

ನವದೆಹಲಿ: ಯಾವುದೇ ವಸ್ತು ಕಳ್ಳತನವಾಗಲಿ ಪೊಲೀಸರು ಮೊದಲು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಬಳಿಕ ಕದ್ದು ವಸ್ತುವನ್ನು ವಶಕ್ಕೆ ಪಡೆದು, ಖದೀಮರನ್ನು ಕಂಬಿ ಹಿಂದೆ ತಳ್ಳುತ್ತಾರೆ.
ಬಹುತೇಕವಾಗಿ ಚಿನ್ನ, ಬೆಳ್ಳಿಯಂತಹ ದುಬಾರಿ ವಸ್ತುಗಳನ್ನೇ ಕಳ್ಳತನ ಮಾಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಇರುವೆಗಳ ಗುಂಪು ಚಿನ್ನದ ಸರವನ್ನು ಕದ್ದೊಯ್ಯುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ.
ಈ ವಿಡಿಯೋವನ್ನು ಛತ್ತೀಸ್ಗಢದ ಐಪಿಎಸ್ ಅಧಿಕಾರಿ ದಿಪಾನ್ಶು ಕಬ್ರಾ ಅವರು ತಮ್ಮ ಟ್ವಿಟರ್ನಲ್ಲಿ ಮಾರ್ಚ್ 24ರಂದು ಶೇರ್ ಮಾಡಿಕೊಂಡಿದ್ದಾರೆ. ಕೆಲವು ಇರುವೆಗಳು ಚಿನ್ನದ ಸರವನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯವಿದೆ.
15 ಸೆಕೆಂಡ್ ವಿಡಿಯೋಗೆ ಅತ್ಯಂತ ಕಿರಿಯ ಚಿನ್ನ ಕಳ್ಳಸಾಗಾಣೆಗಾರರು ಎಂದು ಶೀರ್ಷಿಕೆ ನೀಡಲಾಗಿದೆ. ಇದೀಗ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯಾತ್ಮಕ ಕಾಮೆಂಟ್ಗಳನ್ನು ಹರಿಬಿಟ್ಟಿದ್ದಾರೆ. ಕಳ್ಳ ಇರುವೆಗಳನ್ನು ಬಂಧಿಸಲಾಗಿದೆಯೇ? ಅಥವಾ ಅವರು ಎಸ್ಕೇಪ್ ಆದರಾ? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್)