

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಹಲವು ಮಹತ್ವದ ತೀರ್ವನಗಳನ್ನು ಕೈಗೊಂಡಿದ್ದು, ಹಲವು ಹಳೆಯ ಬೇಡಿಕೆ, ಆಗ್ರಹಗಳಿಗೆ ಸ್ಪಂದಿಸಲಾಗಿದೆ. ಈ ಪೈಕಿ ಪ್ರಮುಖವಾದುದು, ‘ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) ತಿದ್ದುಪಡಿ ವಿಧೇಯಕ-2024’ಕ್ಕೆ ಅನುಮೋದನೆ ನೀಡಿರುವುದು. ಕೊಳವೆಬಾವಿಯನ್ನು ಮುಚ್ಚದೆ ಹಾಗೇ ಬಿಟ್ಟರೆ, ಅದಕ್ಕೆ ಹೊಲದ ಮಾಲೀಕರು ಹಾಗೂ ಕೊಳವೆಬಾವಿ ಕೊರೆಯುವವರು ಜವಾಬ್ದಾರರಾಗುತ್ತಾರೆ. ಅವರಿಗೆ ಒಂದು ವರ್ಷ ಶಿಕ್ಷೆ, ಹತ್ತು ಸಾವಿರ ರೂ. ದಂಡ ಅನ್ವಯವಾಗಲಿದೆ ಎಂಬುದು ಗಮನಾರ್ಹ.
ಕೊಳವೆಬಾವಿ ಕೊರೆದು, ಅದು ನೀರು ಸಿಗದೆ ವಿಫಲವಾದರೆ ಮುಚ್ಚದೆ ಹಾಗೇ ಬಿಡುವ ಬೇಜವಾಬ್ದಾರಿ ಧೋರಣೆಯಿಂದ ರಾಜ್ಯದಲ್ಲಿ ಮತ್ತು ರಾಷ್ಟ್ರದ ವಿವಿಧೆಡೆ ಸರಣಿ ದುರಂತಗಳು ನಡೆದ ಕಹಿನೆನಪನ್ನು ಮರೆಯಲು ಸಾಧ್ಯವೇ ಇಲ್ಲ. ಸಣ್ಣ ಮಕ್ಕಳು ಆಟವಾಡಲು ಹೋಗಿ, ಇಂಥ ಕೊಳವೆಬಾವಿಗಳಿಗೆ ಬಿದ್ದು ಪ್ರಾಣ ಕಳೆದುಕೊಂಡ ಹಲವು ನಿದರ್ಶನಗಳಿವೆ. ನಿರುಪಯುಕ್ತ ಮತ್ತು ವಿಫಲವಾದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಬಾವಿಗಳ ಮಾಲೀಕರು, ಬಾವಿ ಕೊರೆದ ಸಂಸ್ಥೆ ಹಾಗೂ ಅನುಮತಿ ನೀಡಿದ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಲವು ವರ್ಷಗಳಿಂದ ಎಚ್ಚರಿಕೆ ನೀಡುತ್ತ ಬಂದಿದೆ. ಆದರೂ ಕೊಳವೆ ಬಾವಿಗೆ ಮಕ್ಕಳು ಬೀಳುತ್ತಿರುವ ಘಟನೆಗಳು ಆಗಾಗ ಪುನರಾವರ್ತನೆಯಾಗುತ್ತಿವೆ. ಪ್ರಸ್ತುತ, ಕರ್ನಾಟಕ ಅಂತರ್ಜಲ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆತಿರುವುದರಿಂದ, ಶಿಕ್ಷೆ ವಿಧಿಸಲು ಅನುವಾಗಲಿದೆ.
ಕೊಳವೆ ಬಾವಿ ದುರಂತದ ಘಟನೆಗಳು ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುವುದು ಪರಿಪಾಠವೇ ಆಗಿಹೋಗಿತ್ತು. ಅಲ್ಲದೆ, ಕೆಲವು ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನೀಡಿದ ಎಚ್ಚರಿಕೆ ನಂತರ ಈ ಸಂಬಂಧ ಮಾರ್ಗಸೂಚಿಗಳು ರಚನೆಯಾದವು. ಆ ಮಾರ್ಗಸೂಚಿಗಳು ಈಗಲೂ ಅಸ್ತಿತ್ವದಲ್ಲಿವೆ. ತೆರೆದ ಕೊಳವೆಬಾವಿಗಳನ್ನು ಮುಚ್ಚದಿದ್ದರೆ ಅದಕ್ಕೆ ಆಯಾ ಭಾಗದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಉಪ ತಹಸೀಲ್ದಾರ್ರನ್ನು ಹೊಣೆಗಾರರನ್ನಾಗಿ ಮಾಡುವುದಕ್ಕೆ ಮಾರ್ಗಸೂಚಿಯಲ್ಲಿ ಅವಕಾಶವಿದೆ. ಕೊಳವೆಬಾವಿ ಕೊರೆಸುವುದಕ್ಕೆ 15 ದಿನ ಮೊದಲು ಸರ್ಕಾರದ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು; ವಿಫಲವಾದ ಕೊಳವೆಬಾವಿಯನ್ನು ಕಲ್ಲು, ಮಣ್ಣು, ಇಟ್ಟಿಗೆಗಳಿಂದ ಮುಚ್ಚಬೇಕು; ಮುಚ್ಚಿರುವ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ.
ಆ ಸಮಿತಿಯಲ್ಲಿ ಎಸ್ಪಿ, ಎಕ್ಸಿಕ್ಯೂಟಿವ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಆಫೀಸರ್ ಮತ್ತು ತಹಸೀಲ್ದಾರ್ಗೆ ಸ್ಥಾನ; ನೀರು ಬಂದರೆ ಆ ಕೊಳವೆಬಾವಿಗೆ ಸೂಕ್ತ ಫೆನ್ಸಿಂಗ್ ಅಥವಾ ಕ್ಯಾಪ್ ಅಳವಡಿಕೆ. ಹೀಗೆ ಅನೇಕ ನಿಯಮಗಳು ಇದ್ದರೂ, ಅವು ಕಾಗದದ ಮೇಲೆಯೇ ಉಳಿದಿವೆ, ಅನುಷ್ಠಾನಕ್ಕೆ ಬಂದಿಲ್ಲ. ಈ ವಿಷಯದಲ್ಲಿ ಸಾರ್ವಜನಿಕರ ಹೊಣೆಗಾರಿಕೆಯೂ ಮಹತ್ವದ್ದಾಗಿದೆ. ತಮ್ಮ ಜಮೀನಿನಲ್ಲಿ ಅಥವಾ ಬೇರೆಯವರ ಜಾಗದಲ್ಲಿ ಇಂತಹ ವಿಫಲ ಕೊಳವೆಬಾವಿಗಳು ಇದ್ದರೆ ತಾವೇ ಅವುಗಳನ್ನು ಮುಚ್ಚುವ ಜವಾಬ್ದಾರಿಯುತ ನಡವಳಿಕೆಯನ್ನು ಸಾರ್ವಜನಿಕರು ತೋರಬೇಕಾಗಿದೆ.