

ನವದೆಹಲಿ: ದಸರಾ ಹಬ್ಬದ ಸಂದರ್ಭದಲ್ಲಿ ಚಿನ್ನದ ಬೆಲೆ ಏರಿಕೆಯಿಂದಾಗಿ ಮಾರಾಟ ಪ್ರಮಾಣ ಶೇ. 25ರಷ್ಟು ಕುಸಿತಗೊಂಡಿದೆ ಎಂದು ಭಾರತೀಯ ಚಿನ್ನ-ಬೆಳ್ಳಿ ಮತ್ತು ಆಭರಣ ಮಾರಾಟಗಾರರ ಸಂಘ (ಐಬಿಜೆಎ) ತಿಳಿಸಿದೆ. ಈ ವರ್ಷ 18 ಟನ್ ಚಿನ್ನ ಮಾತ್ರ ಮಾರಾಟವಾಗಿದೆ. ಕಳೆದ ವರ್ಷ 24 ಟನ್ ಚಿನ್ನ ಮಾರಾಟವಾಗಿತ್ತು. ಆದರೂ, ಬೆಲೆ ಏರಿಕೆಯಿಂದಾಗಿ ಮಾರಾಟವಾದ ಚಿನ್ನದ ಮೌಲ್ಯದಲ್ಲಿ ಶೇ. 30-35ರಷ್ಟು ಹೆಚ್ಚಳ ಕಂಡುಬಂದಿದೆ.
ದಸರಾ ದಿನವೇ ಚಿನ್ನದ ಬೆಲೆ 10 ಗ್ರಾಂಗೆ 1.16 ಲಕ್ಷ ರೂ.ಗೆ ಏರಿಕೆಯಾಗಿತ್ತು. ಕಳೆದ ವರ್ಷ ದಸರಾ ದಿನದಂದು ಇದು 78,000 ರೂ. ಇತ್ತು. ಅದಕ್ಕೆ ಹೋಲಿಸಿದರೆ ಈಗಿನ ಬೆಲೆ ಶೇ. 48ಕ್ಕಿಂತ ಹೆಚ್ಚು. ಶೇ. 3 ಜಿಎಸ್ಟಿ ಮತ್ತು ಶೇ. 15-30ರಷ್ಟು ಮೇಕಿಂಗ್ ಚಾರ್ಜ್ ಸೇರಿ, ಚಿನ್ನದ ಬೆಲೆಯು ಖರೀದಿದಾರರಿಗೆ ಹೊರೆಯಾಗಿ ಪರಿಣಮಿಸಿತು ಎಂದು ಐಬಿಜೆಎ ಕಾರ್ಯದರ್ಶಿ ಸುರೇಂದ್ರ ಮೇಠಾ ತಿಳಿಸಿದ್ದಾರೆ.