

ನವದೆಹಲಿ: ರಾಜಧಾನಿ ದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಮತ್ತೆ ಜಿಗಿತ ಕಂಡಿವೆ.
ಬೆಳ್ಳಿ ಧಾರಣೆಯು ಕೆ.ಜಿ.ಗೆ 2,300 ರೂ. ಹೆಚ್ಚಳವಾಗಿ, 94 ಸಾವಿರ ರೂ.ಗೆ ತಲುಪಿದೆ. 10 ಗ್ರಾಂ ಚಿನ್ನದ ದರವು (ಶೇ.99.9 ಪರಿಶುದ್ಧತೆ) 500 ರೂ. ಏರಿಕೆಯಾಗಿ 81,300 ರೂ.ಗೆ ಮಾರಾಟವಾಗಿದೆ. ಸ್ಟಾಂಡರ್ಡ್ ಚಿನ್ನದ (ಶೇ.99.5 ಪರಿಶುದ್ಧತೆ) ಬೆಲೆ ಕೂಡ 500 ರೂ. ಏರಿಕೆಯಾಗಿ, 80,900 ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಆಭರಣ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಚಿನ್ನದ ಖರೀದಿ ಪ್ರಮಾಣ ಹೆಚ್ಚಳವಾಗಿದೆ. ಅಲ್ಲದೆ ರೂಪಾಯಿ ಮೌಲ್ಯವೂ ಇಳಿಕೆಯಾಗಿದೆ. ಇದರಿಂದ ಹಳದಿ ಲೋಹದ ದರ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.