ಇಳಿಕೆ ಹಾದಿಯಲ್ಲಿ ಚಿನ್ನದ ದರ

gold
Published on

ಸಂಕಷ್ಟದ ಸನ್ನಿವೇಶವಾದ್ದರಿಂದ ಕೇಂದ್ರ ಬಜೆಟ್ ಬಗ್ಗೆ ಕುತೂಹಲವಿತ್ತು. ಚಿನ್ನ-ಬೆಳ್ಳಿ ವಿಚಾರದಲ್ಲಿ ಮಾರುಕಟ್ಟೆಗೆ ಶುಭ ಸುದ್ದಿಯೇ ಸಿಕ್ಕಿತು. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಚಿನ್ನದ ಮೇಲಿನ ಆಮದು ಸುಂಕ ಶೇಕಡ 12ರಿಂದ ಶೇಕಡ 7.5ಕ್ಕೆ ಇಳಿಕೆಯಾಗಲಿದೆ. ಆದರೆ, ಆಮದು ಚಿನ್ನದ ಮೇಲೆ ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ ಬೀಳಲಿದೆ. ಈ ನಡುವೆ, ಕಳೆದ ಆಗಸ್ಟ್​ನಲ್ಲಿ 60,000 ರೂಪಾಯಿ ತಲುಪಲಿದೆ ಎನ್ನುವಷ್ಟು ಎತ್ತರಕ್ಕೇರಿದ್ದ ಚಿನ್ನದ ಬೆಲೆ ಸ್ವಲ್ಪ ಇಳಿಯುತ್ತ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ್ದಾರೆ ಉಮೇಶ್ ಕುಮಾರ್ ಶಿಮ್ಲಡ್ಕ

ಜನರು ‘ಆಪದ್ಧನ’ ಎಂದೇ ಪರಿಗಣಿಸುವ ಚಿನ್ನದ ಬೆಲೆ ಕಾಲಾನುಕ್ರಮದಲ್ಲಿ ಏರಿಕೆಯಾಗುತ್ತಲೇ ಬಂದಿದೆ. ಕರೊನಾ ಸಂಕಷ್ಟ ಕಾಲದಲ್ಲಿ ಕಳೆದ ಆಗಸ್ಟ್​ನಲ್ಲಿ ಅಪರಂಜಿ ಚಿನ್ನದ ಬೆಲೆ ಬೆಂಗಳೂರಿನಲ್ಲಿ 8 ಗ್ರಾಂಗೆ - 57,600 ರೂ.ಗೆ, ಆಭರಣ ಚಿನ್ನದ ಬೆಲೆ- 52,800 ರೂ.ಗೆ ತಲುಪಿತ್ತು. ನಂತರ ಇಳಿಯಲಾರಂಭಿಸಿದ ಚಿನ್ನ-ಬೆಳ್ಳಿ ದರ ಕೇಂದ್ರ ಮುಂಗಡಪತ್ರ ಮಂಡನೆ ದಿನದಿಂದ ಸತತವಾಗಿ ಐದು ದಿನ ಇಳಿಕೆಯನ್ನೇ ದಾಖಲಿಸಿತ್ತು. ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಅಪರಂಜಿ ಚಿನ್ನದ ಬೆಲೆ 8 ಗ್ರಾಂಗೆ 1,784 ರೂಪಾಯಿ, ಆಭರಣ ಚಿನ್ನದ ಬೆಲೆ 1,648 ರೂಪಾಯಿ ಇಳಿದಿತ್ತು. ಇದಾಗಿ ನಡುವೆ ಸ್ವಲ್ಪ ಏರಿಕೆ ದಾಖಲಿಸಿದೆಯಾದರೂ ಕಳೆದ ವಾರ ಕೊನೆಯ ಎರಡು ದಿನ ಆಭರಣ ಚಿನ್ನ 8 ಗ್ರಾಂಗೆ 400 ರೂಪಾಯಿ, ಅಪರಂಜಿ ಚಿನ್ನ 416 ರೂಪಾಯಿ ಇಳಿದಿತ್ತು.

2020ರಲ್ಲಿ ಚಿನ್ನ ಹೀಗಿತ್ತು..

