ಹಟ್ಟಿ ಚಿನ್ನದ ಗಣಿಯ ಸುವರ್ಣ ಸಾಧನೆ

df
Published on

ದೇಶದಲ್ಲಿ ಒಂದು ಸಂಸ್ಥೆ ಮಾತ್ರ ಈಗ ಚಿನ್ನವನ್ನು ಉತ್ಪಾದಿಸುತ್ತದೆ. ಇದೇ ಕರ್ನಾಟಕದ ಹಟ್ಟಿ ಚಿನ್ನದ ಗಣಿ ಸಂಸ್ಥೆ. ಚಿನ್ನದ ಅನ್ವೇಷಣೆ, ಗಣಿ ಅಭಿವೃದ್ಧಿ ಹಾಗೂ ಚಿನ್ನದ ಸಂಸ್ಕರಣೆಯಲ್ಲಿ ಸಕ್ರಿಯವಾಗಿರುವ ಈ ಸಂಸ್ಥೆಗೆ ಈಗ 76ರ ಸಂಭ್ರಮ.

ಹಟ್ಟಿ ಚಿನ್ನದ ಗಣಿ ಸಂಸ್ಥೆಯ ಅಧಿಕೃತ ಕಚೇರಿ ಬೆಂಗಳೂರಿನಲ್ಲಿದ್ದು, ಕರ್ನಾಟಕ ಸರ್ಕಾರದ ಒಡೆತನಕ್ಕೆ ಒಳಪಟ್ಟಿದೆ. ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಘಟಕ ಹಾಗೂ ಚಿತ್ರದುರ್ಗ ಚಿನ್ನದ ಘಟಕ ಸಕ್ರಿಯ ಅನ್ವೇಷಣೆ ಹಾಗೂ ಗಣಿಗಾರಿಕೆಯಲ್ಲಿ ಪ್ರಗತಿ ಸಾಧಿಸುತ್ತಿದೆ.

ವಿಶ್ವದರ್ಜೆಯ ಹಟ್ಟಿ ಚಿನ್ನದ ಗಣಿಯು ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿದೆ. 1930ರಲ್ಲಿ ಹಟ್ಟಿಯು ಕೇವಲ 60-80 ಗುಡಿಸಲುಗಳು ಹಾಗೂ ಮನೆಗಳನ್ನು ಹೊಂದಿರುವ ಸಣ್ಣ ಹಳ್ಳಿಯಾಗಿತ್ತು. ಇದೀಗ ಪಟ್ಟಣ ಪಂಚಾಯಿತಿಯಾಗಿದೆ. 40,000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಇದರಲ್ಲಿ ಅರ್ಧದಷ್ಟು ಜನರು ಹಟ್ಟಿ ಚಿನ್ನದ ಗಣಿ ಕಾಲನಿಯಲ್ಲಿ ವಾಸವಾಗಿದ್ದಾರೆ. ಹಟ್ಟಿಯಲ್ಲಿನ ಚಿನ್ನದ ಅನ್ವೇಷಣೆ, ಗಣಿಗಾರಿಕೆಯು ಅನಾದಿ ಕಾಲದಿಂದ ನಡೆದುಕೊಂಡುಬಂದಿದೆ. ಪೂರ್ವ ಅಶೋಕನ ಯುಗದ (2000 ವರ್ಷಗಳಿಗಿಂತಲೂ ಹಳೆಯದು) ಪೂರ್ವಜರ ಗಣಿಗಾರಿಕೆ; ನಿಜಾಮನ ಅವಧಿ (1886-1920); ನಿಜಾಮ ಮತ್ತು ಬ್ರಿಟಿಷ್ ಅವಧಿ (1937-1947) ಹಾಗೂ ಆಧುನಿಕ ಗಣಿಗಾರಿಕೆ (1947 ರಿಂದ) ಈ ರೀತಿ ಪ್ರಮುಖವಾಗಿ ನಾಲ್ಕು ಕಾಲಘಟ್ಟಗಳನ್ನು ಇಲ್ಲಿನ ಗಣಿಗಾರಿಕೆಯಲ್ಲಿ ಗುರುತಿಸಬಹುದಾಗಿದೆ.

