

ನವದೆಹಲಿ: ದುರ್ಬಲ ಜಾಗತಿಕ ಪ್ರವೃತ್ತಿ, ಷೇರುದಾರರಿಂದ ನಿರಂತರ ಮಾರಾಟ ಮುಂತಾದ ಕಾರಣಗಳಿದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಚಿನ್ನದ ಬೆಲೆ 300 ರೂ. ಕಡಿಮೆಯಾಗಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನ ಮಂಗಳವಾರ 10 ಗ್ರಾಂಗೆ 98,900 ರೂ. ಇದ್ದದ್ದು ಬುಧವಾರ 98,600 ರೂ. ಆಗಿದೆ. ಶೇ. 99.5 ಶುದ್ಧತೆಯ ಚಿನ್ನ 250 ರೂ.ನಷ್ಟು ಇಳಿಕೆಯಾಗಿ 98,050 ರೂ. ತಲುಪಿದೆ. ಬೆಳ್ಳಿ ಬೆಲೆ ಬುಧವಾರ ಕೆಜಿಗೆ 1,100 ರೂ.ನಷ್ಟು ಇಳಿಕೆಯಾಗಿ 1,03,100 ರೂ.ಗೆ ತಲುಪಿದೆ. ಮಂಗಳವಾರ ಇದು 1,04,200 ರೂ. ಇತ್ತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
ಮುಂಬೈ: ಇರಾನ್-ಇಸ್ರೇಲ್ ಯುದ್ಧವಿರಾಮದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕಡಿಮೆಯಾಗಿ ಜಾಗತಿಕ ಮಾರುಕಟ್ಟೆಗಳು ಏರಿಕೆಯಾಗಿದ್ದನ್ನು ಅನುಸರಿಸಿ ಭಾರತೀಯ ಷೇರು ಮಾರುಕಟ್ಟೆ ಕೂಡ ಬುಧವಾರ ಶೇಕಡ 1ರಷ್ಟು ಹೆಚ್ಚಳ ದಾಖಲಿಸಿದೆ. ದಿನದ ವಹಿವಾಟಿನ ನಡುವೆ 760 ಅಂಕ ಏರಿಕೆಯಾಗಿ 82,815ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 700 ಅಂಕ ಏರಿಕೆ ದಾಖಲಿಸಿ 82,755ಕ್ಕೆ ಸ್ಥಿರವಾಯಿತು. ನಿಫ್ಟಿ 200 ಅಂಕ ಏರಿಕೆಯಾಗಿ 25,244ಕ್ಕೆ ಸ್ಥಿರಗೊಂಡಿತು. ಟೈಟನ್, ಮಹಿಂದ್ರಾ ಆಂಡ್ ಮಹಿಂದ್ರಾ, ಇನ್ಪೋಸಿಸ್, ಪವರ್ಗ್ರಿಡ್, ಟಾಟಾ ಕನ್ಸಲ್ಟನ್ಸಿ ಸರ್ವೀಸಸ್, ಭಾರ್ತಿ ಏರ್ಟೆಲ್ ಲಾಭ ಗಳಿಸಿದವು. ಭಾರತ್ ಎಲೆಕ್ಟ್ರಾನಿಕ್ಸ್, ಕೋಟಕ್ ಮಹಿಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ನಷ್ಟ ಅನುಭವಿಸಿದವು. ಏಷ್ಯಾದ ಮಾರುಕಟ್ಟೆಗಳು ಏರಿಕೆ ಕಂಡರೆ, ಯುರೋಪಿಯನ್ ಮಾರುಕಟ್ಟೆಗಳು ಮಿಶ್ರ ಫಲಿತಾಂಶ ತೋರಿದವು. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 1.21ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 67.95 ಡಾಲರ್ಗೆ ತಲುಪಿತು.