2020ರಲ್ಲಿ ಕರೊನಾ ವೈರಸ್ ಸೋಂಕಿನ ಕಾರಣ ಜಗತ್ತಿನ ಆರ್ಥಿಕತೆ ಭಾರಿ ಹಿಂಜರಿತಕ್ಕೆ ಒಳಗಾಗಿ ತಲ್ಲಣ ಸೃಷ್ಟಿಸಿತು. ಈ ನಡುವೆ, ಏರಿಳಿತಗಳ ನಡುವೆಯೂ ಪ್ರಗತಿ ದಾಖಲಿಸಿದ್ದು, ಷೇರುಪೇಟೆ ಹೂಡಿಕೆ ಮತ್ತು ಚಿನ್ನ ಬೆಳ್ಳಿ ಮೇಲಿನ ಹೂಡಿಕೆ. ಕಳೆದ ವರ್ಷ ಚಿನ್ನದ ಬೆಲೆ ಶೇಕಡ 28 ಏರಿಕೆಯಾಗಿತ್ತು. ಎಂಸಿಎಕ್ಸ್ (ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್)ನಲ್ಲಿ ಗೋಲ್ಡ್ ಫ್ಯೂಚರ್ಸ್ ಬೆಲೆ 10 ಗ್ರಾಂಗೆ ಸಾರ್ವಕಾಲಿಕ ಗರಿಷ್ಠ -56,191 ರೂ.ಗೆ ಏರಿಕೆಯಾಗಿತ್ತು. ಇದು ವರ್ಷದಲ್ಲಿ ಬಹುತೇಕ ಶೇಕಡ 43ರ ಏರಿಕೆಯಾಗಿತ್ತು. ಇನ್ನು ಬೆಳ್ಳಿ ಕಿಲೋಗೆ - 80,000ರೂ. ಸನಿಹ ತಲುಪಿತ್ತು. ಕಳೆದ ವರ್ಷ ಆಗಸ್ಟ್​ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ (31.1034768 ಗ್ರಾಂ) ಚಿನ್ನದ ದರ 2,075 ಡಾಲರ್ ಆಗಿತ್ತು. ಕರೊನಾ ಜಗತ್ತನ್ನು ತಲ್ಲಣಗೊಳಿಸಲಾರಂಭಿಸಿದ ವೇಳೆ ಚಿನ್ನದ ದರ ಇಳಿಕೆಯಾಗಿ, ಮಾರ್ಚ್ ತಿಂಗಳಲ್ಲಿ ಏಳು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಕೋವಿಡ್-19 ಲಸಿಕೆ ಸುದ್ದಿ ಚಿನ್ನದ ದರದ ಮೇಲೆ ಪರಿಣಾಮ ಬೀರಿದ್ದು, ಇದನ್ನು ನವೆಂಬರ್ ಮಧ್ಯಭಾಗದಿಂದ ಗಮನಿಸಬಹುದು.

ಚಿನ್ನದ ಬೇಡಿಕೆ ವಿಚಾರದಲ್ಲಿ 2020ನೇ ಇಸವಿ ಕೆಟ್ಟ ವರ್ಷ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ 2019ರ ಡೇಟಾ ಪ್ರಕಾರ 690.4 ಟನ್ ಚಿನ್ನದ ಬೇಡಿಕೆ ಇತ್ತು. ಆದರೆ, 2020ರಲ್ಲಿ ಈ ಪ್ರಮಾಣ 446 ಟನ್​ಗೆ ಇಳಿಕೆಯಾಗಿತ್ತು. ಆದಾಗ್ಯೂ, ಡಿಸೆಂಬರ್​ನಲ್ಲಿ ಮುಗಿದ ತ್ರೈಮಾಸಿಕದಲ್ಲಿ ಬೇಡಿಕೆ ಪ್ರಮಾಣದಲ್ಲಿ 2019ರ ಮಟ್ಟಕ್ಕೆ ಏರಿಕೆಯಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ.

ಭಾರತದಲ್ಲಿ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುವ ಅಂಶಗಳಿವು...

