ಚಿನ್ನದ ನಾಗಾಲೋಟ; ಮಿರಿ ಮಿರಿ ಮಿನುಗುತಿದೆ ಬೆಳ್ಳಿ

gold-513062_640
Published on

ಭಾರತದಲ್ಲಿ ಈಗ ಹಬ್ಬಗಳ ಋತು. ದೀಪಾವಳಿ ಪರ್ವ ಮುಗಿಯುತ್ತಿದ್ದಂತೆ ಮದುವೆಗಳ ಸೀಜನ್. ಮತ್ತೊಂದೆಡೆ, ಜಾಗತಿಕವಾಗಿ ಅಸ್ಥಿರತೆಯ ವಾತಾವರಣ. ಹಾಗಾಗಿ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬಂಗಾರದ ಬೆಲೆ 10 ಗ್ರಾಂಗೆ 1.34 ಲಕ್ಷ ರೂ. ಗಡಿ ದಾಟಿ ಸಾರ್ವಕಾಲಿಕ ಏರಿಕೆ ಕಂಡಿದೆ. ಬೆಳ್ಳಿ ಕೆಜಿಗೆ 1.84 ಲಕ್ಷ ರೂ. ಆಸುಪಾಸಿನಲ್ಲಿದೆ. ಬೆಂಗಳೂರಿನಲ್ಲಿ -2 ಲಕ್ಷ ರೂ ಗಡಿ ದಾಟಿದೆ. ಇನ್ನೂ ಕೆಲ ಕಾಲ ಚಿನ್ನ ಮತ್ತು ಬೆಳ್ಳಿಯ ನಾಗಾಲೋಟ ಮುಂದುವರಿಯಲಿದ್ದು, ಬೆಲೆ ಮತ್ತಷ್ಟು ಹೆಚ್ಚಲಿದೆ ಎಂದಿದ್ದಾರೆ ಮಾರುಕಟ್ಟೆ ತಜ್ಞರು.

ಮಾರುಕಟ್ಟೆ ತಜ್ಞರ ಮತ್ತು ವಿಶ್ಲೇಷಕರ ಊಹೆಯನ್ನು ಮೀರಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರುಮುಖವಾಗಿದೆ. 2025ರ ಅಂತ್ಯದಲ್ಲಿ 10 ಗ್ರಾಂ ಚಿನ್ನದ ದರ 1 ಲಕ್ಷ ರೂ.ಗೆ ತಲುಪಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದರು. ಆದರೆ, ಸೆಪ್ಟೆಂಬರ್​ನಲ್ಲೇ 1 ಲಕ್ಷ ರೂ. ಗಡಿ ದಾಟಿದ 10 ಗ್ರಾಂ ಚಿನ್ನದ ದರ, ದೀಪಾವಳಿ ಹೊಸ್ತಿಲಲ್ಲಿ 1.31 ಲಕ್ಷ ರೂ. ದಾಟಿದೆ. 2024ರಲ್ಲಿ ಷೇರುಪೇಟೆ ಭರ್ಜರಿ ಪ್ರದರ್ಶನ ನೀಡಿ, ಷೇರುದಾರರಿಗೆ ಉತ್ತಮ ಲಾಭವನ್ನು ತಂದುಕೊಟ್ಟಿತು. ಆದರೆ, 2025ರ ಆರಂಭದಿಂದಲೂ ಷೇರುಪೇಟೆ ಹೊಯ್ದಾಡುತ್ತಿದ್ದು, ಏರಿಕೆ-ಇಳಿಕೆಯ ನಡುವೆ ಬೆಳವಣಿಗೆ ವೇಗ ಕಳೆದುಕೊಂಡಿದೆ. ಆದರೆ, ಚಿನ್ನ ಮತ್ತು ಬೆಳ್ಳಿ ಇದಕ್ಕೆ ವ್ಯತಿರಿಕ್ತ. ಜನವರಿ 1ರಿಂದ ಅಕ್ಟೋಬರ್ 16ರವರೆಗಿನ ಹತ್ತೂವರೆ ತಿಂಗಳ ಅವಧಿಯಲ್ಲೇ ಚಿನ್ನ 100%ಕ್ಕಿಂತಲೂ ಅಧಿಕ ರಿಟರ್ನ್ಸ್ ನೀಡಿದ್ದರೆ, ಬೆಳ್ಳಿ 140% ರಿಟರ್ನ್ಸ್ ನೀಡಿದೆ. ಆದರೆ, ಬೆಲೆ ಏರುಮುಖವಾಗುತ್ತಿರುವುದರಿಂದ ಕೆಳಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರು ಚಿನ್ನ, ಬೆಳ್ಳಿ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಹಬ್ಬದ ಋತು ಮುಗಿದ ಮೇಲೆ ಬೆಲೆ ಸ್ವಲ್ಪ ಇಳಿಯಬಹುದು ಎಂಬ ತಜ್ಞರ ಅನಿಸಿಕೆಯನ್ನು ನಂಬಿ ಅದೆಷ್ಟೋ ಜನರು ಮದುವೆ ಸಮಾರಂಭಗಳನ್ನೇ ಮುಂದೂಡಿರುವ ನಿದರ್ಶನಗಳಿವೆ.

