ವೃದ್ಧಾಪ್ಯ ವೇತನದಲ್ಲೂ ಭಾರಿ ಗೋಲ್‍ಮಾಲ್

Golmaal
Published on

| ಶಿವಾನಂದ ತಗಡೂರು ಬೆಂಗಳೂರು

ವೃದ್ಧಾಪ್ಯ ವೇತನ ವಿತರಣೆಯಲ್ಲಿ ನಡೆಯುತ್ತಿದ್ದ ಬೃಹತ್ ಅಕ್ರಮ ಬೆಳಕಿಗೆ ಬಂದಿದ್ದು, ಸುಮಾರು 1.20 ಲಕ್ಷ ಖಾತೆಗಳನ್ನು ಸರ್ಕಾರ ಸ್ಥಗಿತ ಮಾಡಿದೆ. ಈಗಾಗಲೇ ಮೃತಪಟ್ಟವರ ಹೆಸರಲ್ಲಿ ಪಿಂಚಣಿ ಪಡೆದಿರುವುದು, ಒಬ್ಬನೇ ವ್ಯಕ್ತಿ ವಿವಿಧ ವಿಳಾಸಗಳನ್ನು ನೀಡಿ, ಹಲವು ಬಾರಿ ಪಿಂಚಣಿ ಪಡೆದಿರುವುದೂ ಬಹಿರಂಗವಾಗಿದೆ. ಸರ್ಕಾರಿ ಖಜಾನೆಗೆ ಅಪಾರ ನಷ್ಟ ಉಂಟುಮಾಡಿದ ಆರೋಪಿಗಳನ್ನು ಪತ್ತೆ ಮಾಡಿ, ಅವರಿಂದಲೇ ನಷ್ಟ ಭರ್ತಿ ಮಾಡಿಕೊಳ್ಳುವಂತೆಯೂ ಸರ್ಕಾರ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಹಣ ಬಿಡುಗಡೆಯಿಂದ ಹಿಡಿದು, ಪೋಸ್ಟ್ ಆಫೀಸ್​ನಲ್ಲಿ ಹಣ ಪಾವತಿ ಮಾಡುವ ತನಕ ಎಲ್ಲ ಹಂತದಲ್ಲಿಯೂ ಏಜೆಂಟರ ಜಾಲ ಸಕ್ರಿಯವಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?: ಕಂದಾಯ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಾಮಾಜಿಕ ಭದ್ರತಾ ಮತ್ತು ಪಿಂಚಣಿಗಳ ನಿರ್ದೇಶನಾಲಯ ಈಗ ಹೊಸ ವ್ಯವಸ್ಥೆ ಜಾರಿಗೆ ತಂದಿದ್ದು, ಎಲ್ಲ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೀಗಾಗಿ ಎಲ್ಲ ಅವ್ಯವಹಾರಗಳಿಗೆ ಬ್ರೇಕ್ ಬಿದ್ದಿದೆ. ಸರ್ಕಾರ ಈ ಮೊದಲು ಜಿಲ್ಲಾವಾರು ಸಾಮಾಜಿಕ ಪಿಂಚಣಿಗಳ ಒಟ್ಟು ಮೊತ್ತವನ್ನು ಜಿಲ್ಲಾ ಖಜಾನೆಗೆ ಬಿಡುಗಡೆ ಮಾಡುತ್ತಿತ್ತು. ಆಗ ತಳಮಟ್ಟದಿಂದ ಮೇಲ್ಮಟ್ಟದ ತನಕ ಸರಿಯಾದ ಮಾಹಿತಿ ನೀಡದೆ ಏಜೆಂಟರು ಅಕ್ರಮ ನಡೆಸುತ್ತಿದ್ದರು ಎಂದು ದೂರಲಾಗಿದೆ. ಇದನ್ನೂ ಓದಿ: ಹತ್ತು ವರ್ಷದೊಳಗೆ ಕೇರಳವನ್ನು ಇಸ್ಲಾಮಿಕ್ ಸ್ಟೇಟ್ ಮಾಡಬಹುದು – ಧರ್ಮಬೋಧಕ ಮುಜಾಹಿದ್ ಬಲುಸ್ಸೇರಿ! ಇನ್ನು ಅರ್ಜಿ ಹಾಕಬೇಕಿಲ್ಲ!: ವೃದ್ಧಾಪ್ಯ ವೇತನ ಪಡೆಯಲು ಇನ್ನು ಮುಂದೆ ಅರ್ಜಿ ಹಾಕುವ ಅಗತ್ಯವಿಲ್ಲ. ಆರ್​ಟಿಸಿ, ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಹಿತಿ ಸರ್ಕಾರದ ಬಳಿ ಲಭ್ಯವಿರುವ ಕಾರಣ, ಯಾರು ಎಷ್ಟೆಷ್ಟು ಆದಾಯ ಹೊಂದಿದ್ದಾರೆ? ವೃದ್ಧಾಪ್ಯ ಪಿಂಚಣಿ ಪಡೆಯಲು ಅರ್ಹರು ಯಾರು? ಎನ್ನುವ ಮಾಹಿತಿ ಸಿಗಲಿದೆ. ಅದರ ಪ್ರಕಾರ ಆಯಾ ಗ್ರಾಮ ಪಂಚಾಯಿತಿಯಲ್ಲಿ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಅರ್ಜಿ ಭರ್ತಿ ಮಾಡಿಸಿಕೊಂಡು, ಬ್ಯಾಂಕ್ ಖಾತೆ ತೆರೆಯಲು ಸಹಕಾರ ನೀಡಲಿದ್ದಾರೆ. ಪಿಂಚಣಿ ಉಪ ತಹಸೀಲ್ದಾರ್ ಹಂತದಲ್ಲಿಯೇ ಮಂಜೂರಾತಿ ಆಗಲಿದೆ. ಪ್ರಾಯೋಗಿಕ ಯೋಜನೆಗೆ ಶ್ರೀರಂಗಪಟ್ಟಣ ತಾಲೂಕನ್ನು ಆಯ್ಕೆ ಮಾಡಲಾಗಿದ್ದು, ಇನ್ನುಳಿದ ಕಡೆಯಲ್ಲೂ ಇದೇ ವ್ಯವಸ್ಥೆ ಜಾರಿಗೆ ಬರಲಿದೆ. ಇದನ್ನೂ ಓದಿ: ಕ್ರಿಮಿನಲ್​ಗಳ ವಿರುದ್ಧ ನಿಯಮ ಬಿಗಿ- ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ ಚುನಾವಣಾ ಆಯೋಗ

