

ದೇಶದಲ್ಲಿ ಕರೊನಾ ಎರಡನೆಯ ಅಲೆಯ ತೀವ್ರತೆ ದಿನೇದಿನೆ ಇಳಿಮುಖವಾಗುತ್ತಿರುವುದು ಸ್ವಲ್ಪ ಸಮಾಧಾನದ ಸಂಗತಿ. ದೇಶವ್ಯಾಪಿ ದೈನಂದಿನ ಪ್ರಕರಣಗಳು 60 ಸಾವಿರ ಸನಿಹಕ್ಕೆ ಬಂದಿವೆ. ಬಹುತೇಕ ಎಲ್ಲ ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅನ್ಲಾಕ್ ಪ್ರಕ್ರಿಯೆ ಚಾಲನೆ ಪಡೆದಿದೆ. ಕರೊನಾ ಲಾಕ್ಡೌನ್ ಮತ್ತಿತರ ಕಾರಣಕ್ಕೆ ಕುಸಿದಿರುವ ಆರ್ಥಿಕ ವ್ಯವಸ್ಥೆಗೆ ಚೇತರಿಕೆ ನೀಡಲು ಇದು ಅನಿವಾರ್ಯ ಕೂಡಾ. ಆದರೆ, ಮೊದಲನೆಯ ಅಲೆಯ ನಂತರ ಮೈಮರೆತಂತೆ ಈಗಲೂ ಆ ತಪು$್ಪ ಮರುಕಳಿಸದಂತೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಇನ್ನಷ್ಟು ಬೆಲೆ ತೆರಬೇಕಾಗುತ್ತದೆ ಎಂಬ ಅರಿವು ಎಲ್ಲರಲ್ಲಿಯೂ ಇರಬೇಕು. ಕೈಗಾರಿಕಾ ವಲಯ ಸೇರಿದಂತೆ ಎಲ್ಲ ರಂಗಗಳು ಈಗ ಬಹುತೇಕ ಸ್ತಬ್ಧವಾಗಿದ್ದು, ಮರಳಿ ಹಳಿಗೆ ಬರಲು ಕಾಲಾವಕಾಶ ಬೇಕಾಗುತ್ತದೆ. ಅದರಂತೆ ಆರೋಗ್ಯ ರಂಗ ಕೂಡಾ ಸಂಕಷ್ಟದಲ್ಲಿದೆ. ಈ ನಡುವೆ, ಕರೊನಾ ಮೂರನೆಯ ಅಲೆ ಕುರಿತಂತೆ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದು, ಅದು ಯಾವ ಸಮಯಕ್ಕೆ ಬರಬಹುದು ಎಂಬ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ.
ಮಹಾರಾಷ್ಟ್ರದಲ್ಲಿ ಇನ್ನು ಎರಡರಿಂದ ನಾಲ್ಕು ವಾರಗಳಲ್ಲಿ ಮೂರನೆಯ ಅಲೆ ಬರಬಹುದು ಎಂದು ತಜ್ಞರು ಹೇಳಿದ್ದಾರೆ. ಯಾವುದೇ ವೈರಾಣು ಒಂದು ಕಡೆ ಕಾಣಿಸಿಕೊಂಡಲ್ಲಿ ಇತರ ಕಡೆಗಳಲ್ಲೂ ಹಬ್ಬುವುದಕ್ಕೆ ಬಹಳ ಕಾಲವೇನೂ ಬೇಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ, ಈವರೆಗಿನ ಕರೊನಾ ಅನುಭವದಲ್ಲಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಸಜ್ಜಾಗಿಡಬೇಕಾದುದು ಅನಿವಾರ್ಯ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು, ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ 50 ಸಾವಿರ ಕೋಟಿ ರೂ.