ಚಿನ್ನದ ಬೆಲೆ 3,200 ರೂ. ಏರಿಕೆ

ನವದೆಹಲಿ: ಧನತೇರಸ್, ದೀಪಾವಳಿಗೂ ಮುನ್ನ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಖರೀದಿ ಭರಾಟೆಯಿಂದಾಗಿ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 3,200 ರೂ. ಏರಿಕೆ ಕಂಡಿದೆ. ಗುರುವಾರ 10 ಗ್ರಾಂಗೆ 1,31,600 ರೂ.ಗೆ ಮುಕ್ತಾಯಗೊಂಡಿದ್ದ ಶೇ. 99.9 ಶುದ್ಧತೆಯ ಚಿನ್ನದ ಬೆಲೆ ಶುಕ್ರವಾರ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1,34,800 ರೂ.ಗೆ ತಲುಪಿತು. ಶೇ. 99.5 ಶುದ್ಧತೆಯ ಚಿನ್ನ ಗುರುವಾರ 1,31,000 ರೂ. ಇದ್ದದ್ದು ಶುಕ್ರವಾರ 1,34,200 ರೂ.ಗೆ ತಲುಪಿತು. ಬೆಳ್ಳಿಯ ಬೆಲೆ ಶುಕ್ರವಾರ ವಿರುದ್ಧ ದಿಕ್ಕಿನಲ್ಲಿ ಚಲಿಸಿತು. 7,000 ರೂಪಾಯಿಗಳಷ್ಟು ಕುಸಿದು ಕೆಜಿಗೆ 1,77,000 ರೂ.ಗೆ ಇಳಿಯಿತು. ಗುರು ವಾರ ಇದು -ಠಿ;1,84,000 ಇತ್ತು.