ಹಟ್ಟಿ ಚಿನ್ನದ ಗಣಿಯ ಭಾಗದ ಶಿಲಾಸ್ತರವು ಪ್ರಾಚೀನರ ಕಣ್ಣಿನಿಂದ ತಪ್ಪಿಸಿಕೊಂಡಿಲ್ಲ. ಬೆಂಕಿ ಹಾಕಿ ಕಾವು ಕೊಟ್ಟು ಗಣಿ ಮಾಡುವ ತಂತ್ರವನ್ನು ನಮ್ಮ ಪ್ರಾಚೀನರು ರೂಢಿಸಿಕೊಂಡಿದ್ದರು. ಹಟ್ಟಿ ಗಣಿಗಳಲ್ಲಿ ಚಿನ್ನಭರಿತ ಬೆಣಚುಕಲ್ಲಿನ ಸ್ತರದಲ್ಲಿ ಪ್ರಾಚೀನರು 195 ಮೀ.ವರೆಗೆ ಗಣಿ ಮಾಡಿದ್ದಾರೆ. ಇದು ಜಗತ್ತಿಗೇ ಹಳೆಯ ದಾಖಲೆ. ಹಟ್ಟಿ ಭಾಗದ ಸುತ್ತಮುತ್ತಲಲ್ಲಿ ಮುನ್ನೂರು ಪುರಾತನ ಚಿನ್ನದ ಗಣಿಗಳು ಪತ್ತೆಯಾಗಿವೆ. ಗಣಿಗಳಲ್ಲಿ ಬಳಸಿದ ಕಬ್ಬಿಣ, ಕಲ್ಲಿನ ಪೀಠ, ನೀರನ್ನು ಎತ್ತಲು ಬಳಸುತ್ತಿದ್ದ ಮಡಕೆಯ ಚೂರು ಮುಂತಾದವು ದೊರೆತಿವೆ.

ಗಣಿ ತಂತ್ರಜ್ಞಾನ ಬಲ್ಲ ಈ ಮಂದಿ ಯಾರೆಂದು ನಿಖರವಾಗಿ ಇಂದಿಗೂ ತಿಳಿದಿಲ್ಲ. ಗಣಿಯ ಆಳದಲ್ಲಿ ಗಣಿ ಕುಸಿದು ಬೀಳದಂತೆ ಜಾಲಿ ಮರದ ಕಂಬಗಳ ಆಸರೆ ಕೊಟ್ಟಿರುವುದು ಗಣಿ ತಂತ್ರಜ್ಞಾನದಲ್ಲಿ ಅವರಿಗಿದ್ದ ಪರಿಶ್ರಮ ಹಾಗೂ ಪರಿಣತಿಯನ್ನು ಸಾರುತ್ತದೆ. ರಾಯಚೂರಿನ ಮಸ್ಕಿಯಲ್ಲಿ ಅಶೋಕನ ಶಿಲಾಶಾಸನ ದೊರೆತಿದೆ. ಇದು ಅಶೋಕನ ದಕ್ಷಿಣ ಭಾರತದ ರಾಜಧಾನಿಯ ಸ್ವರ್ಣಗಿರಿ ಇರಬಾರದೇಕೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಹಳೆಯ ಗಣಿಗಾರಿಕೆಯಲ್ಲಿ ಕಂಡು ಬರುವ ಮರದ ಕಾರ್ಬನ್ ಡೇಟಿಂಗ್ ಸುಮಾರು 1900 ವರ್ಷಗಳಷ್ಟು ಹಳೆಯದಾಗಿದೆ. ಆದರೆ, ಚಿನ್ನವನ್ನು ಸಂಸ್ಕರಿಸಲು ಅವರು ಈಗ ಗ್ರಾಮೀಣ ಪ್ರದೇಶಗಳಲ್ಲಿ ಮಸಾಲೆಗಳನ್ನು ತಯಾರಿಸಲು ಬಳಸುವಂತಹ ರುಬ್ಬು ಕಲ್ಲನ್ನು ಬಳಸುತ್ತಿದ್ದರು. ಹಟ್ಟಿಯಲ್ಲಿ ಪುರಾತನ ಗಣಿಗಾರಿಕೆ ಜತೆಗೆ 1890 ರಿಂದ 1920ರ ನಡುವೆ ಚಿನ್ನದ ಗಣಿಗಾರಿಕೆ ಇತ್ತು. ಆಗ ಚಿನ್ನದ ಹತ್ತು ಗ್ರಾಂಗೆ ಬೆಲೆ ಸುಮಾರು 18 ರೂ. ಆಗಿತ್ತು. ಈ ಅವಧಿಯಲ್ಲಿ ಮುಖ್ಯ ಗಣಿ ಸುಮಾರು 1100ಮೀ. ಆಳ ಹೊಂದಿತ್ತು. ತಾಂತ್ರಿಕ ತೊಂದರೆಗಳು ಮತ್ತು ಹಣದ ಕೊರತೆಯಿಂದಾಗಿ 1920ರಲ್ಲಿ ಗಣಿಗಾರಿಕೆಯನ್ನು ಮುಚ್ಚಲಾಯಿತು.