66.28 ಲಕ್ಷ ಪಿಂಚಣಿದಾರರು

ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಯೋಜನೆ ಸೇರಿ ರಾಜ್ಯದಲ್ಲಿ 66,28,341 ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಅವರಿಗೆ ರಾಜ್ಯ ಸರ್ಕಾರದ ಖಜಾನೆಯಿಂದ 7450 ಕೋಟಿ ರೂ. ಫಾವತಿಯಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 430 ಕೋಟಿ ರೂಪಾಯಿ.

ಎಷ್ಟೆಷ್ಟು ಪಿಂಚಣೆ?
  • 65 ವರ್ಷ ತನಕ - ತಿಂಗಳಿಗೆ 600 ರೂ.
  • 65 ವರ್ಷ ಮೇಲ್ಪಟ್ಟವರಿಗೆ -ತಿಂಗಳಿಗೆ 1000 ರೂ.

ಸರ್ಕಾರದಿಂದ ಜಿಲ್ಲಾ ಖಜಾನೆ, ಬಳಿಕ ತಾಲೂಕು ಮತ್ತು ಫಲಾನುಭವಿಗಳಿಗೆ ಹಣ ಹೋಗುವ ವ್ಯವಸ್ಥೆಯನ್ನು ಬದಲಿಸಿ, ನೇರವಾಗಿ ಫಲಾನುಭವಿಗಳ ಬ್ಯಾಂಕ್ (ಆಧಾರ್ ಲಿಂಕ್) ಖಾತೆಗೆ ಹಣ ಹೋಗುವ ವ್ಯವಸ್ಥೆ ಮಾಡಿದ್ದರಿಂದ ಬೋಗಸ್ ಪ್ರಕರಣಗಳು ಬೆಳಕಿಗೆ ಬಂದಿವೆ. -ಜಿ. ಪ್ರಭು, ನಿರ್ದೇಶಕರು, ಸಾಮಾಜಿಕ ಭದ್ರತಾ ಮತ್ತು ಪಿಂಚಣಿಗಳ ನಿರ್ದೇಶನಾಲಯ ಇನ್ನು ವೃದ್ಧಾಪ್ಯ ಪಿಂಚಣಿಗೆ ಯಾರೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಅರ್ಹ ಫಲಾನುಭವಿಗಳ ಖಾತೆಗೆ ಹಣ ನೇರವಾಗಿ ಜಮೆ ಆಗಲಿದೆ. | ಆರ್.ಅಶೋಕ್ ಕಂದಾಯ ಸಚಿವ

ಡಬ್ಬಲ್ ಎಂಟ್ರಿಗೂ ಬಿತ್ತು ಕಡಿವಾಣ

ಎರಡು, ಮೂರು ಕಡೆಯಲ್ಲಿ ಹೆಚ್ಚುವರಿಯಾಗಿ ಪಿಂಚಣಿ ಪಡೆಯುವ ವ್ಯವಸ್ಥಿತ ಜಾಲವೇ ಕೆಲಸ ಮಾಡುತ್ತಿತ್ತು. ಎರಡು ಕಡೆಯಲ್ಲಿ ವಿಳಾಸ ನೀಡಿ, ಎರಡೂ ಕಡೆಯಲ್ಲಿ ಪ್ರತ್ಯೇಕವಾಗಿ ಪಿಂಚಣಿ ಪಡೆಯುತ್ತಿದ್ದ 60 ಸಾವಿರ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಹಣ ತಡೆ ಹಿಡಿಯಲಾಗಿದೆ. ಮೃತಪಟ್ಟವರ ಹೆಸರಲ್ಲಿ ಪಿಂಚಣಿ ಪಡೆಯುತ್ತಿದ್ದ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net