ಇನ್ನೂ ಹೆಚ್ಚಲಿದೆ ಧಾರಣೆ

ಷೇರುಪೇಟೆಯಲ್ಲಿ ಏರಿಳಿತ ಮುಂದುವರಿದಿರುವಂತೆಯೇ ಹೂಡಿಕೆಗಾಗಿ ಬಹುತೇಕರ ಗಮನ ಬಂಗಾರದ ಮೇಲಿದೆ. ಚಿನ್ನಾಭರಣ ಖರೀದಿ ಒಂದೆಡೆಯಾದರೆ, ಚಿನ್ನದ ಗಟ್ಟಿ ಖರೀದಿ ಮಾಡಿಟ್ಟುಕೊಳ್ಳವವರು ಇನ್ನೊಂದಿಷ್ಟು ಜನ. ಈ ನಡುವೆ ಬಂಗಾರದ ಬೆಲೆ ಗಗನಮುಖಿಯಾಗಿದ್ದು, ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಭಾರತದ ಮಟ್ಟಿಗೆ ಹೇಳುವುದಾದರೆ ದೇಶದ ಒಟ್ಟಾರೆ ಚಿನ್ನದ ಬೇಡಿಕೆಯಲ್ಲಿ ಶೇಕಡ 60ರಷ್ಟು ಬೇಡಿಕೆ ಗ್ರಾಮೀಣ ಪ್ರದೇಶದಿಂದ ಬರುತ್ತದೆ. ಕಳೆದ ಎರಡು ದಶಕಗಳಲ್ಲಿ ಗ್ರಾಮೀಣ ಜನರ ಆದಾಯ ಮತ್ತು ಅವರು ಮಾಡುವ ವೆಚ್ಚದಲ್ಲಿ ಏರಿಕೆಯಾಗಿದೆ. ಇದರಿಂದ ಅವರು ಹೆಚ್ಚು ಹೆಚ್ಚು ಚಿನ್ನ ಖರೀದಿಗೆ ಮುಂದಾಗುತ್ತಿದ್ದಾರೆ. ಇನ್ನು, ಮೇಲ್ಮಧ್ಯಮ ವರ್ಗದವರು ಸುರಕ್ಷಿತ ಹೂಡಿಕೆ ಎಂದು ಚಿನ್ನದ ಕಡೆ ಮುಖ ಮಾಡಿದ್ದಾರೆ.

ತನ್ನ ದಾಖಲೆ ತಾನೇ ಪುಡಿಗಟ್ಟಿದ ಚಿನ್ನ

ಅಖಿಲ ಭಾರತ ಸರಾಫ ಸಂಘದ ಮಾಹಿತಿಯಂತೆ, ಈ ವರ್ಷ ಚಿನ್ನ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿದೆ. ಚಿನ್ನ ಈ ವರ್ಷ (ಜನವರಿಯಿಂದ ಈವರೆಗೆ) ಬೆಲೆ ಏರಿಕೆಯಲ್ಲಿ 48 ಬಾರಿ ಸಾರ್ವಕಾಲಿಕ ದಾಖಲೆಯನ್ನು ನಿರ್ವಿುಸಿದೆ! ಇದು ಇತಿಹಾಸದಲ್ಲೇ ಎರಡನೇ ಬಾರಿಯಂತೆ. ಈ ಮುನ್ನ 1979ರಲ್ಲಿ ಚಿನ್ನ 57 ಬಾರಿ ಸಾರ್ವಕಾಲಿಕ ಏರಿಕೆ ಕಂಡಿತ್ತು. ಮತ್ತೊಂದೆಡೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್​ಎಸ್​ಇ) ನಿಫ್ಟಿ 2024ರಲ್ಲಿ 65 ಬಾರಿ ಸಾರ್ವಕಾಲಿಕ ಏರಿಕೆ ಕಂಡಿತ್ತು. ಆದರೆ, 2025ರಲ್ಲಿ ಒಮ್ಮೆಯೂ ಹೊಸ ಎತ್ತರ ತಲುಪಿಲ್ಲ. 2016ರಲ್ಲಿಯೂ ಹೀಗೆ ಸಂಭವಿಸಿತ್ತು. ಆ ವರ್ಷ ನಿಫ್ಟಿ ಒಮ್ಮೆಯೂ ಸಾರ್ವಕಾಲಿಕ ಏರಿಕೆ ಕಂಡಿರಲಿಲ್ಲ. 2025ರಲ್ಲಿ ನಿಫ್ಟಿ ಸರಾಸರಿ 7% ಹಾಗೂ ಸೆನ್ಸೆಕ್ಸ್ 5% ಏರಿಕೆ ಕಂಡಿವೆ. ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರದ ಉದ್ವಿಗ್ನತೆ ತಗ್ಗುವವರೆಗೂ, ಅಮೆರಿಕ ಭಾರತದ ಮೇಲಿನ ಸುಂಕ ಇಳಿಸುವವರೆಗೂ ಷೇರುಪೇಟೆ ದೊಡ್ಡ ಜಿಗಿತ ಕಾಣುವುದು ಕಷ್ಟ ಎನ್ನುತ್ತಾರೆ ತಜ್ಞರು. ಚಿನ್ನ ಮತ್ತು ಬೆಳ್ಳಿಯ ದರ ವರ್ಷಾಂತ್ಯದಲ್ಲೂ ಏರಿಕೆ ಕಾಣುವ ಸಾಧ್ಯತೆ ಇದೆ. 2025ರ ಅಂತ್ಯದ ಹೊತ್ತಿಗೆ 10 ಗ್ರಾಂ ಚಿನ್ನದ ದರ 1.50 ಲಕ್ಷ ರೂ.ಗೆ ತಲುಪುವ ಸಾಧ್ಯತೆ ಇದೆ. ಕೆಜಿ ಬೆಳ್ಳಿಯ ದರ 2 ಲಕ್ಷ ರೂ.ಗೆ ತಲುಪಬಹುದು.