1937ರಲ್ಲಿ ಹೈದರಾಬಾದ್ ನಿಜಾಮನ ಸರ್ಕಾರವು ಗಣಿಗಳನ್ನು ಪುನಃ ತೆರೆಯುವ ಸಾಧ್ಯತೆಯ ದೃಷ್ಟಿಯಿಂದ ಈ ಪ್ರದೇಶವನ್ನು ಮತ್ತೊಮ್ಮೆ ಅನ್ವೇಷಣೆ ಮಾಡಲು ನಿರ್ಧರಿಸಿತು. ಏಕೆಂದರೆ, ಕೃಷಿಯ ಹೊರತಾಗಿ ಈ ಪ್ರದೇಶದಲ್ಲಿ ಉದ್ಯೋಗವನ್ನು ಒದಗಿಸುವ ಏಕೈಕ ಉದ್ಯಮ ಇದಾಗಿತ್ತು. ಈ ಪ್ರದೇಶವು ಹಿಂದುಳಿದ ಜಿಲ್ಲೆ ಮತ್ತು ಶಾಶ್ವತ ಕ್ಷಾಮಪೀಡಿತ ಪ್ರದೇಶವಾಗಿತ್ತು.

1940ರಲ್ಲಿ ಅನ್ವೇಷಣೆಯ ನಂತರ ದಿನಕ್ಕೆ 100 ಟನ್ ಅದಿರನ್ನು ಸಂಸ್ಕರಿಸುವ ಗಣಿಗಾರಿಕೆ ಸ್ಥಾಪಿಸಲು ನಿರ್ಧರಿಸಲಾಯಿತು. ಆದರೆ, ಈ ಗಣಿಗಾರಿಕೆ ನಡೆಯುವ ಮೊದಲೇ 1942-46ರವರೆಗೆ ವಿಶ್ವಯುದ್ಧದ ಕಾರಣ ಗಣಿಯಿಂದ ನೀರನ್ನು ಹೊರತೆಗೆಯುವ ಕೆಲಸವನ್ನು ಹೊರತುಪಡಿಸಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸ ಲಾಯಿತು. ಹೈದರಾಬಾದ್ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ಅನ್ನು 08-07-1947 ರಂದು ಸ್ಥಾಪಿಸಿ ಗಣಿ ಕೆಲಸಗಳನ್ನು ಪ್ರಾರಂಭಿಸಲಾಯಿತು ಮತ್ತು ಚಿನ್ನದ ಉತ್ಪಾದನೆಯನ್ನು ಸೆಪ್ಟೆಂಬರ್ 1948ರಲ್ಲಿ ದಿನಕ್ಕೆ 13 ಟನ್​ಗಳ ದರದಲ್ಲಿ ಪ್ರಾರಂಭಿಸಲಾಯಿತು. ಹಂತಹಂತವಾಗಿ 1972ರಲ್ಲಿ ದಿನಕ್ಕೆ 600 ಟನ್​ಗೆ ಏರಿತು. 1979ರಲ್ಲಿ ದಿನಕ್ಕೆ 910 ಟನ್ ಹಾಗೂ ಪ್ರಸ್ತುತ ದಿನಕ್ಕೆ 2000 ಟನ್ ದರದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಹಟ್ಟಿ ಚಿನ್ನದ ಗಣಿಯ ಪ್ರಸ್ತುತ ಆಳ 960 ಮೀ. ಹಾಗೂ ಇದನ್ನು 3 ಕಿ.ಮೀ. ಆಳದವರೆಗೆ ಗಣಿಗಾರಿಕೆ ಮಾಡಬಹುದೆಂದು ಭೂಭೌತಿಕ ಅನ್ವೇಷಣೆಯಿಂದ ತಿಳಿದಿದೆ.

ಪರಿಸರಸ್ನೇಹಿ ಕ್ರಮ: ಚಿನ್ನಕ್ಕಿಂತ ಪ್ರಕೃತಿಯೇ ಅಮೂಲ್ಯ ಎಂಬ ನಂಬಿಕೆಯು ಹಟ್ಟಿ ಚಿನ್ನದ ಗಣಿಯನ್ನು ಪರಿಸರ ಸ್ನೇಹಿ ಕಂಪನಿಗಳಲ್ಲಿ ಒಂದಾಗಿ ಮಾಡಿದೆ. ಪರಿಸರಸ್ನೇಹಿ ಗಣಿಗಾರಿಕೆಯಲ್ಲಿ ತೊಡಗಿದೆ. ಕಂಪನಿಯು ಅರಣ್ಯೀಕರಣ, ಜೈವಿಕ ಇಂಧನ ಉತ್ಪಾದನೆ, ಜೈವಿಕ ಅನಿಲ ಪವನಶಕ್ತಿ ಉತ್ಪಾದನಾ ಘಟಕ, ಸೌರಶಕ್ತಿಯ ಬಳಕೆ ಹಾಗೂ ಎಲ್​ಇಡಿ ಅಳವಡಿಕೆ ಮುಂತಾದವುಗಳನ್ನು ಅಳವಡಿಸಿಕೊಂಡಿದೆ.

