್ಟಿ ಬದಲಾಗುತ್ತದೆ. ಡಿ.ವಿ.ಜಿ.ಯವರು ಹೀಗೆ ಹೇಳಿದ್ದಾರೆ: ನೀನೊಬ್ಬ ಜಗದೊಳಗೆ ನಿನ್ನೊಳಗದೊಂದು ಜಗ/ನೀನೆ ಜಗ, ನೀನಿರದೆ ಜಗವುಂಟೆ ನಿನಗೆ? | ತಾನೆ ಜಗವೆಲ್ಲವೆಂದರಿತಂಗೆ ಹಗೆಯೆಲ್ಲಿ?/ಏನಿಹುದವಂಗನ್ಯ - ಮರುಳ ಮುನಿಯ || 727 ||
ಇತರರಿಗಿಂತ ತಾನು ಶ್ರೇಷ್ಠ ಎಂಬ ಭಾವ ಅಹಂಕಾರ. ಈ ಅಹಂಕಾರವು ನಮಗೆ ಭಾಷೆಯಲ್ಲಿ, ದೇಶದಲ್ಲಿ, ರೂಪದಲ್ಲಿ, ವಿದ್ಯೆಯಲ್ಲಿ, ಜಾತಿಯಲ್ಲಿ, ಕೆಲಸದಲ್ಲಿ ಹಾಗೂ ಇನ್ನೂ ಅನೇಕ ಕಡೆಗಳಲ್ಲಿ ಕಂಡುಬರುತ್ತದೆ. ಇದು ಇಲ್ಲವಾಗಿ ಎಲ್ಲವೂ ತಾನೇ ಎಂಬ ಜ್ಞಾನೋದಯದಂಕುರವೇ ಸರಳತೆ. ಜಗತ್ತಿನಲ್ಲಿ ಸುಂದರವಾಗಿರುವ, ಆಕರ್ಷಕವಾಗಿರುವ ವಸ್ತುಗಳು ಬಹಳಷ್ಟಿವೆ. ಆದರೆ ಅವು ಯಾವುವೂ ತಾನಾಗಿಯೇ ನಮ್ಮ ಬಳಿ ಬರುವುದಿಲ್ಲ. ನಮ್ಮ ಮನಸ್ಸೇ ಆ ವಿಷಯಗಳತ್ತ ಹೋಗುತ್ತದೆ. ನಮ್ಮ ಶಾಸ್ತ್ರಗಳು ನೀಡುವ ಉಪದೇಶ ‘ನಿನ್ನ ಮನಸ್ಸನ್ನು ಶುದ್ಧಮಾಡಿಕೋ’.
ನಮ್ಮ ಮನಸ್ಸು ಯಾವಾಗಲೂ ತಾನು ಎಲ್ಲರಿಗಿಂತ ಉತ್ತಮನಾಗಬೇಕು ಎಂಬಂತೆ ಬಯಸುತ್ತದೆ. ಇದಕ್ಕೆ ಮೂಲಕಾರಣ ಸತ್ಯದ ಅರಿವು ನಮಗಿಲ್ಲದಿರುವುದು ಮತ್ತು ನಮ್ಮ ಅಜ್ಞಾನ. ಮನಸ್ಸನ್ನು ವಿಶಾಲಗೊಳಿಸುತ್ತಾ ಹೋದಂತೆ ನಮ್ಮ ಸಣ್ಣತನ ದೂರವಾಗುತ್ತದೆ. ಒಂದು ವೇಳೆ ಹೀಗೆ ಮಾಡದಿದ್ದರೆ ನಮ್ಮ ಅಂತ್ಯಕ್ಕೆ ನಾವೇ ಬೀಜ ನೆಟ್ಟಂತಾಗುತ್ತದೆ.