ಹಿಂದೆಯೂ ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು: 2023ರ ಉದಾಹರಣೆಯನ್ನೇ ತೆಗೆದುಕೊಂಡರೆ ಚಿನ್ನದ ಬೆಲೆ ಒಂದೇ ವರ್ಷದಲ್ಲಿ 10 ಗ್ರಾಂಗೆ 8 ಸಾವಿರಕ್ಕಿಂತ ಅಧಿಕ ಹೆಚ್ಚಳ ಕಂಡಿತ್ತು. 2023ರ ಜನವರಿಯಲ್ಲಿ 54,867 ರೂ. ಇದ್ದ ದರ 2023ರ ಡಿಸೆಂಬರ್​ನಲ್ಲಿ 63,246 ರೂ.ಗೆ ತಲುಪಿತು. ಅಂದರೆ, 8,379 (ಶೇಕಡ 16) ರೂ.ಗಳಷ್ಟು ಹೆಚ್ಚಳ ಕಂಡುಬಂತು. 2023ರ ಜನವರಿಯಲ್ಲಿ 1 ಕೆಜಿ ಬೆಳ್ಳಿಯ ಬೆಲೆ 68,092 ರೂ. ಇದ್ದದ್ದು 2023ರ ಡಿಸೆಂಬರ್​ನಲ್ಲಿ 73,395 ರೂ.ಗೆ ತಲುಪಿ, 5,303 ರೂ.ಗಳ ಏರಿಕೆ ದಾಖಲಿಸಿತು. 2024ರಲ್ಲಿ ಶೇಕಡ 27ರಷ್ಟು ಹಾಗೂ 2025ರ ಆರಂಭದ ಮೂರು ತಿಂಗಳಲ್ಲೇ ಶೇ.14ರಷ್ಟು ಏರಿಕೆ ಕಂಡಿತ್ತು.

ಕಾಡುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ

  •  ಚಿನ್ನದ ಬೆಲೆ ಸದ್ಯದಲ್ಲೇ ಇಳಿಕೆ ಕಾಣಲಿದೆಯೇ? ಇಲ್ಲ. 2026ರವರೆಗೂ ಏರುಮುಖದಲ್ಲೇ ಸಾಗಲಿದೆ. ಈ ವರ್ಷ (2025) ಕೂಡ ಮತ್ತಷ್ಟು ಹೆಚ್ಚಳವಾಗಲಿದೆ.
  • ಈಗಾಗಲೇ 1.31 ಲಕ್ಷ ರೂ. ದಾಟಿದ್ದು, ಮತ್ತೆ ಎಷ್ಟು ಏರಿಕೆಯಾಗಬಹುದು? ಈ ವರ್ಷಾಂತ್ಯದ ಹೊತ್ತಿಗೆ 1.50 ಲಕ್ಷ ರೂ. ಗಡಿ ದಾಟುವ ಸಾಧ್ಯತೆ ಇದೆ.
  • ಚಿನ್ನದ ಮೇಲಿನ ಹೂಡಿಕೆ ಉತ್ತಮ ರಿಟರ್ನ್ಸ್ ನೀಡುತ್ತಿದೆಯೇ? ಹೌದು, ಇದರಿಂದಾಗಿಯೇ ಖರೀದಿ ಪ್ರಮಾಣ ಹೆಚ್ಚಳವಾಗಿದೆ. ಕಳೆದ 10 ತಿಂಗಳಲ್ಲೇ ಶೇಕಡ 101ರಷ್ಟು ರಿಟರ್ನ್ಸ್ ನೀಡಿದೆ.
  • ಚಿನ್ನದ ಮೇಲೆ ಹೂಡಿಕೆಗೆ ಇದು ಸಕಾಲವೆ? ಹೌದು, ಬೆಲೆ ಮತ್ತಷ್ಟು ಹೆಚ್ಚಲಿರುವ ಹಿನ್ನೆಲೆಯಲ್ಲಿ ಚಿನ್ನ ಖರೀದಿಗೆ ಮುಂದಾಗಬಹುದು ಎಂಬುದು ತಜ್ಞರ ಅಭಿಪ್ರಾಯ.

ದರ ಹೆಚ್ಚಳಕ್ಕೆ ಕಾರಣ

  •  ಜಗತ್ತಿನ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳು ಹಿಂದೆಂದೂ ಕಾಣದ ರೀತಿಯಲ್ಲಿ ಚಿನ್ನದ ಖರೀದಿಯನ್ನು ಹೆಚ್ಚಿಸುತ್ತಿವೆ. ರಷ್ಯಾ-ಯೂಕ್ರೇನ್ ಸಂಘರ್ಷದ ನಂತರ ಶುರುವಾದ ಈ ಬೆಳವಣಿಗೆ ಈಗಲೂ ಮುಂದುವರಿದೆ.
  •  ಬೆಲೆಯೇರಿಕೆಗೆ ಕಡಿವಾಣ ಹಾಕಲು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರ ಇನ್ನಷ್ಟು ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿ ಇರುವುದರಿಂದ, ಜನರು ಚಿನ್ನ ಖರೀದಿಗೆ ಮುಗಿಬಿದ್ದಿದ್ದಾರೆ.
  •  ಪ್ರಸ್ತುತ ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಕೂಡ ಬಂಗಾರದ ಬೆಲೆ ಏರಿಕೆಗೆ ಪ್ರಮುಖ ಕಾರಣ. ವಾಣಿಜ್ಯ ಸಮರ, ನಿರ್ಬಂಧ, ಜಾಗತಿಕ ಬಿಕ್ಕಟ್ಟು ಎಲ್ಲವೂ ಪರಿಣಾಮ ಬೀರಿವೆ.
  • ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರು ವುದು ಚಿನ್ನದ ದರದ ಮೇಲೆ ಪರಿಣಾಮ ಬೀರಿದೆ.
  • ಜಾಗತಿಕ ಸ್ತರದಲ್ಲಿ ಬೆಲೆಯೇರಿಕೆ ಪ್ರಮಾಣ ಈಗಲೂ ಚಿಂತಾಜನಕ ಸ್ಥಿತಿಯಲ್ಲಿದ್ದು, ಜನರು ಚಿನ್ನದಲ್ಲಿ ಹೂಡಿಕೆಯೇ ಸುರಕ್ಷಿತ ಎಂಬ ಮಾರ್ಗ ಕಂಡುಕೊಂಡಿದ್ದಾರೆ.
  • ಷೇರು ಮಾರುಕಟ್ಟೆಯ ಕುಸಿತವೂ ಜನರಿಗೆ ಚಿನ್ನ ಖರೀದಿಗೆ ಪ್ರೇರೇಪಿಸಿದೆ.
  •  ಮದುವೆ ಸೀಜನ್ ನಡೆಯುತ್ತಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net