ಕಾಮಾಕ್ಯ ದೇಗುಲಕ್ಕೆ ಚಿನ್ನದ ಕಳಸ

Kalasa
Published on

ಗುವಾಹಟಿ: ಅಸ್ಸಾಂನ ಗುವಾಹಟಿಯ ಪ್ರಸಿದ್ಧ ಕಾಮಾಕ್ಯ ದೇವಿ ದೇವಸ್ಥಾನದ ಪ್ರಮುಖ ಕಳಸವನ್ನು ಚಿನ್ನದಿಂದ ಲೇಪಿಸುವ ಕಾರ್ಯ ಪೂರ್ಣಗೊಂಡಿದ್ದು, ದೇವಸ್ಥಾನದ ಆಡಳಿತ ಮಂಡಳಿ ಅದನ್ನು ಭಕ್ತರ ದರ್ಶನಕ್ಕೆ ಮುಕ್ತಗೊಳಿಸಿದೆ. ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಕಳಸಕ್ಕೆ ಚಿನ್ನ ಲೇಪನ ಮಾಡಿಸಿದ್ದು, ಇದಕ್ಕಾಗಿ ಒಟ್ಟು 19 ಕೆ.ಜಿ ಚಿನ್ನ ಬಳಸಲಾಗಿದೆ.

ಕಳಸಕ್ಕೆ ಚಿನ್ನ ಲೇಪಿಸುವ ಕಾರ್ಯಕ್ಕಾಗಿ ಕುಶಲ ಕರ್ವಿುಗಳನ್ನೂ ರಿಲಯನ್ಸ್ ಸಂಸ್ಥೆಯೇ ಕಳುಹಿಸಿತ್ತು. ಈ ವರ್ಷ ಅಕ್ಟೋಬರ್ ಮಧ್ಯದಲ್ಲಿ ಪ್ರಾರಂಭವಾಗಿದ್ದ ಕಾಮಗಾರಿ ಸಂಪೂರ್ಣ ಈಗ ಪೂರ್ಣಗೊಂಡಿದ್ದು, ಸಣ್ಣ ಸಮಾರಂಭವೊಂದರ ಮೂಲಕ ಕಳಸವನ್ನು ದರ್ಶನಕ್ಕೆ ಮುಕ್ತಗೊಳಿಸಲಾಗಿದೆ.

ಈ ಸಮಾರಂಭದಲ್ಲಿ ರಿಲಯನ್ಸ್​ನ ಕೆಲ ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದರು ಎಂದು ದೇವಸ್ಥಾನ ಮಂಡಳಿಯ ಅಧ್ಯಕ್ಷ ಮೋಹಿತ್ ಚಂದ್ರ ಶರ್ಮಾ ಹೇಳಿದ್ದಾರೆ. ಕಾಮಾಕ್ಯ ದೇವಿ ದೇವಸ್ಥಾನ ಅಸ್ಸಾಂನಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದು, ಪುರಾತನ 51 ಶಕ್ತಿ ಪೀಠಗಳಲ್ಲಿ ಇದೂ ಒಂದು ಎಂದು ಶರ್ಮಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net