ಗಳ ಯೋಜನೆ ರೂಪಿಸಿರುವುದು ಸಕಾಲಿಕ ಹೆಜ್ಜೆ. ಕರೊನಾ ಸಾಂಕ್ರಾಮಿಕತೆಯ ಅವಧಿಯಲ್ಲಿ ದೇಶದ ಆರೋಗ್ಯ ವ್ಯವಸ್ಥೆಯ ಒಳಹೊರಗುಗಳೇನು ಎಂಬುದು ಚೆನ್ನಾಗಿಯೇ ಅನುಭವಕ್ಕೆ ಬಂದಿದೆ. ಆದ್ದರಿಂದ ಇಂಥದೊಂದು ಯೋಜನೆಯ ತುರ್ತು ಅಗತ್ಯ ಇತ್ತು. ಈ ಯೋಜನೆ ಅನ್ವಯ, ಆಸ್ಪತ್ರೆಗಳ ಸಾಮರ್ಥ್ಯ ಹೆಚ್ಚಳ ಹಾಗೂ ವೈದ್ಯಕಿಯ ಸಲಕರಣೆಗಳ ಸಂಗ್ರಹ ಹೆಚ್ಚಿಸಿಕೊಳ್ಳಲು ಸಾಲ ಒದಗಿಸಲಾಗುತ್ತದೆ.
ಸರ್ಕಾರ ಈ ಸಾಲಕ್ಕೆ ಖಾತರಿ ನೀಡುತ್ತದೆ. ಖಾಸಗಿ ಆಸ್ಪತ್ರೆಗಳು ಹೇಗೋ ವ್ಯವಸ್ಥೆ ಮಾಡಿಕೊಳ್ಳಬಲ್ಲವಾದರೂ, ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಹೆಚ್ಚು ಒತ್ತು ನೀಡಬೇಕಾದುದು ಅನಿವಾರ್ಯ. ಸರ್ಕಾರದ ಆಶಯಕ್ಕೆ ಇಂಬು ನೀಡುವಂತೆ, ಆರೋಗ್ಯ ಸೇವೆಗಳು ಮತ್ತು ಲಸಿಕೆ ತಯಾರಕರಿಗೆ ಉತ್ತೇಜನ ನೀಡಲು ಸಾಲ ನೀಡಿಕೆಯನ್ನು ತೀವ್ರಗೊಳಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಹೇಳಿದೆ. ಈ ದಿಸೆಯಲ್ಲಿ ಬ್ಯಾಂಕುಗಳಿಗೆ ಸೂಚನೆ ನೀಡುವುದಾಗಿ ಆರ್ಬಿಐ ಹೇಳಿದೆ. ಇದು ಉತ್ತಮ ರ್ನಿಣಯ. ಆಯಾ ರಾಜ್ಯ ಸರ್ಕಾರಗಳೂ ಸಹ ಈ ನಿಟ್ಟಿನಲ್ಲಿ ಕೆಲ ಹೆಜ್ಜೆಯಿಟ್ಟಿವೆ. ಕರೊನಾ ವಿರುದ್ಧ ಸಾಮೂಹಿಕವಾಗಿ ಹೋರಾಟ ನಡೆಯಬೇಕಾಗುತ್ತದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸರ್ಕಾರಗಳ ಎಲ್ಲ ಅಂಗಸಂಸ್ಥೆಗಳು ಸಕ್ರಿಯ ಪಾತ್ರ ನಿಭಾಯಿಸಬೇಕಾಗುತ್ತದೆ. ಇದರ ಜತೆಗೆ, ಜನರ ಸಹಭಾಗಿತ್ವ ಮತ್ತು ಸಹಕಾರವೂ ಅಷ್ಟೇ ಮುಖ್ಯ. ಹಾಗಾದಲ್ಲಿ ಮಾತ್ರ ಈ ಬಿಕ್ಕಟ್ಟಿನಿಂದ ದೇಶ ಪಾರಾಗಲು ಸಾಧ್ಯವಾಗುತ್ತದೆ.