ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಏರಿಕೆ!

gold
Published on

ನವದೆಹಲಿ: ಮದುವೆ ಸೀಸನ್​ನಿಂದಾಗಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಮಂಗಳವಾರ 600 ರೂ.ನಷ್ಟು ಏರಿತು. ಶೇ. 99.5 ಶುದ್ಧತೆಯ 10 ಗ್ರಾಂ ಚಿನ್ನದ ದರ 77,650ಕ್ಕೆ ತಲುಪಿತು. ಅದರ ಬೆಲೆ ಸೋಮವಾರ 77,050 ರೂ. ಇತ್ತು. ಶೇ. 99.9 ಶುದ್ಧತೆಯ ಚಿನ್ನದ ಬೆಲೆ 78,050ಕ್ಕೆ ತಲುಪಿತು. ಬೆಳ್ಳಿಯ ಬೆಲೆ ಕೂಡ 1500 ರೂ.ನಷ್ಟು ಏರಿಕೆಯಾಗಿ, ಕೆಜಿಗೆ 93,500 ರೂ. ಆಯಿತು. ಸೋಮವಾರ ಅದರ ಬೆಲೆ 92,000 ರೂ. ಇತ್ತು.

ಷೇರುಪೇಟೆ ಅಲ್ಪ ಏರಿಕೆ

ಬ್ಯಾಂಕಿಂಗ್, ಐಟಿ, ಆಟೋಮೊಬೈಲ್ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಭಾರತೀಯ ಷೇರುಪೇಟೆ ಮಂಗಳವಾರ ಏರಿಕೆ ದಾಖಲಿಸಿತು. ಕಳೆದ 7 ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ನಿಫ್ಟಿ ಮತ್ತು ನಾಲ್ಕು ದಿನಗಳಿಂದ ಕುಸಿದಿದ್ದ ಸೆನ್ಸೆಕ್ಸ್ ಚೇತರಿಸಿಕೊಂಡವು. ಸೆನ್ಸೆಕ್ಸ್ ದಿನದಂತ್ಯದಲ್ಲಿ 239 ಅಂಕ ಹೆಚ್ಚಳವಾಗಿ 77,578ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್ 1112 ಅಂಕಗಳಷ್ಟು ಏರಿಕೆ ಕಂಡಿತ್ತು. ಆದರೆ ಕೊನೆಯಲ್ಲಿ ಮಾರುಕಟ್ಟೆಯ ಏರಿಕೆಗೆ ರಿಲಯನ್ಸ್ ಇಂಡಸ್ಟ್ರೀಸ್ ಕಡಿವಾಣ ಹಾಕಿತು.

ನಿಫ್ಟಿ ಕೂಡ ದಿನದ ಮಧ್ಯಭಾಗದಲ್ಲಿ 300 ಅಂಕ ಏರಿತ್ತು. ವಹಿವಾಟಿನ ಕೊನೆಯಲ್ಲಿ 64 ಅಂಕ ಏರಿಕೆ ಕಂಡು 23,518ಕ್ಕೆ ಸ್ಥಿರಗೊಂಡಿತು. ಮಹಿಂದ್ರಾ ಆಂಡ್ ಮಹಿಂದ್ರಾ, ಟೆಕ್ ಮಹಿಂದ್ರಾ, ಎಚ್​ಡಿಎಫ್​ಸಿ ಬ್ಯಾಂಕ್, ಟೈಟನ್, ಟಾಟಾ ಮೋಟರ್ಸ್, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್, ಇನ್​ಫೋಸಿಸ್ ಮುಂತಾದ ಕಂಪನಿಗಳ ಷೇರುಗಳು ಲಾಭ ಗಳಿಸಿದವು. ರಿಲಯನ್ಸ್ ಇಂಡಸ್ಟ್ರೀಸ್, ಎಸ್​ಬಿಐ, ಬಜಾಜ್ ಫಿನ್​ಸರ್ವ್, ಮಾರುತಿ, ಟಾಟಾ ಸ್ಟೀಲ್, ಭಾರ್ತಿ ಏರ್​ಟೆಲ್ ಮುಂತಾದವುಗಳ ಷೇರುಗಳು ಹಿಂದೆ ಬಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net