ಅಕ್ಷಿಗೆ ಸ್ಫೂರ್ತಿ ಡಾ. ರಾಜ್; ರಾಷ್ಟ್ರಪ್ರಶಸ್ತಿ ಗೆದ್ದ ಖುಷಿಯಲ್ಲಿ ಚಿತ್ರತಂಡ

Akshi
Published on

ಬೆಂಗಳೂರು: ಈ ಬಾರಿ ರಾಷ್ಟ್ರಪ್ರಶಸ್ತಿ ಕಣದಲ್ಲಿ ಕನ್ನಡದಿಂದ ಕೆಲವು ಪ್ರಮುಖ ಚಿತ್ರಗಳಿದ್ದವು. ಗಿರೀಶ್ ಕಾಸರವಳ್ಳಿ ಅವರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’, ಪಿ. ಶೇಷಾದ್ರಿ ನಿರ್ದೇಶನದ ‘ಮೋಹನ್​ದಾಸ್’, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಅಮೃತಮತಿ’ ಮುಂತಾದ ಚಿತ್ರಗಳಿದ್ದು, ಈ ಚಿತ್ರಗಳ ಜತೆಗೆ ಸ್ಪರ್ಧಿಸಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಪ್ರಶಸ್ತಿ ಪಡೆಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ, ‘ಅಕ್ಷಿ’ ಎಂಬ ಹೊಸಬರ ಚಿತ್ರವು ಅತ್ಯುತ್ತಮ ಪ್ರಾದೇಶಕ ಚಿತ್ರವಾಗಿ ಹೊರಹೊಮ್ಮುವ ಮೂಲಕ ಎಲ್ಲರ ಗಮನಸೆಳೆದಿದೆ.

ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕ ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಚಿತ್ರತಂಡದವರು ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಂದಿದ್ದರು. ‘ಆರಂಭದಲ್ಲಿ ಒಂದೊಳ್ಳೆ ಸಿನಿಮಾ ಮಾಡಬೇಕೆಂಬ ಆಸೆಯಷ್ಟೇ ನಮಗಿತ್ತು. ಒಳ್ಳೆಯ ಕಥೆ ಹುಡುಕುತ್ತಿದ್ದಾಗ ಗೆಳೆಯ ಮನೋಜ್ ಕುಮಾರ್ ಕಥೆ ತಂದರು. ಆಗ ಶುರುವಾಗಿದ್ದೇ ‘ಅಕ್ಷಿ’. ಈ ಚಿತ್ರಕ್ಕೀಗ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಅದಕ್ಕೆ ನಿಜವಾದ ಕಾರಣೀಕರ್ತರು ಡಾ. ರಾಜಕುಮಾರ್!’ ಎಂದರು ಚಿತ್ರದ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್.

ಡಾ. ರಾಜ್ ಹೇಗೆ ಕಾರಣ ಎಂಬುದನ್ನು ವಿವರಿಸಿದ ನಿರ್ದೇಶಕ ಮನೋಜ್, ‘ಡಾ. ರಾಜ್ ತೀರಿದಾಗ, ಅವರ ಕಣ್ಣುಗಳನ್ನು ದಾನ ಮಾಡಿದರಂತೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆ ವಿಚಾರ ನನ್ನಲ್ಲೂ ಕುತೂಹಲ ಮೂಡಿಸಿತು.

ಆ ವಿಷಯವನ್ನೇ ಕಥೆಯಾಗಿ ಪರಿವರ್ತಿಸಿದೆ. ಇದೀಗ ಸಿನಿಮಾ ಆಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದೆ’ ಎಂದರು. ಇನ್ನು ಈ ಚಿತ್ರದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಿನಿಮಾ ಖ್ಯಾತಿಯ ಗೋವಿಂದೇಗೌಡ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಕಿರುತೆರೆಯ ನಟಿ ಇಳಾ ವಿಟ್ಲಾ, ಬಾಲ ಕಲಾವಿದರಾದ ಮಿಥುನ್, ನಾಗರಾಜ್, ಕಸ್ತೂರಿ ಸೇರಿ ಹಲವರು ಈ ಸಿನಿಮಾದಲ್ಲಿದ್ದಾರೆ. ಚಿತ್ರಕ್ಕೆ ಮುಕುಲ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net