  • ಚಿನ್ನದ ಪೂರೈಕೆಯಲ್ಲಿ ಇಳಿಕೆ: ಕಳೆದ ಕೆಲವು ವರ್ಷಗಳಲ್ಲಿ ಚಿನ್ನದ ಗಣಿಗಾರಿಕೆ ಕ್ರಮೇಣ ಕಡಿಮೆಯಾಗುತ್ತ ಬಂದಿದ್ದು, ಚಿನ್ನದ ಬೆಲೆಯಲ್ಲೂ ತೀವ್ರ ಏರಿಕೆಯಾಗಿದೆ. ಷೇರು ಮತ್ತು ಬಾಂಡ್​ಗಳಿಗೆ ಪರ್ಯಾಯವಾಗಿ ಚಿನ್ನವನ್ನು ಪರಿಗಣಿಸಲಾರಂಭಿಸಿದ್ದಾರೆ.
ಹಣದುಬ್ಬರ ಮತ್ತು ಬಡ್ಡಿದರ: ಹಣದುಬ್ಬರ ಪ್ರಮಾಣ ಹೆಚ್ಚಾದಾಗ ಹಣದ ಮೌಲ್ಯ ಕುಸಿಯುತ್ತದೆ. ಹಣದುಬ್ಬರ ಮೀರಿ ಲಾಭಾಂಶ ದಾಖಲಿಸಲು ಹೂಡಿಕೆಗಳು ವಿಫಲವಾಗುತ್ತವೆ. ಆಗ ಜನ ಚಿನ್ನದ ಮೇಲೆ ಹೂಡಿಕೆ ಮಾಡಲಾರಂಭಿಸುತ್ತಾರೆ. ಇನ್ನು, ಬಡ್ಡಿದರ ಕುಸಿದರೆ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗುತ್ತದೆ. ಬಡ್ಡಿದರ ಏರಿದರೆ ಚಿನ್ನ ಮಾರಾಟ ಮಾಡಿ ಹಣವನ್ನು ಠೇವಣಿ ಇರಿಸುತ್ತಾರೆ.
  • ಕರೆನ್ಸಿ ಮೌಲ್ಯ ಏರಿಳಿತ: ಚಿನ್ನದ ವಹಿವಾಟು ಅಮೆರಿಕನ್ ಡಾಲರ್​ನಲ್ಲಿ ನಡೆಯುತ್ತದೆ. ಆಮದು ಮಾಡುವಾಗ ಭಾರತದ ರೂಪಾಯಿಗೆ ಬದಲಾಯಿಸಲಾಗುತ್ತದೆ. ಡಾಲರ್ ಎದುರು ರೂಪಾಯಿ ದರದಲ್ಲಿ ಏರಿಳಿತ ಇದ್ದೇ ಇದೆ. ಇದು ಕೂಡ ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತದೆ.
  • ಆರ್​ಬಿಐನಿಂದ ಬೇಡಿಕೆ: ಭಾರತ ಸರ್ಕಾರ ಚಿನ್ನದ ಮೀಸಲು ಇಟ್ಟುಕೊಂಡಿದೆ. ಡಾಲರ್ ಮೌಲ್ಯ ಕುಸಿಯುವಾಗ ಬಹುತೇಕ ರಾಷ್ಟ್ರಗಳು ಚಿನ್ನದ ಮೇಲೆ ಹೂಡಿಕೆ ಹೆಚ್ಚಿಸುತ್ತವೆ. ಜಾಗತಿಕ ಹಣಕಾಸು ಬಿಕ್ಕಟ್ಟು ಏರ್ಪಟ್ಟ ಸಂದರ್ಭದಲ್ಲಿ ಚಿನ್ನದ ದರದಲ್ಲಿ ಭಾರಿ ಏರಿಕೆಯಾಗತೊಡಗಿದ್ದನ್ನು ಗಮನಿಸಬಹುದು.
  • ದುರ್ಬಲ ಹಣಕಾಸು ಮಾರುಕಟ್ಟೆ: ರಿಯಲ್​ಎಸ್ಟೇಟ್, ಬಾಂಡ್​ಗಳು, ಷೇರುಗಳ ಜತೆಗೆ ಚಿನ್ನದ್ದು ಎಣ್ಣೆ ಸೀಗೇ ಕಾಯಿ ಸಂಬಂಧ. ಯಾವುದೇ ಹಣಕಾಸು ಬಿಕ್ಕಟ್ಟು ಅಥವಾ ಹಣಕಾಸೇತರ ಬಿಕ್ಕಟ್ಟು ಉಂಟಾದಾಗ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಭಾರತದಂಥ ರಾಷ್ಟ್ರಗಳು ಸಂಪೂರ್ಣವಾಗಿ ಆಮದು ಚಿನ್ನದ ಮೇಲೆ ಅವಲಂಬಿತವಾಗಿವೆ. ಇನ್ನು, ದರದ ವಿಷಯದಲ್ಲಿ ಲಂಡನ್ ಚಿನ್ನದ ದರವನ್ನು ಅವಲಂಬಿಸಿವೆ.
  • ಭಾರತದ ಆಭರಣ ಮಾರುಕಟ್ಟೆ: ಭಾರತದಲ್ಲಿ ಮದುವೆ, ಹಬ್ಬಗಳ ಋತುವಿನ ಸಂಭ್ರಮ ಚಿನ್ನಾಭರಣದೊಂದಿಗೆ ಜೋಡಿಸಿಕೊಂಡಿದೆ. ಈ ಋತುಗಳಲ್ಲಿ ಚಿನ್ನದ ಬೇಡಿಕೆಯೂ ಹೆಚ್ಚು, ದರವೂ ಹೆಚ್ಚು.
  • ಎಲ್ಲರಿಗೂ ಅನುಕೂಲ ಫೆ.1ರಂದು ಮಂಡಿಸಲಾದ ಕೇಂದ್ರ ಬಜೆಟ್​ನಲ್ಲಿ ಪ್ರತಿ ಗ್ರಾಂ ಚಿನ್ನಾಭರಣದ ಮೇಲಿನ ಆಮದು ಸುಂಕವನ್ನು ಶೇ.12.5ರಿಂದ ಶೇ.10ಕ್ಕೆ ಇಳಿಸಲಾಗಿದೆ. ಇದರಿಂದ