ಸ್ವಾತಂತ್ರ್ಯಾನಂತರ 92.78 ಟನ್ ಬಂಗಾರದ ಕೊಡುಗೆ: ಹಿಂದಿನ ಮೈಸೂರು ರಾಜ್ಯ (ಇಂದಿನ ಕರ್ನಾಟಕ) ರಚನೆಯೊಂದಿಗೆ 1956ರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಎಂದು ಮರು ನಾಮಕರಣ ಮಾಡಲಾಯಿತು. 4.10 ಗ್ರಾಂ/ಟನ್ 1947 ರಿಂದ 2022ರವರೆಗೆ ಸುಮಾರು 92.78 ಟನ್​ಗಳಷ್ಟು ಚಿನ್ನವನ್ನು ಹಟ್ಟಿ ಚಿನ್ನದ ಗಣಿ ಕಂಪನಿ ಉತ್ಪಾದಿಸಿದೆ. ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಾವಿರಾರು ಜನರಿಗೆ ಉದ್ಯೋಗ ಒದಗಿಸುವುದರೊಂದಿಗೆ ಈ ಗಣಿಯು ರಾಜ್ಯದ ಬೊಕ್ಕಸಕ್ಕೆ ಹಾಗೂ ಕೇಂದ್ರದ ಕಂದಾಯ ಸಂಗ್ರಹಣೆಗೆ ಅಪಾರ ಕೊಡುಗೆ ನೀಡಿದೆ. ಈ ಗಣಿಗಳ ಅಕ್ಕಪಕ್ಕದಲ್ಲಿ ಹೊಸ ಹೊಸ ಚಿನ್ನದ ಗಣಿಗಳನ್ನು ಪತ್ತೆ ಮಾಡಿದೆ. ಈ ಎಲ್ಲಾ ನಿಕ್ಷೇಪದ ಅದಿರನ್ನು ಹಟ್ಟಿಯಲ್ಲಿ ಸಂಸ್ಕರಿಸಬಹುದು. ಇಲ್ಲಿ ಚಿನ್ನದ ಗಣಿಗಾರಿಕೆಯನ್ನು ಅನೇಕ ವರ್ಷಗಳ ಕಾಲ ಸುಸೂತ್ರವಾಗಿ ಮುಂದುವರಿಸಬಹುದಾಗಿದೆ.

ಆರಂಭದಿಂದಲೂ ಕಡಿಮೆ ನಿರ್ವಹಣೆ ವೆಚ್ಚದೊಂದಿಗೆ ಕಾರ್ಯಕ್ಷಮತೆ ತೋರಿಸಿ, ಸಾಕಷ್ಟು ಚಿನ್ನದ ಅದಿರನ್ನು ಹೊಂದಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನಾ ಸಾಮರ್ಥ್ಯ ಗಳಿಸಿದ್ದು, ಆರ್ಥಿಕವಾಗಿ ಲಾಭದಾಯಕವಾಗಿದೆ. ಕರ್ನಾಟಕದಲ್ಲಿ ಅನೇಕ ಕಡೆಗೆ ಚಿನ್ನದ ಗಣಿಗಾರಿಕೆ ಮಾಡಲು ಸರ್ಕಾರದ ಪರವಾನಗಿಗಾಗಿ ಅರ್ಜಿಗಳನ್ನು ಸಲ್ಲಿಸಿದೆ.ಹಟ್ಟಿ ಚಿನ್ನದ ಗಣಿ ಕಂಪನಿಯು ದೂರದೃಷ್ಟಿ ಮತ್ತು ಉತ್ತಮ ಧ್ಯೇಯಗಳನ್ನು ಹೊಂದಿದೆ. ಇಂದು ಚಿನ್ನದ ಬೆಲೆ ಗಗನಕ್ಕೇರಿರುವುದರಿಂದ ಹಟ್ಟಿ ಚಿನ್ನದ ಗಣಿ ಉದ್ಯಮಕ್ಕೆ ಹೊಸ ಜೀವಕಳೆ ಬಂದಿದೆ.

(ಲೇಖಕರು ಹಟ್ಟಿ ಚಿನ್ನದ ಗಣಿ ಕಂಪನಿ ನಿರ್ದೇಶಕರು ಹಾಗೂ ಭೂ ವಿಜ್ಞಾನಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net