    ಪ್ರತಿ ಗ್ರಾಂ ಚಿನ್ನಾಭರಣ ಮೇಲೆ ಕನಿಷ್ಠ 100 ರೂ.ನಿಂದ ಗರಿಷ್ಠ 500 ರೂ.ವರೆಗೆ ದರ ಇಳಿಕೆಯಾಗಲಿದೆ. ಏ.1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಇದರಿಂದ ರಫ್ತು ಪ್ರಮಾಣ, ಚಿನ್ನಾಭರಣ ವಹಿವಾಟು ಹಾಗೂ ವಿದೇಶಿ ವಿನಿಮಯ ಏರಿಕೆಯಾಗಲಿದ್ದು, ಗ್ರಾಹಕರಿಗೂ ಅನುಕೂಲವಾಗುವ ಜತೆಗೆ ಆತ್ಮನಿರ್ಭರ ಯೋಜನೆಯ ಪರಿಕಲ್ಪನೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ. ಶೇ.10-15 ಶ್ರೀಮಂತರು ಹಾಗೂ ಶೇ.85 ಮಧ್ಯಮ ವರ್ಗದವರು ಸಣ್ಣಪುಟ್ಟ ಉಳಿತಾಯಕ್ಕೆ ಚಿನ್ನಾಭರಣಗಳನ್ನು ಖರೀದಿಸುತ್ತಾರೆ. ಲಾಕ್​ಡೌನ್ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಚಿನ್ನವೇ ಆರ್ಥಿಕ ವ್ಯವಸ್ಥೆಗೆ ಮೂಲ ಆಧಾರವಾಗಿತ್ತು. ಈಗ ಆಮದು ಸುಂಕ ಇಳಿಸಿದ್ದರಿಂದ ಚಿನ್ನಾಭರಣ ಖರೀದಿಸುವ ಗ್ರಾಹಕರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. | ಬಿ.ರಾಮಾಚಾರಿ ಪ್ರಧಾನ ಕಾರ್ಯದರ್ಶಿ ರಾಜ್ಯ ಆಭರಣ ವರ್ತಕರ ಒಕ್ಕೂಟ
    ಮುಂದೇನು? ಸರಕುಪೇಟೆ ವಿಶ್ಲೇಷಕರ ಲೆಕ್ಕಾಚಾರ ಪ್ರಕಾರ, ಚಿನ್ನದ ದರ ಸದ್ಯ ಗರಿಷ್ಠ ಮಟ್ಟದಲ್ಲೇ ಇದ್ದು, ಮುಂದಿನ ಕೆಲವು ತಿಂಗಳ ಅವಧಿಯಲ್ಲಿ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಅರ್ಥವ್ಯವಸ್ಥೆ ಚೇತರಿಕೆಗೆ ಹೆಚ್ಚಿನ ಉತ್ತೇಜನ ಕ್ರಮಗಳ ನಿರೀಕ್ಷೆ ಮತ್ತು ದುರ್ಬಲವಾಗಿರುವ ಅಮೆರಿಕನ್ ಡಾಲರ್ ಕಾರಣ ಚಿನ್ನದ ಬೆಲೆಯಲ್ಲಿ ಏರಿಕೆ ನಿರೀಕ್ಷಿಸಬಹುದು. ಹೂಡಿಕೆ ಮಾಡುವುದಕ್ಕೂ ಇದು ಸಕಾಲ.

    10 ವರ್ಷದಲ್ಲಿ 145% ಲಾಭ!

    ಭಾರತೀಯರ ಬದುಕಿನಲ್ಲಿ ಚಿನ್ನಕ್ಕೆ ತನ್ನದೇ ಆದ ಸ್ಥಾನವಿದೆ. ಚಿನ್ನದ ಮೇಲೆ ಬಡವರೂ ಹೂಡಿಕೆ ಮಾಡುತ್ತಾರೆ. ಕಳೆದ 10 ವರ್ಷಗಳ ಅವಧಿಯಲ್ಲಿ ಚಿನ್ನದ ದರದಲ್ಲಿ ಶೇಕಡ 900ಕ್ಕೂ ಹೆಚ್ಚು ಏರಿಕೆ ದಾಖಲಾಗಿದೆ. ಕಾಲಾನುಕ್ರಮದಲ್ಲಿ ಚಿನ್ನದ ವಹಿವಾಟು ಗಟ್ಟಿರೂಪದಲ್ಲಷ್ಟೇ ಅಲ್ಲ ಈಗ ಷೇರುಪೇಟೆಯಲ್ಲಿ ಡಿಜಿಟಲ್ ರೂಪದಲ್ಲೂ ವಹಿವಾಟಿಗೆ ಒಳಗಾಗಿದೆ. ಇತರೆ ಹೂಡಿಕೆಗಳಿಗೆ ಹೋಲಿಸಿದರೆ ದೀರ್ಘಾವಧಿಯಲ್ಲಿ ಉತ್ತಮ ಲಾಭವನ್ನೇ ಹೂಡಿಕೆದಾರರಿಗೆ ಮಾಡಿಕೊಟ್ಟಿದೆ. ಕಳೆದ 10 ವರ್ಷದ ಡೇಟಾವನ್ನು ಗಮನಿಸಿದರೆ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಯ ವಾರ್ಷಿಕ ಬೆಳವಣಿಗೆ ದರ (ಕಾಂಪೌಂಡ್ ಆನ್ಯುವಲ್ ಗ್ರೋತ್ ರೇಟ್-ಸಿಎಜಿಆರ್) ಶೇಕಡ 6.01 (2020 ಮಾರ್ಚ್ 16ರಂತೆ) ಆಗಿದ್ದು ನಿಶ್ಚಿತ ರಿಟರ್ನ್ಸ್ 79% ಕಾಯ್ದುಕೊಂಡಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸಿಎಜಿಆರ್ 6.22%ರಂತೆ 82% ರಿಟರ್ನ್ ತೋರಿಸಿದೆ. ಈ ಅವಧಿಯಲ್ಲಿ ಚಿನ್ನದ ಸಿಎಜಿಆರ್ 9.4% ದರದೊಂದಿಗೆ 145% ರಿಟರ್ನ್ ದಾಖಲಿಸಿದೆ!

    ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
    www.vijayavani.net